ಹಾಸನಾಂಬ ಉತ್ಸವ: ಹೆಲಿಕಾಪ್ಟರ್ ಮೂಲಕ ನಗರ ಪ್ರದಕ್ಷಿಣೆ

| Published : Oct 27 2023, 12:31 AM IST

ಸಾರಾಂಶ

ನವೆಂಬರ್‌ 2ರಿಂದ ಹಾಸನಾಂಬ ದೇಗುಲ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಜನರು ಹೆಲಿಕಾಪ್ಟರ್ ಮೂಲಕ ನಗರ ಪ್ರದಕ್ಷಿಣೆ ಹಾಕುವ ಸೌಲಭ್ಯ ಕಲ್ಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ ನವೆಂಬರ್ ೨ರಂದು ಮಧ್ಯಾಹ್ನ ೧೨ ಗಂಟೆಗೆ ಸರಿಯಾಗಿ ಹಾಸನಾಂಬೆ ದೇವಸ್ಥಾನದ ಬಾಗಿಲನ್ನು ವಿಧಿವಿಧಾನಗಳ ಮೂಲಕ ತೆರೆಯಲಾಗುವುದು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅನೇಕ ಗಣ್ಯರು, ಅಧಿಕಾರಿಗಳು ಉಪಸ್ಥಿತಿ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ನವೆಂಬರ್ ೩ರಂದು ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆವರೆಗೆ ದರ್ಶನ ಸಿಗಲಿದೆ. ನವೆಂಬರ್ ೪ರಿಂದ ದಿನದ ೨೪ ಗಂಟೆಯೂ ಕೂಡ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನವೆಂಬರ್ ೧೫ ರಂದು ಮಧ್ಯಾಹ್ನ ೧೨ ಗಂಟೆಗೆ ಸರಿಯಾಗಿ ಬಾಗಿಲನ್ನು ಮುಚ್ಚಲಾಗುವುದು ಎಂದರು. ಕೊನೆಯ ದಿನದಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ಹೇಳಿದರು. ಹಾಸನ ಉಪ ವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಸ್ಥಾನದ ಆಡಳಿತ ಅಧಿಕಾರಿ ಮಾರುತಿ ಮಾತನಾಡಿ, ಕಳೆದ ೮ ವರ್ಷಗಳಿಂದ ದೇವಸ್ಥಾನಕ್ಕೆ ಸುಣ್ಣ ಹಚ್ಚುವ ಕೆಲಸ ಆಗಿರಲಿಲ್ಲ. ಸಣ್ಣಪುಟ್ಟ ದುರಸ್ತಿ ಕಾರ್ಯವು ಕೂಡ ನಡೆದಿದ್ದು, ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರತಿ ಸಾಲಿನಲ್ಲಿ ಬರುವವರಿಗೆ ಫ್ಯಾನ್ ವ್ಯವಸ್ಥೆ ಕುಡಿಯುವ ನೀರು, ಮಜ್ಜಿಗೆ, ಮಹಾಭಾರತ ಕಥೆಯ ವಿಡಿಯೋ ವೀಕ್ಷಣೆ ಹಾಗು ಶೌಚಾಲಯದ ವ್ಯವಸ್ಥೆ, ಜರ್ಮನ್ ಟೆಂಟು, ನೆಲಕ್ಕೆ ಮ್ಯಾಟ್ ಹಾಗೂ ದೇವಸ್ಥಾನದ ಒಳಗೆ ಎಸಿ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯ ಪ್ರವಾಸಿ ತಾಣಗಳ ದರ್ಶನ: ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಈ ವರ್ಷದಿಂದ ಹಾಸನಾಂಬ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹಾಸನಾಂಬ ವೈಭವ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡಿದ್ದು, ಇದರಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಇದೇ ಮೊದಲ ಬಾರಿಗೆ "ಆಗಸದಲ್ಲಿ ಹಾಸನ " ಎಂಬ ವಿನೂತನವಾಗಿ ಹೆಲಿಕ್ಯಾಪ್ಟರ್ ಮೂಲಕ ನಗರವನ್ನ ಸುತ್ತು ಹಾಕುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳ ನಾಲ್ಕು ಪ್ಯಾಕೇಜ್‌ಗಳನ್ನು ಒಳಗೊಂಡಿರುವಂತೆ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಲ್ಕು ಪ್ಯಾಕೇಜ್‌ಗಳ ಮೂಲಕ ಜಿಲ್ಲೆಯ ಪ್ರಮುಖ ಸ್ಥಳಗಳನ್ನು ತೋರಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು ಇದಕ್ಕೆ ಸಾರ್ವಜನಿಕರು ಮತ್ತು ಭಕ್ತರು ಹಣಕೊಟ್ಟು ಆ ಸ್ಥಳಗಳನ್ನ ನೋಡಬಹುದಾಗಿದೆ ಮಹಿಳೆಯರಿಗೆ ಇದರಲ್ಲಿ ಉಚಿತ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿ ದಿನ ಬೆಳಗ್ಗೆ ೭ ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಬಸ್ಸುಗಳು ಹೊರಡಲಿವೆ. ಸಕಲೇಶಪುರ ಹೊರತುಪಡಿಸಿ ಉಳಿದ ಮೂರು ಕಡೆ ಊಟದ ವ್ಯವಸ್ಥೆ ಇದೆ. ಆನ್ಲೈನ್ ನಲ್ಲಿ ಕೂಡ ಬುಕಿಂಗ್ ಮಾಡಿಕೊಳ್ಳಬಹುದು. ಒಟ್ಟು ೫ ಭಾಗಗಳಲ್ಲಿ ವಿಂಗಡಣೆ ಮಾಡಲಾಗಿದ್ದು, ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ನಗರದ ಸರಕಾರಿ ಕಲಾ ಕಾಲೇಜು ಆವರಣದಲ್ಲಿ ನವೆಂಬರ್ ೫ ರಂದು ಮತ್ತು ೧೨ರಂದು ಭಾನುವಾರ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಹಾರಾಜ ಪಾರ್ಕಿನಲ್ಲಿ ನವೆಂಬರ್ ೨ರಿಂದ ೧೫ರ ವರೆಗೂ ನೀರಿನ ಕಾರಂಜಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇದೆ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಕೆ. ಹರೀಶ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ರಾಜ್ಯ ಕಾರ್‍ಯಕಾರಣಿ ಸದಸ್ಯ ಎಚ್.ಬಿ. ಮದನ್ ಗೌಡ, ಇತರರು ಇದ್ದರು..