ಸಿಂಹಾಸನಕ್ಕೆ ಕಡೂರಿನಲ್ಲೀಗ ಹಾಲಿ ಮಾಜಿ ಕ್ರೆಡಿಟ್‌ ವಾರ್‌

| Published : Mar 28 2024, 12:47 AM IST

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳ ರಾಜಕೀಯ ಹೋರಾಟದ ಜಿದ್ದಾಜಿದ್ದಿಯ ಚುನಾವಣಾ ಕಣವಾಗಿ ಇದೀಗ ಕ್ಷೇತ್ರ ರೂಪಿತವಾಗುತ್ತಿದೆ.

ಕಡೂರು ಕೃಷ್ಣಮೂರ್ತಿ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದ ಜನರ ಗಮನ ಸೆಳೆದಿರುವ ಪ್ರಬಲ ಕುಟುಂಬಗಳ ರಾಜಕೀಯ ಕಾಳಗಕ್ಕೆಸಿದ್ಧವಾಗಿರುವ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳ ರಾಜಕೀಯ ಹೋರಾಟದ ಜಿದ್ದಾಜಿದ್ದಿಯ ಚುನಾವಣಾ ಕಣವಾಗಿ ರೂಪಿತವಾಗುತ್ತಿದೆ. 2023ರ ಕಡೂರು ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಕಾಂಗ್ರೆಸ್ಸಿನ ಹಾಲಿ ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಹಾಗೂ ವೈ.ಎಸ್.ವಿ.ದತ್ತ ಕಣದಲ್ಲಿರುವ ಮೂಲಕ ಆನಂದ್ ಶಾಸಕರಾಗಿ ಆಯ್ಕೆಯಾದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿ ಕೊಂಡಿದ್ದು, ಕಾಂಗ್ರೆಸ್ ಪಕ್ಷ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿದ್ದ ಕಡೂರು ಕ್ಷೇತ್ರವನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ಆನಂತರ 2009 ಮತ್ತು 2014ರಲ್ಲಿ ಹಾಸನ ಲೋಕಸಭೆಯಿಂದ ಮಾಜಿ ಪ್ರಧಾನಿ ದೇವೇಗೌಡರು ಸಂಸದರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಹಿಂದೆ 1999ರಲ್ಲಿ ಶ್ರೇಯಸ್ ಪಟೇಲರ ತಾತ ಜಿ.ಪುಟ್ಟಸ್ವಾಮಿಗೌಡರು ಕೂಡ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದರಾಗಿ ಆಯ್ಕೆಯಾದರು.ಹಾಸನ ಕ್ಷೇತ್ರದ ರಾಜಕಾರಣದಲ್ಲಿ ಜಿದ್ದಾಜಿದ್ದಿಯ ಹೋರಾಟ ನಡೆಸುತ್ತಿದ್ದ ದೇವೇಗೌಡರು ಮತ್ತು ಪುಟ್ಟಸ್ವಾಮಿ ಗೌಡರ ಕುಟುಂಬಗಳ ಕುಡಿಗಳ ನಡುವೆ ಇದೀಗ ರಾಜಕೀಯ ಕದನ ಆರಂಭಗೊಂಡಿದೆ. ಮೇಲ್ಮಟ್ಟದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಎರಡೂ ಪಕ್ಷಗಳ ಕಾರ್ಯಕರ್ತರು- ಮುಖಂಡರಿಗೆ ಸ್ವಲ್ಪಮಟ್ಟಿಗೆ ಇರುಸುಮುರಿಸು ತಂದಿರುವುದು ನಿಜವಾದರೂ ಅನಿವಾರ್ಯವಾಗಿದೆ. ಕಣಕ್ಕಿಳಿದಿರುವ ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್‌ನಿಂದ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ನಡುವೆ ಹೋರಾಟ ಆರಂಭವಾಗಲಿದೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ವೈ.ಎಸ್.ವಿ ದತ್ತ ಮತ್ತು ಕಾಂಗ್ರೆಸ್‌ನ ಕೆ.ಎಸ್.ಆನಂದ್‌ರವರ ಜೊತೆಗೂಡಿ ಪ್ರಜ್ವಲ್ ರೇವಣ್ಣ ಅವರ ಆಯ್ಕೆ ಸುಲಭವಾಗಿತ್ತು. ಈ ಬಾರಿ ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ. ಕಡೂರು ಕ್ಷೇತ್ರಕ್ಕೆ ಹಾಸನ ಲೋಕಸಭೆಗೆ ಸೇರಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಅಸಮಾಧಾನದ ಮಾತುಗಳು ಜನರಿಂದ ಕೇಳಿಬರುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವ ಕಾರಣ ಪ್ರಜ್ವಲ್ ಪರವಾಗಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೋರಾಟ ಮಾಡಬೇಕಿದೆ. ಇನ್ನು ಶ್ರೇಯಸ್ ಪಟೇಲ್ ಪರವಾಗಿ ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಹೋರಾಟ ನಡೆಸಬೇಕಿದೆ. ಒಟ್ಟಾರೆ ಈ ಲೋಕಸಭಾ ಚುನಾವಣೆಯು ಹಾಸನ ಕ್ಷೇತ್ರದ ಕಡೂರು ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರಿಗೆ ಪ್ರತಿಷ್ಠೆಯ ಕಣವಾಗಿದೆ. ಆ ಮೂಲಕ ಕಡೂರು ಕ್ಷೇತ್ರದಲ್ಲಿ ಯಾರು ಯಾರಿಗೆ ಎಷ್ಟು ಮತ ಕೊಡಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿವೆ ಯೋ ಅಥವಾ ಬಿಜೆಪಿಯ ಹಿಂದಿನ ರಾಜ್ಯ ಮತ್ತು ಕೇಂದ್ರ ಸರಕಾರದ ಕಾರ್ಯಕ್ರಮಗಳು ಬಿಜೆಪಿ- ಜೆಡಿಎಸ್ ಮೈತ್ರಿಅಭ್ಯರ್ಥಿಗೆ ಕೆಲಸ ಮಾಡಲಿವೆಯೇ ಎಂದು ನೋಡಬೇಕಿದೆ. ಅಲ್ಲದೆ ಸದ್ಯಕ್ಕೆ ಮೂರು ಪಕ್ಷಗಳ ಮುಖಂಡರು, ಕಾರ್ಯಕರ್ತರ ನಿಲುವು ಕೂಡ ಸದ್ಯಕ್ಕೆ ಕುತೂಹಲಕಾರಿ ಆಗಿದೆ.