ಸಾರಾಂಶ
ಬೆಳ್ತಂಗಡಿಯ ಗಿರೀಶ್ ಶೆಟ್ಟಿ ಮಾಲೀಕತ್ವದ ಶೆಟ್ಟಿ ಆರ್ಟ್ಸ್ ಕಲಾ ತಂಡದ 17 ಮಂದಿ ಕಲಾವಿದರು ಈ ಗಣೇಶೋತ್ಸವ ಮೆರವಣಿಗೆಯಲ್ಲಿ ಕೀಲು ಗೊಂಬೆಯಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಕಲಾವಿದರು ಯಕ್ಷಗಾನ, ಕೀಲು ಕುದುರೆ ಸಹಿತ ವಿವಿಧ ಗೊಂಬೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಲಾರಿ ಹರಿದು ಭಕ್ತರ ಸಾವಿನ ಘಟನೆಯಿಂದ ಬೆಳ್ತಂಗಡಿಯ ಕೀಲು ಗೊಂಬೆ ಕುಣಿತದ ತಂಡ ಕೂದಲಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದೆ.ಬೆಳ್ತಂಗಡಿಯ ಗಿರೀಶ್ ಶೆಟ್ಟಿ ಮಾಲೀಕತ್ವದ ಶೆಟ್ಟಿ ಆರ್ಟ್ಸ್ ಕಲಾ ತಂಡದ 17 ಮಂದಿ ಕಲಾವಿದರು ಈ ಗಣೇಶೋತ್ಸವ ಮೆರವಣಿಗೆಯಲ್ಲಿ ಕೀಲು ಗೊಂಬೆಯಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಕಲಾವಿದರು ಯಕ್ಷಗಾನ, ಕೀಲು ಕುದುರೆ ಸಹಿತ ವಿವಿಧ ಗೊಂಬೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಇನ್ನೇನು ಮೆರವಣಿಗೆ ಕೊನೆ ಹಂತದಕ್ಕೆ ತಲುಪಬೇಕು ಎನ್ನುವಷ್ಟರಲ್ಲಿ ಟ್ರಕ್ ಹರಿದು ಅವಘಡ ಸಂಭವಿಸಿ ಬಿಟ್ಟಿತು ಎನ್ನುತ್ತಾರೆ ತಂಡ ಮುಖ್ಯಸ್ಥ ಯಶೋಧರ್.
ನಮ್ಮ ಕೀಲು ಗೊಂಬೆ ಕುಣಿತದ ತಂಡ ಡಿಜೆ ಸಮೀಪದಲ್ಲೇ ಸಾಗುತ್ತಿತ್ತು. ಮೆರವಣಿಗೆಯಲ್ಲಿ ಡಿಜೆ ಶಬ್ದಕ್ಕೆ ಗೊಂಬೆ ಕುಣಿತದ ವಾದ್ಯಗಳ ಸದ್ದು ಕೇಳುವುದಿಲ್ಲ ಎಂಬ ಕಾರಣಕ್ಕೆ ಡಿಜೆಯಿಂದ ಸ್ವಲ್ಪ ಹೆಚ್ಚೇ ಅಂತರದಲ್ಲಿ ಸಾಗುತ್ತಿದ್ದೆವು. ಅಷ್ಟರಲ್ಲಿ ಏಕಾಏಕಿ ಡಿವೈಡರ್ ಏರಿ ಟ್ರಕ್ ಮುನ್ನುಗ್ಗಿ ಬಂದು ಮೆರವಣಿಗೆಗೆ ಅಪ್ಪಳಿಸಿತ್ತು. ನಮ್ಮ ತಂಡದ ಕಲಾವಿದರೊಬ್ಬರು ತಕ್ಷಣವೇ ಓಡಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡರು. ಅದೊಂದು ಭಯಾನಕ ದೃಶ್ಯವಾಗಿದ್ದು, ಇನ್ನೂ ಭೀತಿಯ ಗುಂಗಿನಿಂದ ತಂಡದ ಸದಸ್ಯರು ಹೊರಬಂದಿಲ್ಲ. ಗಣೇಶೋತ್ಸವ ಸಮಿತಿ ಅಧ್ಯಕ್ಷರು ಇನ್ನೇನು ಡಿಜೆ ವಾಹನದ ಬಳಿ ತೆರಳಲು ಮುಂದಾಗಿದ್ದರು. ಅಷ್ಟರದಲ್ಲಿ ಅವಘಡ ಸಂಭವಿಸಿತ್ತು. ಹಾಗಾಗಿ ಅವರ ಜೀವವೂ ಉಳಿಯಿತು ಎನ್ನುತ್ತಾರೆ ಯಶೋಧರ್.ಅವಘಡ ಸಂಭವಿಸಿದ ಬಳಿಕ ಚಾಲಕ ಟ್ರಕ್‌ನಲ್ಲೇ ಅಮಲಿನಲ್ಲಿ ಸ್ಟೇರಿಂಗ್‌ಗೆ ಬಿದ್ದಿದ್ದ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆತ ಅಮಲು ಪದಾರ್ಥ ಸೇವಿಸಿರುವುದನ್ನು ತಿಳಿಸಿದ್ದಾರೆ. ವಿನಾ ಕಾರಣ ಹಲವು ಮಂದಿ ಜೀವ ಕಳೆದುಕೊಳ್ಳುವಂತಾಗಿದೆ ಎನ್ನುತ್ತಾರೆ ಯಶೋಧರ್.