ಬೆಳ್ತಂಗಡಿ: ವಿದ್ಯಾವಂತರು ವಿಚಾರವಂತರಾಗುವುದರ ಜೊತೆಗೆ ಆಚಾರವಂತರಾಗಿ ಬದುಕಬೇಕು. ಕಲಿತ ವಿದ್ಯೆ ಆಚಾರವಾಗಿ ಮೂಡಿ ಬಂದಾಗ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು.ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಭಾಂಗಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ಹಾಗು ಮಾರ್ಗದರ್ಶನದಲ್ಲಿ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಕರ್ನಾಟಕದಾದ್ಯಂತ ಅರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಮಾಡುವ ಬೃಹತ್ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.ಧರ್ಮಸ್ಥಳ ಕ್ಷೇತ್ರವು ರಾಜ್ಯಾದ್ಯಂತ 56 ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣವನ್ನು ಹಲವು ದಶಕಗಳಿಂದ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶುಭ ಹಾರೈಸಿದರು.ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ್ ಟಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಇದ್ದರು.ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಪ್ರೊ.ಎಸ್. ಎನ್ ಕಾಕತ್ಕಾರ್ ಸ್ವಾಗತಿಸಿದರು. ಉಪನ್ಯಾಸಕಿ ನಫಿಸತ್ ನಿರೂಪಿಸಿದರು. ಡೀನ್ ಸೌಮ್ಯ ಬಿ.ಪಿ ವಂದಿಸಿದರು.ಒಂದೂವರೆ ಕೋಟಿ ರು.ಗೂ ಅಧಿಕ ಮೌಲ್ಯದ ಸ್ಕಾಲರ್‌ಶಿಪ್ ಎಸ್‌ಡಿಎಂ ಸಂಸ್ಥೆಯ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮಾಜಮುಖಿ ಚಿಂತನೆಯ ಫಲವಾಗಿ 1985 ರಿಂದ ಆರಂಭಗೊಂಡ ಈ ವಿಶಿಷ್ಟ ಯೋಜನೆಯೂ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್ ಮೂಲಕ ಕರ್ನಾಟಕದಾದ್ಯಂತ ಆರ್ಥಿಕವಾಗಿ ಹಿಂದುಳಿದ ಮತ್ತು ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪ್ರತೀ ವರ್ಷ ಕೊಡಮಾಡುತ್ತಿದೆ. 2026ರ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ 1, 549 ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು 17, 49, 750 ರು. ರುಪಾಯಿಯಂತೆ ವರ್ಷಕ್ಕೆ 1,74,97,500 ರಷ್ಟು ವಿದ್ಯಾರ್ಥಿ ವೇತನವನ್ನು ರಾಜ್ಯಾದ್ಯಂತ ಇರುವ ಒಟ್ಟು 168 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.ಮೆಡಿಕಲ್ ಕೋರ್ಸ್ ಮಾಡುತ್ತಿರುವ 200 ವಿದ್ಯಾರ್ಥಿಗಳು, ಎಂಜಿನಿಯರಿಂಗ್ ವಿಭಾಗದ 563 ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿಭಾಗದ 273 ವಿದ್ಯಾರ್ಥಿಗಳು, ಐಟಿಐ ವಿಭಾಗದ 166 ವಿದ್ಯಾರ್ಥಿಗಳು, ಡಿಪ್ಲೊಮಾ ವಿಭಾಗದ 96 ವಿದ್ಯಾರ್ಥಿಗಳು ಸೇರಿದಂತೆ ಇತರೆ ಕಾನೂನು, ನರ್ಸಿಂಗ್, ಪಶು ವೈದ್ಯಕೀಯ, ಕೃಷಿ, ಫಿಸಿಯೋಥೆರಪಿ, ಬಿಇಡ್ ವಿಭಾಗದಿಂದ 236 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 1, 549 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ವೇತನವನ್ನು ಪ್ರತಿ ತಿಂಗಳು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.