ಹಾಸನ - ಬೇಲೂರು - ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಶೀಘ್ರ ಪೂರ್ಣ: ಕೇಂದ್ರ ಸಚಿವ ವಿ ಸೋಮಣ್ಣ

| Published : Apr 27 2025, 01:30 AM IST

ಹಾಸನ - ಬೇಲೂರು - ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಶೀಘ್ರ ಪೂರ್ಣ: ಕೇಂದ್ರ ಸಚಿವ ವಿ ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ, ಬೇಲೂರು, ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದರು.ಹಳೇಬೀಡಿನ ಖಾಸಗಿ ಸಮಾರಂಭಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭವಾರ್ತೆ ಹಳೇಬೀಡು

ಹಾಸನ, ಬೇಲೂರು, ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದರು.

ಹಳೇಬೀಡಿನ ಖಾಸಗಿ ಸಮಾರಂಭಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಹಾಸನ ಜಿಲ್ಲೆ ಮತ್ತು ಬೇಲೂರು ತಾಲೂಕಿನ ಜನರ ದಶಕಗಳ ಕನಸಾಗಿದಂತಹ ಚಿಕ್ಕಮಗಳೂರು, ಬೇಲೂರು ಹಾಸನ ಸಂಪರ್ಕ ರೈಲ್ವೆ ವ್ಯವಸ್ಥೆ ಕಾಮಗಾರಿಯೂ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಈ ಭಾಗದ ಜನರಿಗೆ ಶೀಘ್ರದಲ್ಲಿ ಉತ್ತಮವಾದಂತಹ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು.

ಬೇಲೂರು ಹಳೇಬೀಡು, ಅರಸೀಕೆರೆ ಸಂಪರ್ಕಿಸುವಂತಹ ರೈಲ್ವೆ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು. ಮನವಿ ಆಲಿಸಿದ ಅವರು ಈಗಿರುವ ಕಾಮಗಾರಿ ಪೂರ್ಣಗೊಂಡ ನಂತರ ಆ ಯೋಜನೆ ಪ್ರಸ್ತಾವನೆ ಬಗ್ಗೆ ಪರಿಶೀಲಿಸಲಾಗುವುದೆಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ೨೮ ಮಂದಿ ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ನಿಜಕ್ಕೂ ಖಂಡನೀಯ, ಇಂತಹ ಉಗ್ರಗಾಮಿ ಸಂಘಟನೆಗಳನ್ನ ಬೇರು ಸಮೇತ ಕಿತ್ತು ಎಸೆಯೋವರೆಗೂ ನಮ್ಮ ಕೇಂದ್ರ ಸರ್ಕಾರ ವಿರಮಿಸುವುದಿಲ್ಲ. ವಿಶೇಷವಾಗಿ ನಮ್ಮ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಶೀಘ್ರ ಕಾರ್ಯಪ್ರವೃತ್ತರಾಗಿದ್ದಾರೆ. ಈಗಾಗಲೇ ಸರ್ವ ಪಕ್ಷಗಳ ಸಭೆ ಮತ್ತು ಸಂಪುಟ ಸಭೆ ಕರೆದು ಚರ್ಚಿಸಲಾಗಿದ್ದು, ಭಯೋತ್ಪಾದಕ ವಿದ್ವಂಸಕ ಕೃತ್ಯವನ್ನು ನಡೆಸಿದವರ ಹೆಡೆಮುರಿ ಕಟ್ಟುವುದಾಗಿ ಹಾಗೂ ದೇಶದ ಭದ್ರತೆಯ ಸಮಗ್ರತೆಯನ್ನು ಕಾಪಾಡುವಲ್ಲಿ ಚಿಂತನ ನಡೆಯುತ್ತಿದೆ ಎಂದು ತಿಳಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದಂತಹ ಹುಲ್ಲಳ್ಳಿ ಸುರೇಶ್ ಮಾತನಾಡಿ, ಪಾಕಿಸ್ತಾನದ ಕುಮ್ಮಕ್ಕು ಇಷ್ಟೆಲ್ಲ ದುರಂತಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ಬೆಲೆಯನ್ನು ಪಾಕಿಸ್ತಾನ ತೆರಬೇಕಾಗುತ್ತದೆ. ಜೊತೆಗೆ ಅಖಂಡ ಹಿಂದೂಸ್ಥಾನ ಕಟ್ಟುವಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಯೋಧನಾಗಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುಷ್ಪಗಿರಿಯ ಪರಮ ಪೂಜ್ಯ ಶ್ರೀಸೋಮಶೇಖರ ಶಿವಚಾರ್ಯ, ಬಿ.ಜೆ.ಪಿ ಪಕ್ಷದ ಮುಖಂಡರಾದ ಹರೀಶ್, ರಮೇಶ್, ರೇಣುಕುಮಾರ್, ಅಡಗೂರು ಬಸವರಾಜ್, ರಂಜಿತ್, ರಮೇಶ್, ಚೇತನ್ ಮುಂತಾದವರು ಹಾಜರಿದ್ದರು.