ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೊಸಳೆಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು 9 ಜನರು ಮೃತಪಟ್ಟು , ೨೦ ಮಂದಿಗೆ ಗಂಭೀರ ಗಾಯಗೊಂಡ ಹಿನ್ನೆಲೆ ಶನಿವಾರ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ ಅವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ, ನಂತರ ಮೃತರ ಮನೆಗೆ ಧಾವಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿ ಧೈರ್ಯ ತುಂಬಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೃದಯ ವಿದ್ರಾವಕ ಮತ್ತು ಕರುಳು ಕಲುಕುವ ಘಟನೆ. ಅವರ ನೋವಿನಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.ಸಹನೆಯ ಕಟ್ಟೆ ಮೀರುವಂತಹ ದುರ್ಘಟನೆ ಇದಾಗಿದೆ. ಪ್ರಾಣಹಾನಿ ಮತ್ತು ಗಾಯಾಳು ಆಗಿರುವ ಕುಟುಂಬದವರಿಗೆ ಸರ್ಕಾರದ ಮುಖಾಂತರ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಅವರ ದುಃಖದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ ಎಂದು ತಿಳಿಸಿದರು.
ಮುಂಜಾನೆಯೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು,ತಹಸೀಲ್ದಾರ್, ಮತ್ತಿತರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ನಿಗಾ ವಹಿಸಿ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ ಎಂದರು.
೨೦ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅದರಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿವೆ, ಮತ್ತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಸ್ತುತ ಆಸ್ಪತ್ರೆಯಲ್ಲಿರುವಂತಹ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಕುಟುಂಬಸ್ಥರು ಮೊದಲೇ ನೋವಿನಲ್ಲಿದ್ದಾರೆ. ಇಲ್ಲಿಯೂ ಕೂಡ ಬಂದು ಆಸ್ಪತ್ರೆಯ ಬಾಗಿಲನ್ನು ಕಾಯುವಂಥ ಪರಿಸ್ಥಿತಿ ಆಗಬಾರದು. ಎಷ್ಟೇ ಸಮಯವಾದರೂ ವೈದ್ಯಕೀಯವಾಗಿ, ಕಾನೂನಾತ್ಮಕವಾಗಿ ಏನೇನು ಮಾಡಬೇಕೋ ಅದನ್ನೆಲ್ಲ ರಾತ್ರಿಯೇ ಮಾಡಿ ಮುಗಿಸಿ ಶವವನ್ನು ಕುಟುಂಬದವರಿಗೆ ನೀಡಿ ಎಂದು ಸೂಚಿಸಲಾಗಿತ್ತು. ಆ ಸೂಚನೆಯ ಮೇರೆಗೆ ಜಿಲ್ಲಾಡಳಿತದವರು ರಾತ್ರಿಯೇ ಕಾರ್ಯೋನ್ಮುಖರಾಗಿ, ರಾತ್ರಿ ಮೂರುವರೆ ಗಂಟೆಗೆ ಸರ್ಕಾರದಿಂದ ವಾಹನದ ವ್ಯವಸ್ಥೆಯನ್ನು ಮಾಡಿ ಶವಗಳನ್ನು ಕುಟುಂಬದವರಿಗೆ ನೀಡಿ ಗ್ರಾಮಕ್ಕೆ ಕಳಿಸುವಂತಹ ಕೆಲಸವನ್ನು ಮಾಡಿದ್ದಾರೆ. ಬೇರೆ ಜಿಲ್ಲೆಯವರ ಶವವನ್ನು ಅವರಿಗೆ ಒಪ್ಪಿಸಿ, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದಿಂದ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ತಿಳಿಸಿದರು.
ಚಾಲಕ ಡ್ರಗ್ಸ್ ಸೇವಿಸಿಲ್ಲ:ಚಾಲಕ ಆ ಕ್ಷಣದಲ್ಲಿ ಯಾವ ಸ್ಥಿತಿಯಲ್ಲಿದ್ದನು ಎಂದು ಸ್ವಾಭಾವಿಕವಾಗಿ ಎಲ್ಲರಲ್ಲಿಯೂ ಪ್ರಶ್ನೆ ಉದ್ಭವವಾಗುತ್ತದೆ. ರಾತ್ರಿಯೇ ಅವನ ರಕ್ತದ ಸ್ಯಾಂಪಲ್ ಅನ್ನು ತೆಗೆದುಕೊಂಡು ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಚಾಲಕ ಯಾವುದೇ ರೀತಿಯ ಡ್ರಗ್ಸ್ ಸೇವನೆ ಮಾಡಿರುವುದು ಕಂಡುಬಂದಿಲ್ಲ ಜೊತೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಕ್ತದ ಸ್ಯಾಂಪಲ್ ಅನ್ನು ಕಳುಹಿಸಿದ್ದು, ಪರೀಕ್ಷೆ ಮಾಡಿ ವರದಿ ನೀಡಲು ತಿಳಿಸಲಾಗಿದೆ ಎಂದರು.
