ಕಲಬೆರಕೆ ಹಾಲಿನಪುಡಿ ಹಗರಣದ ತನಿಖೆ ಹಳ್ಳ ಹಿಡಿದಿರುವಂತೆ ಕಂಡುಬರುತ್ತಿದೆ. ಮೇಲ್ಮುಖವಾಗಿ ಸಾಗಬೇಕಿದ್ದ ಪೊಲೀಸರ ತನಿಖೆ ಗಂಭೀರತೆಯನ್ನೇ ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ಹಾಲು-ನೀರು ಹಗರಣ, ನೇಮಕಾತಿ ಹಗರಣದ ಮಾದರಿಯಲ್ಲೇ ಪ್ರಾಥಮಿಕ ಹಂತದಲ್ಲೇ ಈ ಹಗರಣವನ್ನೂ ಮುಚ್ಚಿಹಾಕಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಲಬೆರಕೆ ಹಾಲಿನಪುಡಿ ಹಗರಣದ ತನಿಖೆ ಹಳ್ಳ ಹಿಡಿದಿರುವಂತೆ ಕಂಡುಬರುತ್ತಿದೆ. ಮೇಲ್ಮುಖವಾಗಿ ಸಾಗಬೇಕಿದ್ದ ಪೊಲೀಸರ ತನಿಖೆ ಗಂಭೀರತೆಯನ್ನೇ ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ಹಾಲು-ನೀರು ಹಗರಣ, ನೇಮಕಾತಿ ಹಗರಣದ ಮಾದರಿಯಲ್ಲೇ ಪ್ರಾಥಮಿಕ ಹಂತದಲ್ಲೇ ಈ ಹಗರಣವನ್ನೂ ಮುಚ್ಚಿಹಾಕಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ. ಇದರ ಪರಿಣಾಮ ತನಿಖಾ ಸಂಸ್ಥೆಗಳ ಬಗ್ಗೆ ಸಾರ್ವಜನಿಕರ ವಿಶ್ವಾಸ ದಿನೇ ದಿನೇ ಕುಸಿಯಲಾರಂಭಿಸಿದೆ.ಕಲಬೆರಕೆ ಹಾಲಿನಪುಡಿ ಪ್ರಕರಣದ ಎಫ್ಐಆರ್ ದಾಖಲಾಗಿ ಸರಿ ಸುಮಾರು ಎಂಟು ತಿಂಗಳಾಗಿದೆ. ಮನ್ಮುಲ್ ಅಧಿಕಾರಿ ಪ್ರದೀಪ್ಕುಮಾರ್ ಜಾಧವ್ ಮತ್ತು ನಿರ್ದೇಶಕ ಡಾಲು ರವಿ ಅವರ ಸಂಭಾಷಣೆಯ ಆಡಿಯೋ ಬಿಡುಗಡೆಯಾದ ನಂತರದಲ್ಲಿ ಈ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿತ್ತು. ಪ್ರದೀಪ್ಕುಮಾರ್ ಜಾಧವ್ ಕಲಬೆರಕೆ ಹಾಲಿನಪುಡಿ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ. ಇದರಲ್ಲಿ ಶಾಮೀಲಾಗಿರುವವರ ಬಗ್ಗೆ ಓಪನ್ ಸ್ಟೇಟ್ಮೆಂಟ್ ನೀಡುವುದಕ್ಕೂ ಸಿದ್ಧನಿದ್ದೇನೆ. ತಪ್ಪು ಮಾಡಿದ ಯಾರನ್ನೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಆಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದರು. ಆದರೂ, ತನಿಖೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಡಿಯೋದಲ್ಲಿ ಜಾಧವ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಗ್ಗೆ ಹೆಸರನ್ನು ಹೇಳಿದ್ದರೆಂಬ ಕಾರಣಕ್ಕೆ ಅವರನ್ನು ಬಂಧಿಸಲಾಯಿತು. ಇನ್ನುಳಿದಂತೆ ಪ್ರಕರಣ ಸಂಬಂಧ ಜಾಧವ್ ಅವರ ಬಳಿ ಇರುವ ಸಾಕ್ಷ್ಯಗಳೇನು, ಇನ್ನೂ ಯಾರ್ಯಾರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಮುಂದೆ ಯು.ಸಿ.