ಸಂಪ್ರದಾಯದಂತೆ ತೆರೆದ ಹಾಸನಾಂಬ ದೇಗುಲದ ಬಾಗಿಲು

| Published : Oct 25 2024, 12:52 AM IST

ಸಂಪ್ರದಾಯದಂತೆ ತೆರೆದ ಹಾಸನಾಂಬ ದೇಗುಲದ ಬಾಗಿಲು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಹೆಮ್ಮೆ ಹಾಗೂ ನಗರದ ಅಧಿದೇವತೆ ಶ್ರೀ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಈ ವರ್ಷದ ಪಂಚಾಂಗದ ಪ್ರಕಾರ ಗುರುವಾರ ಮಧ್ಯಾಹ್ನ 12.15ಕ್ಕೆ ಗರ್ಭಗುಡಿ ಮುಂದೆ ಬಾಳೆ ಕಂಬ ಕಡಿಯುವ ಮೂಲಕ ತೆರೆಯಲಾಯಿತು. ಇದರೊಂದಿಗೆ ಅ.24ರಿಂದ ಆರಂಭವಾಗಿರುವ ಹಾಸನಾಂಬ ಹಾಗೂ ಶ್ರೀ ಸಿದ್ಧೇಶ್ವರಸ್ವಾಮಿ ಜಾತ್ರೋತ್ಸವ ನವೆಂಬರ್‌ 3ರವರೆಗೆ ನಡೆಯಲಿದೆ. ಮೊದಲ ದಿನವಾದ ಗುರುವಾರ ಸಾರ್ವಜನಿಕರಿಗೆ ದೇವಾಲಯದ ಒಳ ಪ್ರವೇಶ ಇರಲಿಲ್ಲ. ಆದರೂ ಭಕ್ತರು ಮೊದಲ ದಿನದಲ್ಲಿ ದೇವಿ ದರ್ಶನ ಮಾಡಲು ಮುಗಿಬಿದ್ದಿದ್ದರು. ಹಾಸನಾಂಬೆ ಬಾಗಿಲು ತೆಗೆಯುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಒಳ ಬಂದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಹೆಮ್ಮೆ ಹಾಗೂ ನಗರದ ಅಧಿದೇವತೆ ಶ್ರೀ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಈ ವರ್ಷದ ಪಂಚಾಂಗದ ಪ್ರಕಾರ ಗುರುವಾರ ಮಧ್ಯಾಹ್ನ 12.15ಕ್ಕೆ ಗರ್ಭಗುಡಿ ಮುಂದೆ ಬಾಳೆ ಕಂಬ ಕಡಿಯುವ ಮೂಲಕ ತೆರೆಯಲಾಯಿತು. ಇದರೊಂದಿಗೆ ಅ.24ರಿಂದ ಆರಂಭವಾಗಿರುವ ಹಾಸನಾಂಬ ಹಾಗೂ ಶ್ರೀ ಸಿದ್ಧೇಶ್ವರಸ್ವಾಮಿ ಜಾತ್ರೋತ್ಸವ ನವೆಂಬರ್‌ 3ರವರೆಗೆ ನಡೆಯಲಿದೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಎಚ್.ಪಿ. ಸ್ವರೂಪ್, ಸಿಮೆಂಟ್ ಮಂಜು, ಡಿಸಿ ಸಿ. ಸತ್ಯಭಾಮ, ಎಸ್ಪಿ ಮಹಮ್ಮದ್ ಸುಜೀತಾ, ಎಸಿ ಮಾರುತಿ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಆಯುಕ್ತ ನರಸಿಂಹ ಮೂರ್ತಿ, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ತಹಸೀಲ್ದಾರ್‌ ಶ್ವೇತ, ಜಿಲ್ಲಾ ನ್ಯಾಯಾಧೀಶರಾದ ಉಷಾರಾಣಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಸೇರಿದಂತೆ ಹಲವಾರು ಗಣ್ಯರ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ರಾಜವಂಶಸ್ಥ ನರಸಿಂಹರಾಜ ಅರಸ್‌ ಗರ್ಭಗುಡಿ ಮುಂದಿನ ಬಾಳೆ ಕಂದನ್ನು ಕಡಿಯುವ ಮೂಲಕ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಮೊದಲ ದಿನವಾದ ಗುರುವಾರ ಸಾರ್ವಜನಿಕರಿಗೆ ದೇವಾಲಯದ ಒಳ ಪ್ರವೇಶ ಇರಲಿಲ್ಲ. ಆದರೂ ಭಕ್ತರು ಮೊದಲ ದಿನದಲ್ಲಿ ದೇವಿ ದರ್ಶನ ಮಾಡಲು ಮುಗಿಬಿದ್ದಿದ್ದರು. ಹಾಸನಾಂಬೆ ಬಾಗಿಲು ತೆಗೆಯುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಒಳ ಬಂದರು.

