ಸಾರಾಂಶ
ಮರಿಯಮ್ಮನಹಳ್ಳಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ದೇಶದ ವೀರ ಯೋಧರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಆ.14ರಂದು ಹಸಿರೋತ್ಸವ ಹಾಗೂ ದೀಪೋತ್ಸವ ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು.
ಇಲ್ಲಿನ ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯ ದಿನಾಚರಣೆ ಮತ್ತು ಒಂದು ವೇದಿಕೆ ಹಲವು ಈಡೇರಿಕೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಗರಿಬೊಮ್ಮನಹಳ್ಳಿ ಕ್ಷೇತ್ರಾದ್ಯಂತ ಆ.14ರಂದು ಬೆಳಗ್ಗೆ ಗೌರವ ಸಮರ್ಪಣೆಗಾಗಿ ಹಸಿರೋತ್ಸವ ಹೆಸರಿನಲ್ಲಿ ಒಂದು ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ. ಅಂದು ಸಂಜೆ ಕ್ಷೇತ್ರದ ಎಲ್ಲ ಮನೆಗಳ ಮುಂದೆ ದೀಪ ಬೆಳಗಿಸಿ ಸೈನಿಕರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಕುರಿತು ಪ್ರತಿಹಳ್ಳಿ ಹಳ್ಳಿಗಳಲ್ಲಿ ವಿಷಯ ತಿಳಿಸಿಕೊಡಬೇಕು. ಅಲ್ಲದೇ ಪಟ್ಟಣ ಹಾಗೂ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲಾ ಕಾಲೇಜುಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ವಿದ್ಯಾರ್ಥಿಗಳ ಮೂಲಕ ಅವರ ಪೋಷಕರಿಗೆ ಈ ಕುರಿತು ವಿಷಯ ತಿಳಿಸಬೇಕು ಎಂದು ಹೇಳಿದರು.ಆ.15ರಂದು ನಡೆಯುವ ಈ ಕಾರ್ಯಕ್ರಮದಡಿ ಎಲ್ಲ ಇಲಾಖೆಗಳಡಿ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳ ಆದೇಶ ಪ್ರತಿ, ವಿವಿಧ ಪರಿಕರಗಳನ್ನು ವಿತರಿಸಲಾಗುವುದು. ಪ್ರತಿ ಇಲಾಖೆಯವರು ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಾಹಿತಿ ನೀಡಿ, ಈ ಕಾರ್ಯಕ್ರಮಕ್ಕೆ ಕರೆ ತರುವಂತೆ ಅಧಿಕಾರಿಗಳಿಗೆ ಶಾಸಕ ಕೆ. ನೇಮಿರಾಜ್ ನಾಯ್ಕ್ ಸೂಚಿಸಿದರು.
ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ಇಲಾಖೆಯವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಹೊಸಪೇಟೆ ತಹಸೀಲ್ದಾರ್ ಎಂ.ಶ್ರುತಿ, ಬಿಇಒ ಎಂ. ಚನ್ನಬಸಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ್, ಪಪಂ ಮುಖ್ಯಾಧಿಕಾರಿ ಎಂ. ಖಾಜಾ, ಉಪ ತಹಸೀಲ್ದಾರ್ ಶ್ರೀಧರ್, ಕಂದಾಯ ನಿರೀಕ್ಷಕ ಅಂದಾನಗೌಡ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪಪಂ ಸದಸ್ಯರು ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.