ಶಿವಕುಮಾರ್ ಕೊಟ್ಟ ಹೇಳಿಕೆಗಳೇನು ಎಂಬ ಬಗ್ಗೆ ಇದುವರೆಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪೊಲೀಸರು ತನಿಖೆ ಹೆಸರಿನಲ್ಲಿ ಕಾಲವನ್ನು ದೂಡುತ್ತಲೇ ಇದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಿರುವುದನ್ನು ನೋಡಿದಾಗ ತನಿಖೆ ಹಾದಿ ತಪ್ಪಿರುವ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ.ಮನ್ಮುಲ್ನಲ್ಲಿ ೧೧೦ ಟನ್ ಹಾಲಿನಪುಡಿ ಮಾರಾಟದಿಂದ ಬಂದ ಒಟ್ಟು ಹಣವೆಷ್ಟು. ಅದು ಯಾರಿಗೆಲ್ಲಾ ಹಂಚಿಕೆಯಾಗಿದೆ ಎನ್ನುವುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಮತ್ತೊಬ್ಬ ಮನ್ಮುಲ್ ಅಧಿಕಾರಿ ರಾಮಕೃಷ್ಣ ಅವರನ್ನು ಇದುವರೆಗೂ ಪೊಲೀಸರು ಬಂಧಿಸಿಲ್ಲ. ಪ್ರಕರಣ ಬಯಲಿಗೆ ಬಂದ ದಿನದಿಂದಲೂ ಆತ ನಾಪತ್ತೆಯಾಗಿದ್ದಾನೆ. ಪೊಲೀಸರು ಇನ್ನೂ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಲೇ ಇದ್ದಾರೆ. ಹಾಗಾದರೆ ಪೊಲೀಸ್ ಇಲಾಖೆ ಒಬ್ಬ ಸಾಮಾನ್ಯ ಅಧಿಕಾರಿಯನ್ನು ಬಂಧಿಸಲು ಸಾಧ್ಯವಾಗದಷ್ಟು ಅಸಮರ್ಥವಾಗಿದೆಯೇ ಅಥವಾ ರಾಜಕೀಯ ಪ್ರಭಾವ ಪೊಲೀಸರ ಕೈಯ್ಯನ್ನು ಕಟ್ಟಿಹಾಕಿದೆಯೇ ಎಂದು ಪ್ರಶ್ನಿಸುವಂತಾಗಿದೆ.
ಹಾಲಿನ ಪುಡಿ ಮಾರಾಟದಿಂದ ಬಂದ ಹಣದಲ್ಲಿ ಪ್ರದೀಪ್ಕುಮಾರ್ ಜಾಧವ್ ನೀಡಿದ್ದ ೭೫ ಲಕ್ಷ ರು. ಹಣವನ್ನು ಯು.ಸಿ.ಶಿವಕುಮಾರ್ ಒಬ್ಬರೇ ಇಟ್ಟುಕೊಂಡಿರುವುದಾಗಿ ಜಿಲ್ಲಾ ಆರಕ್ಷಕ ಅಧೀಕ್ಷಕರು ಮಾಹಿತಿ ನೀಡಿದ್ದಾರೆ. ಉಳಿಕೆ ೨.೨೫ ಕೋಟಿ ರು. ಹಣ ಯಾರಿಗೆಲ್ಲಾ ಹಂಚಿಕೆಯಾಯಿತು ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಇದು ಹೊರಬಿದ್ದರೆ ದೊಡ್ಡವರ ಬಂಡವಾಳ ಎಲ್ಲಿ ಬಯಲಾಗುವುದೋ ಎಂಬ ಆತಂಕ ಒಂದೆಡೆಯಾದರೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದೆಂಬ ಭೀತಿಯೂ ಕಾರಣವಾಗಿದೆ. ಹಾಗಂತ ನಡೆದ ಹಗರಣಗಳನ್ನೆಲ್ಲಾ ಮುಚ್ಚಿಹಾಕುತ್ತಾ ಹೋದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಹಕಾರ ಸಂಸ್ಥೆಗಳ ಮೇಲೆ ನಂಬಿಕೆ, ವಿಶ್ವಾಸ ಮೂಡುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.ಕಲಬೆರಕೆ ಹಾಲಿನಪುಡಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಒತ್ತಾಯಿಸಿವೆ. ಸಿಬಿಐಗೆ ಕೊಡಲೊಪ್ಪದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ನಮ್ಮ ಪೊಲೀಸರು ತನಿಖೆ ನಡೆಸುವುದಕ್ಕೆ ಶಕ್ತರಿದ್ದಾರೆ. ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಗುಡುಗುತ್ತಾರೆ.