ಶಕ್ತಿದೇವತೆ: ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡಿ, ಇದೊಂದು ಐತಿಹಾಸಿಕವಾದಂತಹ ವಿಶೇಷವಾದ ದೇವಸ್ಥಾನವಾಗಿದೆ. ವರ್ಷದಲ್ಲಿ ಕೆಲ ದಿನಗಳು ಮಾತ್ರ ಬಾಗಿಲು ತೆಗೆಯಲಾಗುತ್ತದೆ. ಇಲ್ಲಿ ಎಲ್ಲಾ ಅಧಿಕಾರಿಗಳು ತುಂಬ ಅಚ್ಚುಕಟ್ಟಾಗಿ ದೇವಾಲಯದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮನಸ್ಸಿಗೆ ನೆಮ್ಮದಿಗಾಗಿ ದೇವಸ್ಥಾನ ಪ್ರಮುಖವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ತನ್ನದೆಯಾದ ಮಹತ್ವವಿದೆ. ಹಾಸನದ ಹೆಸರಲ್ಲೇ ಹಾಸನಾಂಬೆ ತಾಯಿ ಇದ್ದು, ಇದೊಂದು ಶಕ್ತಿ ದೇವತೆಯಾಗಿದೆ ಎಂದರು. ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಇದ್ದರೇ ಮಾತ್ರ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ಕಿವಿಮಾತು ಹೇಳಿದರು. ಎಲ್ಲಾರಿಗೂ ತಾಯಿ ಆಶೀರ್ವಾದ ಸಿಗಲೆಂದು ಹಾರೈಸಿದರು.

ಮೂಲಭೂತ ಸೌಕರ್ಯ: ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿ ಕಡಿಮೆ ಅವಧಿ ದರ್ಶನವಿದ್ದು, ಕಳೆದ ಬಾರಿ ೧೪ ಲಕ್ಷ ೪೦ ಸಾವಿರ ಭಕ್ತಾದಿಗಳು ಹಾಸನಾಂಬೆ ದರ್ಶನ ಮಾಡಿದ ದಾಖಲೆ ಆಗಿದೆ. ಅದರ ಹಿಂದಿನ ವರ್ಷದಲ್ಲಿ ೪ ಲಕ್ಷ ಜನರು ದರ್ಶನ ಮಾಡಿದ್ದರು. ಈ ವರ್ಷ ನಮ್ಮ ನಿರೀಕ್ಷೆಯಂತೆ ೨೦ ಲಕ್ಷಕ್ಕೂ ಹೆಚ್ಚಿನ ಭಕ್ತರು ಬರಲಿದ್ದಾರೆ. ಮುಖ್ಯಮಂತ್ರಿಯಿಂದ ಎಲ್ಲಾ ಸಚಿವರಿಗೂ, ಎಲ್ಲಾ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಕೂಡ ಹಾಸನಾಂಬೆ ದರ್ಶನಕ್ಕೆ ಆಹ್ವಾನ ಮಾಡಲಾಗಿದೆ. ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಯಾವ ತೊಂದರೆ ಬರಬಾರದೆಂದು ಎಲ್ಲಾ ಮುಂಜಾಗ್ರತೆ ವಹಿಸಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಕಳೆದ ಬಾರಿ ಬೇಸರವಾಗಿದ್ದು, ಈ ಬಾರಿ ಆ ರೀತಿಯ ನೂಕು ನುಗ್ಗಲು ಆಗದಂತೆ ನಿಗಾ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ ಎಂದರು.

