ಸಾರಾಂಶ
ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರು ತಮ್ಮ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಕ್ಷೇತ್ರದ ಕಾರ್ಯ ನಿರ್ವಹಿಸಲು ಪವರ್ ಆಫ್ ಅಟಾರ್ನಿ ಕೊಟ್ಟಿದ್ದಾರೆಯೇ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಶಂಕರ ಕೋಮಾರ ದೇಸಾಯಿ ಪ್ರಶ್ನಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರದ ಅನುದಾನದ ಕಾಮಗಾರಿಗಳನ್ನು ಶಿವಲೀಲಾ ಕುಲಕರ್ಣಿ ಭೂಮಿಪೂಜೆ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಿರುವ ಬಗ್ಗೆ ತಾವು ಪ್ರತಿಭಟನೆ ಮಾಡಿದ್ದೇವು. ಇದಕ್ಕೆ ಪ್ರತಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ ಹಾಗೂ ಈಶ್ವರ ಶಿವಳ್ಳಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಬಗ್ಗೆ ಅನವಶ್ಯಕ ಹೇಳಿಕೆ ಹೇಳಿದ್ದಾರೆ. ಶಿವಲೀಲಾ ಅವರಿಗೆ ಯಾವುದೇ ಸಂವಿಧಾನ ಬದ್ಧ ಅಧಿಕಾರ ಇರದೇ ಇದ್ದರೂ ಅವರು ಮಾಡಿರುವ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ಬಗ್ಗೆ ತಾವು ಪ್ರಶ್ನಿಸಿದ್ದು ತಪ್ಪಾ ಎಂದು ಪ್ರತಿಪಾದಿಸಿದರು.ಶಿವಲೀಲಾ ಕುಲಕರ್ಣಿ ಹಿರಿಯರ ಒತ್ತಾಯದ ಮೇಲೆ ಬರೀ ಭೂಮಿಪೂಜೆ ಮಾತ್ರ ಮಾಡಿದ್ದಾರೆ. ತಪ್ಪಾ ಎಂದು ಕೈ ಮುಖಂಡರು ಪ್ರಶ್ನಿಸಿದ್ದಾರೆ. ಆದರೆ, ಅಮೃತ ದೇಸಾಯಿ ಶಾಸಕರಿದ್ದಾಗ ಬಿಡುಗಡೆಯಾದ ಮಲೆನಾಡು ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹೆಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆ ಉದ್ಘಾಟಿಸಿರುವ ಫೋಟೋ ಹಾಗೂ ಬ್ಯಾನರ್ ಸಮೇತ ಕೋಮಾರ ದೇಸಾಯಿ ಪ್ರದರ್ಶಿಸಿದರು.
ಜತೆಗೆ ಉಪ್ಪಿನ ಬೆಟಗೇರಿ, ಅಮ್ಮಿನಬಾವಿ, ನರೇಂದ್ರ ಸೇರಿದಂತೆ ಹಲವು ಗ್ರಾಪಂಗಳಲ್ಲಿ ಗ್ರಾಪಂ ಅಧ್ಯಕ್ಷರುಗಳ ಖುರ್ಚಿ ಮೇಲೆ ಕುಳಿತು ಪಿಡಿಓ ಹಾಗೂ ಅಧಿಕಾರಿಗಳ ಸಭೆ ನಡೆಸಿರುವ ಭಾವಚಿತ್ರಗಳನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಜತೆಗೆ ಬಿಜೆಪಿ ಅವಧಿಯಲ್ಲಿ ಆಗಿರುವ ಅನುದಾನ ಹಾಗೂ ಕಾಮಗಾರಿಗಳನ್ನು ನಾವು ಬಿಡುಗಡೆ ಮಾಡಲು ಸಿದ್ಧರಿದ್ದು, ತಮ್ಮ ಅವಧಿಯಲ್ಲಿ ಏನು ಅನುದಾನ ಹಾಗೂ ಕಾರ್ಯಗಳಾಗಿರುವ ಬಗ್ಗೆ ಮಾಹಿತಿ ಬಿಡುಗಡೆ ಮಾಡುತ್ತಾರೆಯೇ ಎಂದು ಕೋಮಾರದೇಸಾಯಿ ಸವಾಲು ಹಾಕಿದರು.ಬ್ಲಾಕ್ ಕಾಂಗ್ರೆಸ್ ಇಬ್ಬರೂ ಅಧ್ಯಕ್ಷರು ಬಿಜೆಪಿಯಿಂದಲೇ ಕಾಂಗ್ರೆಸ್ಸಿಗೆ ಹೋದವರು. ಗಾಳಿಯಲ್ಲಿ ಗುಂಡು ಹೊಡೆದ ರೀತಿಯಲ್ಲಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರೆ ಸಾಕ್ಷಿ ಸಮೇತ ತೋರಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಶೆಳಕೆ, ಶೃತಿ ಬೆಳ್ಳಕ್ಕಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.ಅಮೃತ ದೇಸಾಯಿ ಶಾಸಕರಿದ್ದಾಗ ತಮ್ಮ ಪಕ್ಷದ ಮುಖಂಡರಾದ ಶಂಕರ ಮುಗದ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಿದರು. ತವನಪ್ಪ ಅಷ್ಟಗಿ ಅವರಿಗೆ ಮಲೆನಾಡು ಪ್ರದೇಶಾಭಿವೃದ್ಧಿಗೆ ಅಧ್ಯಕ್ಷರನ್ನಾಗಿ ಮಾಡಿದರು. ಆದರೆ, ವಿನಯ ಕುಲಕರ್ಣಿ ಅವರು ತಮ್ಮ ಪತ್ನಿ ಹಾಗೂ ಪುತ್ರಿಗೆ ಮಾತ್ರ ಪಕ್ಷದಿಂದ ಅಧಿಕಾರ ನೀಡಿದ್ದು, ಈ ಬಗ್ಗೆ ತಮ್ಮ ಮುಖಂಡರ ವಿರುದ್ಧ ಪ್ರಶ್ನೆ ಮಾಡುವ ಧೈರ್ಯ ಕಾಂಗ್ರೆಸ್ಸಿನಲ್ಲಿ ಯಾರಿಗಿದೆ? ಎಂದು ಕೋಮಾರ ದೇಸಾಯಿ ಹೇಳಿದರು.