ಸಾರಾಂಶ
ಸಚಿವ ಕೆ.ಎನ್.ರಾಜಣ್ಣಗೆ ಪ್ರಶ್ನೆ । ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಪೊಲೀಸ್ ರಕ್ಷಣೆಯೊಂದಿಗೆ ತುಮಕೂರಿಗೆ ಹೇಮಾವತಿ ನದಿ ನೀರು ಹರಿಸಿಕೊಂಡರು. ಹಾಸನ ಜಿಲ್ಲೆಯಲ್ಲೂ ಬರ ಇರುವ ಕಾರಣ ಎಂಟು ದಿನ ನೀರು ಹರಿಸಲು ಮನವಿ ಮಾಡಿದರೂ ತಿರಸ್ಕರಿಸಿದವರು ಈಗ ಯಾವ ಲೆಕ್ಕದಲ್ಲಿ ಜಿಲ್ಲೆಯಲ್ಲಿ ಮತಯಾಚನೆ ಮಾಡುತ್ತಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಪ್ರಶ್ನಿಸಿದರು.
ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಗುರುವಾರ ಮತಯಾಚಿಸಿ ಮಾತನಾಡಿದರು. ‘ತುಮಕೂರು ಜಿಲ್ಲೆಗೂ 15 ದಿನ ನೀರು ಬಿಡಿ, ನಮಗೂ ಎಂಟು ದಿನ ನೀರು ಕೊಡಬೇಕು ಎಂದು ಎಚ್.ಡಿ.ರೇವಣ್ಣನವರ ಮುಖಂಡತ್ವದಲ್ಲಿ ಹೋರಾಟ ಮಾಡಿದರೂ ಸಹ ಒಂದು ದಿನವೂ ನಮ್ಮ ಕೆರೆಗಳಿಗೆ ನೀರು ಕೊಡಲಿಲ್ಲ. ಈ ಜಿಲ್ಲೆಯ ಅಭಿವೃದ್ಧಿಗೆ ಇವರು ಯಾವ ರೀತಿ ಸ್ಪಂದಿಸುತ್ತಾರೆ ಎಂದು ಜಿಲ್ಲೆಯ ಜನ ಯೋಚನೆ ಮಾಡಬೇಕಾಗಿದೆ’ ಎಂದು ವ್ಯಂಗ್ಯವಾಡಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಎರಡು ಬಾರಿ ಸಾಲ ಮನ್ನಾ ಯೋಜನೆ ಮಾಡಿದ್ದರಿಂದ ತಾಲೂಕಿನ ಎಲ್ಲಾ ರೈತರಿಗೆ 500 ಕೋಟಿ ರು. ಅನುಕೂಲವಾಗಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ ತಾಲೂಕಿಗೆ 175 ಕೋಟಿ ರು. ಹಣ ಬಿಡುಗಡೆ ಮಾಡಿಸಿ 25 ಸಾವಿರ ರು. ಹಣ ಪಾವತಿ ಮಾಡಿದ ರೈತರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಕಿಸುವ ಯೋಜನೆ ಇತ್ತು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತಿತ್ತು. ಈಗ ನಾಲ್ಕು ಲಕ್ಷ ರು. ಹಣ ಕಟ್ಟಿ ಟಿಸಿ ಹಾಕಿಸಿಕೊಳ್ಳುವ ಪರಿಸ್ಥಿತಿ ರೈತರಿಗೆ ಬಂದಿದೆ ಎಂದು ಕುಹಕವಾಡಿದರು.
ಅಬಕಾರಿ ಸುಂಕ, ಚಾಪಾ ಕಾಗದ, ದಿನಬಳಕೆ ವಸ್ತುಗಳ ತೆರಿಗೆಯನ್ನು ಹೆಚ್ಚಿಸಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಹೇಳಿಕೊಂಡು ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ. ದಲಿತರು, ಬಡವರು, ಮಹಿಳೆಯರ ಪರವಾಗಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ್ ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗಸ್ವಾಮಿ, ಕೃಷಿ ಪತ್ತಿನ ಸಂಘದ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ತೋಟಿ ನಾಗರಾಜ್, ಉದ್ಯಮಿ ಜಯರಾಮ್, ಬೆಳಗಳ್ಳಿ ಪುಟ್ಟಸ್ವಾಮಿ, ಶಿವಕುಮಾರ್, ಡೈರಿ ಮಂಜುನಾಥ್, ಬೋರೇಗೌಡ, ಶಿವೇಗೌಡ, ಕೋಟೆಮನೆ ಮಧು, ಎಚ್.ಎನ್.ಮಧು, ಮಾಸ್ತಿಗೌಡ, ಕಾಂತರಾಜ್, ಜೆಸಿಬಿ ಶೇಖರ್, ಜಾವೇದ್, ಸುರೇಶ್, ಮರದ ವ್ಯಾಪಾರಿ ಶೇಖರ್, ದೊಡ್ಡಯ್ಯ ಹಾಜರಿದ್ದರು.
ನುಗ್ಗೇಹಳ್ಳಿ ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಶಾಸಕ ಸಿ.ಎನ್.ಬಾಲಕೃಷ್ಣ, ಮತಯಾಚಿಸಿದರು.