ಡಿಜೆಯನ್ನು ಬ್ಯಾನ್ ಮಾಡಬೇಕು ಎಂಬ ನಿರ್ಧಾರವನ್ನು ಸರ್ಕಾರ ಮಾಡಲಾಗಿತ್ತು. ಆದರೆ ಜನರ ಒತ್ತಾಯಕ್ಕೆ, ಅವರ ಆಶೋತ್ತರಗಳಿಗೆ ತೀರಾ ಕಟ್ಟುನಿಟ್ಟು ಕ್ರಮಗಳನ್ನು ಮಾಡಲು ಬರುವುದಿಲ್ಲ. ಹಾಗಾಗಿ ಸಮಯವನ್ನು ನಿರ್ಧರಿಸಿ ಆ ಪರಿಮಿತಿಯಲ್ಲಿ ಡಿಜೆ ಹಾಕಿಕೊಳ್ಳಲು ತಿಳಿಸಿದ್ದೆವು. ಜಿಲ್ಲೆಯಲ್ಲಿ ಸಾವಿರಾರು ಕಡೆ, ರಾಜ್ಯದಲ್ಲಿ ಲಕ್ಷಾಂತರ ಜಾಗಗಳಲ್ಲಿ ಗಣೇಶನ ವಿಸರ್ಜನೆಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜಿಲ್ಲಾಡಳಿತದ ಕಡೆಯಿಂದ ಒಪ್ಪಿಗೆಯನ್ನು ಪಡೆದುಕೊಂಡು ಬಿಗಿ ಬಂದೋಬಸ್ತಿನಲ್ಲಿ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಒಂದು ಭಾಗದಲ್ಲಿ ಮೆರವಣಿಗೆಗೆ ಜಾಗವನ್ನು ಬಿಟ್ಟು, ಮತ್ತೊಂದು ಕಡೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಮಧ್ಯದಲ್ಲಿ ಸ್ಪಷ್ಟವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು. ಆದರೂ ಈ ದುರ್ಘಟನೆ ಸಂಭವಿಸಿರುವುದು ಭದ್ರತಾ ವೈಫಲ್ಯವೇ, ಏನು ಎಂಬುದನ್ನು ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಿ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.ಬ್ರೇಕ್ ಹಾಕಿದ ಗುರುತು ರಸ್ತೆಯಲ್ಲಿದೆ:
ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿ, ಸ್ಥಳೀಯ ಟ್ರಕ್ ಚಾಲಕ ಆಗಿದ್ದಾನೆ. ಭುವನೇಶ್ ಎಂದು ಅವನ ಹೆಸರು. ಅವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ವಶದಲ್ಲಿದ್ದಾನೆ. ಮುಂದೆ ಕಾನೂನಿನ ಮುಖಾಂತರ ಅವನ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಗಾಡಿ ನಿಯಂತ್ರಿಸಲು ಸಹಜವಾಗಿ ಅವನು ಬ್ರೇಕ್ ಹಾಕಿದ್ದಾನೆ, ಅದರ ಗುರುತು ರಸ್ತೆಯ ಮೇಲಿದೆ. ನಂತರ ಆ್ಯಕ್ಸಿಲೇಟರ್ ಒತ್ತಿರುವುದೇ ಘಟನೆಗೆ ಕಾರಣವಾಗಿದೆ. ಇದರ ಕುರಿತು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದರು.ಹೆಚ್ಚಿನ ಪರಿಹಾರಕ್ಕೆ ಸಿಎಂ ಜತೆ ಚರ್ಚಿಸುವೆ:
ಮೃತಪಟ್ಟಿರುವವರು, ಗಾಯಾಳುಗಳ ಪೈಕಿ ಅನೇಕರು ವಿದ್ಯಾರ್ಥಿಗಳು, ಯುವಕರು, ವಯಸ್ಸಾಗಿರುವಂತಹವರು, ಕುಟುಂಬದಲ್ಲಿ ಯಜಮಾನ ಸ್ಥಾನದಲ್ಲಿ ಇರುವಂತವರು ಆಗಿರುವುದರಿಂದ ಅವರ ಕುಟುಂಬದವರು ತಕ್ಷಣ ಚೇತರಿಸಿಕೊಳ್ಳಲು ಮುಖ್ಯಮಂತ್ರಿಯವರು ಸರ್ಕಾರದಿಂದ ೫ ಲಕ್ಷ ರು.ಗಳ ಪರಿಹಾರ ಮೊತ್ತ ಘೋಷಿಸಿದ್ದಾರೆ. ಅದನ್ನು ಇಂದೇ ತಲುಪಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದ್ದೇನೆ. ಸ್ಥಳೀಯ ಜನ ಇನ್ನೂ ಹೆಚ್ಚಿನ ಪರಿಹಾರ ಮೊತ್ತವನ್ನು ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ವಿಷಯ ಕುರಿತಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು.ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಪಂ ಸಿಇಒ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಉಪ ವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಗೀತಾ ಮತ್ತಿತರರು ಇದ್ದರು.