ಆದರೆ, ವಾಸ್ತವದಲ್ಲಿ ಚಿತ್ರಣವೇ ಬೇರೆಯಾಗಿದೆ. ಸಚಿವರು ಹೇಳಿದ ರೀತಿಯಲ್ಲಿ ಪೊಲೀಸರಿಂದ ತನಿಖೆ ವೇಗವಾಗಿ ನಡೆಯುತ್ತಿಲ್ಲ. ಸರಿಯಾದ ಮಾರ್ಗದಲ್ಲಿ ತನಿಖೆ ನಡೆದಿದ್ದರೆ, ಹಗರಣದಲ್ಲಿ ಇನ್ನಷ್ಟು ರೂವಾರಿಗಳ ಹೆಸರು ಹೊರಬರಬೇಕಿತ್ತು. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ರಾಮಕೃಷ್ಣರವರ ಬಂಧನವಾಗಬೇಕಿತ್ತು. ಇದಾವುದೂ ನಡೆಯುದೆ ಇಡೀ ಪ್ರಕರಣದ ದಿಕ್ಕು ತಪ್ಪಿಸುತ್ತಿರುವಂತೆ ಕಾಣುತ್ತಿದೆ. ಕಾಣದ ಕೈಗಳು ದೂರದಲ್ಲಿಯೇ ಕುಳಿತು ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಬಹಳ ವ್ಯವಸ್ಥಿತವಾಗಿ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.ಮನ್ಮುಲ್ ನೀರು-ಹಾಲು ಹಗರಣದ ತನಿಖೆಯನ್ನೂ ಸಿಐಡಿಗೆ ವಹಿಸಿ ನಾಲ್ಕೈದು ವರ್ಷಗಳೇ ಕಳೆಯಿತು. ಪ್ರಕರಣದ ತನಿಖೆ ಏನಾಯಿತು ಒಬ್ಬರಿಗೂ ಗೊತ್ತಿಲ್ಲ. ಅದು ಸಾರ್ವಜನಿಕವಾಗಿ ಮಾಸಿಹೋದ ಪ್ರಕರಣವಾಗಿದೆ. ಅದೇ ರೀತಿ ಜನಮಾನಸದಿಂದ ಮಾಸಿ ಹೋಗುವವರೆಗೆ ಈ ಪ್ರಕರಣವನ್ನೂ ತನಿಖೆ ಹೆಸರಿನಲ್ಲಿ ಮುಂದೂಡುವುದು ತಂತ್ರಗಾರಿಕೆಯೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.ಕಲಬೆರಕೆ ಹಾಲಿನ ಪುಡಿ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಇದರಲ್ಲಿ ರಾಜಿ ಆಗುವುದೂ ಇಲ್ಲ. ಸರಿಯಾದ ಮಾರ್ಗದಲ್ಲಿ ತನಿಖೆ ನಡೆಯುತ್ತಿದೆ. ಗಣೇಶ ವಿಸರ್ಜನೆ, ದಸರಾ ಬಂದೋಬಸ್ತ್ ಸೇರಿದಂತೆ ಪೊಲೀಸರ ಮೇಲೆ ಕಾರ್ಯದ ಒತ್ತಡ ಹೆಚ್ಚಿರುವುದರಿಂದ ತನಿಖೆ ಸ್ವಲ್ಪ ವಿಳಂಬವಾಗಿರುವುದು ಬಿಟ್ಟರೆ ಯಾವ ಕಾರಣಕ್ಕೂ ಪ್ರಕರಣ ಹಳ್ಳ ಹಿಡಿಯಲು ಬಿಡುವುದಿಲ್ಲ.
- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಆರಕ್ಷಕ ಅಧೀಕ್ಷಕರು, ಮಂಡ್ಯ ಜಿಲ್ಲೆ