ದಸರಾ ವೈಭವ: ಕಳೆದ ಬಾರಿ ಸರಿಯಾಗಿ ಅಲಂಕಾರ ಮಾಡಿರಲಿಲ್ಲ ಎನ್ನುವ ಲೋಪವನ್ನು ಸರಿಪಡಿಸಲಾಗಿದೆ. ವಿವಿಧ ಮಠದ ಸ್ವಾಮೀಜಿಗಳು ಈ ದೇವಿ ಜಾತ್ರೋತ್ಸವಕ್ಕೆ ಆಗಮಿಸಿ ಆಶೀರ್ವದಿಸಿದ್ದೀರಿ. ಎಲ್ಲಾ ಪಕ್ಷದ ಶಾಸಕರು ಪಕ್ಷಾತೀತವಾಗಿ ಆಗಮಿಸಿದ್ದು, ಎಲ್ಲರು ಸಹಕಾರ ಕೊಡುವಂತೆ ಕೋರಿದರು. ಎಲ್ಲಾ ಕಾರ್ಯಕ್ರಮಗಳು ಕೂಡ ಅಚ್ಚುಕಟ್ಟಾಗಿ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಹಿರಿಯ, ಕಿರಿಯ ಅಧಿಕಾರಿಗಳು ಕೂಡ ತಮ್ಮ ಮನೆಯ ದೇವರ ಕಾರ್ಯ ಎಂಬಂತೆ ರಾತ್ರಿ ಹಗಲು ಶ್ರಮಿಸಿದ್ದಾರೆ. ಮೈಸೂರು ದಸರಾ ಅಲಂಕಾರದ ರೀತಿಯಲ್ಲಿ ಹಾಸನದಲ್ಲೂ ಅಲಂಕಾರ ಮಾಡಿ ದಸರಾ ವೈಭವ ಮರುಕಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಾರಿ ಹಾಸನಾಂಬ ದರ್ಶನ ಪಡೆಯಲು ದಿನದ ೨೪ ಗಂಟೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ತಡೆ ಇಲ್ಲದೆ ಸುಲಲಿತವಾಗಿ ಭಕ್ತರು ದರ್ಶನ ಪಡೆಯಬಹುದಾಗಿದೆ. ನಗರದ ರಸ್ತೆ ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ದೀಪಲಂಕಾರ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ಪ್ರವಾಸದ ಪ್ಯಾಕೇಜ್ ಪರಿಚಯಿಸಲಾಗಿದೆ. ಇನ್ನು ಈ ವರ್ಷದಿಂದ ಹಾಸನದ ಲೈಟಿಂಗ್ ಸೌಂದರ್ಯ ವೀಕ್ಷಣೆ ಮಾಡಲು ಡಬಲ್ ಡೆಕ್ಕರ್‌ ಬಸ್ ಸಂಚರಿಸಲಿದೆ.

ಇದೇ ವೇಳೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಸಿದ್ದಲಿಂಗ ಸ್ವಾಮೀಜಿ, ಶಿಡಿಗಡಲೆ ಮಠದ ಶಿವಲಿಂಗ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಗುರುವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ರಾಜಪುರ ಮಠದ ರಾಜೇಶ್ವರಿ ಶಿವಚಾರ್ಯ ಸ್ವಾಮೀಜಿ, ನಿಜಗುಣ ಮಠದ ನಿಜಗುಣ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ನಿರಂಜನ ಸ್ವಾಮೀಜಿ, ದೊಡ್ಡಮಠದ ಶ್ರೀಗಳು, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

* ಬಾಕ್ಸ್‌:

ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು ಶ್ರೀ ಆದಿಚುಂಚನಗಿರಿ ಮಹಾಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲಾಗಿದ್ದು, ದೇವರಲ್ಲಿ ಶಕ್ತಿ ಇದ್ದು, ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು. ಸರ್ವರಿಗೂ ದೇವಿ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಕಳೆದ ವರ್ಷಕ್ಕಿಂತ ಈ ವರ್ಷ ಅಚ್ಚುಕಟ್ಟಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಒಳಗೊಂಡಂತೆ ಎಲ್ಲರೂ ಕೂಡ ಶ್ರಮ ವಹಿಸಿದ್ದಾರೆ ಎಂದರು.