ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸೋಮವಾರ ದೊಡ್ಡಬಳ್ಳಾಪುರ ತಾಲೂಕು ಹಾಗೂ ಗ್ರಾಮಾಂತರ ಜಿಲ್ಲೆಯಾದ್ಯಂತ ರೈತ ಸಮುದಾಯ ಸಂಭ್ರಮದಿಂದ ಆಚರಿಸಿದೆ.ಗ್ರಾಮಗಳಲ್ಲಿ ರೈತರು ಕಾಟಮರಾಯನ ಪೂಜೆ ನೆರವೇರಿಸಿ ಸಾಂಪ್ರದಾಯಿಕ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿದರು. ಊರಿನ ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್‍ಯಕ್ರಮಗಳನ್ನು ನೆರವೇರಿಸಿದರು. ಸಂಜೆ ರೈತರು ಹೊಲಗಳ ಸಮೀಪ ಹಾಗೂ ಗ್ರಾಮಗಳಲ್ಲಿ ಎತ್ತುಗಳಿಗೆ ಕಿಚ್ಚು ಹಾಯಿಸುವ ಮೂಲಕ ಗಮನ ಸೆಳೆದರು. ಎತ್ತುಗಳಿಗೆ ಬಣ್ಣದ ಕಾಗದ, ಬಲೂನು, ಹೂಗಳಿಂದ ಅಲಂಕರಿಸಿ, ಅರಿಶಿಣ-ಕುಂಕುಮ ಇಟ್ಟು ಪೂಜೆ ನೆರವೇರಿಸಲಾಯಿತು. ಹಲವು ಬಸವಣ್ಣ ದೇಗುಲಗಳಲ್ಲಿ ಜೋಡೆತ್ತುಗಳ ಪೂಜೆ ಆಯೋಜನೆಗೊಂಡಿತ್ತು.
ತಾಲೂಕಿನ ಕುಂಟನಹಳ್ಳಿ, ನಾಗಸಂದ್ರ, ತೂಬಗೆರೆ, ಸಾಸಲು, ದೊಡ್ಡಬೆಳವಂಗಲ, ತಿಪ್ಪಾಪುರ ಸೇರಿದಂತೆ ವಿವಿಧೆಡೆ ಎತ್ತುಗಳಿಗೆ ಕಿಚ್ಚಾಯಿಸುವ ಕಾರ್‍ಯಕ್ರಮ ನಡೆಯಿತು.ಹಳ್ಳಿಗಳಲ್ಲಿ ಸುಗ್ಗಿ ಗ್ರಾಮೀಣ ಹಬ್ಬ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಗ್ಗಿ ಗ್ರಾಮೀಣ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಬ್ಬ ಆಚರಣೆ, ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಕೆಲವೆಡೆ ಹೊಸ ಫಸಲು ರಾಶಿ ಹಾಕಿ, ಕಬ್ಬಿನ ಮಂಟಪ ಕಟ್ಟಲಾಗಿತ್ತು. ಸಾಂಪ್ರದಾಯಿಕವಾಗಿ ಮಡಿಕೆ-ಕುಡಿಕೆಗಳನ್ನು ಅಲಂಕರಿಸಿ ಧಾನ್ಯದ ರಾಶಿಯ ಸುತ್ತ ಇರಿಸಲಾಗಿತ್ತು. ತಳಿರು-ತೋರಣಗಳಿಂದ ಬೀದಿಯನ್ನು ಸಿಂಗರಿಸಿ ಸಂಭ್ರಮಿಸಲಾಯಿತು. ಅಲಂಕೃತ ಜೋಡೆತ್ತುಗಳ ಮೆರವಣಿಗೆ ನಡೆಸಿ, ಕೃಷಿ ಸಂಸ್ಕೃತಿ ಜೀವಾಳವಾಗಿರುವ ಎತ್ತುಗಳು ಹಾಗೂ ಇತರೆ ಕೃಷಿ ಸಾಧನ ಪರಿಕರಗಳನ್ನು ಪೂಜಿಸಲಾಯಿತು.ಈ ವೇಳೆ ಮಾತನಾಡಿದ ಗ್ರಾಮದ ಮುಖಂಡರು, ಸಂಕ್ರಾಂತಿ ಗ್ರಾಮೀಣ ಜನರ ಸಂಸ್ಕೃತಿಯ ಬಹುದೊಡ್ಡ ಉತ್ಸವವಾಗಿದೆ. ಸುಗ್ಗಿ ಹಬ್ಬವೆಂದೇ ಹೆಸರಾದ ಈ ಹಬ್ಬದಲ್ಲಿ ವರ್ಷ ಪೂರ್ತಿ ರೈತ ಹೊಲಗದ್ದೆಗಳಲ್ಲಿ ಅವಿರತ ಪರಿಶ್ರಮ ವಹಿಸಿ ಬೆಳೆದ ಬೆಳೆಯ ರಾಶಿ ಹಾಕಿ ಪೂಜಿಸಲಾಗುತ್ತದೆ. ಕಬ್ಬಿನ ಮಂಟಪ ಕಟ್ಟಿ ಬದುಕು ಕಬ್ಬಿನಷ್ಟೇ ಸಿಹಿಯಾಗಿರಲಿ ಎಂದು ಹರಸಲಾಗುತ್ತದೆ. ರೈತ ಸಂವೇದನೆಯಎಲ್ಲ ವಸ್ತುಗಳನ್ನೂ ಪೂಜನೀಯ ಮನೋಭಾವದಲ್ಲಿ ನೋಡುವುದು ವಿಶೇಷ ಎಂದರು.