ಹಾಸನ ದುರಂತದಲ್ಲಿ ಮೃತರ ಸಂಖ್ಯೆ 10ಕ್ಕೆ

| Published : Sep 14 2025, 01:04 AM IST

ಸಾರಾಂಶ

ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಘಟನೆ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಯ್ಯನ ಕೊಪ್ಪಲು ಗ್ರಾಮದ‌ ಯುವಕ ಚಂದನ್ (26), ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾನೆ. ಇದೇ ವೇಳೆ, ಅಪಘಾತದಲ್ಲಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತದಲ್ಲಿ ಮೃತಪಟ್ಟವರು ಬಹುತೇಕ ಯುವಕರು:

ದುರಂತದಲ್ಲಿ ಮೃತಪಟ್ಟವರಲ್ಲಿ ಬಹುತೇಕರು ವಿದ್ಯಾರ್ಥಿಗಳು, ಯುವಕರಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಲ್ಲಿ ಆರು ಜನರು ಹೊಳೇನರಸೀಪುರ ತಾಲೂಕಿನವರಾಗಿದ್ದು, ಉಳಿದಂತೆ ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರಿನ ಯುವಕರಾಗಿದ್ದಾರೆ. ಮೃತರಲ್ಲಿ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ.

ಮೃತರನ್ನು ಹೊಳೇನರಸೀಪುರ ತಾಲೂಕು ಹಳೆಕೋಟೆ ಹೋಬಳಿಯ ಕೆ.ಬಿ.ಪಾಳ್ಯದ ರಾಜೇಶ್ (17), ಹೊಳೆನರಸೀಪುರ ತಾಲೂಕು ಮುತ್ತಿಗೆಹೀರಳ್ಳಿ ಗ್ರಾಮದ ಗೋಕುಲ (17), ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿಯ ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಕಬ್ಬಿನಹಳ್ಳಿ ಗ್ರಾಮದ ಪ್ರವೀಣ (25), ಹೊಳೆನರಸೀಪುರ ತಾಲೂಕು ಡನಾಯಕನಹಳ್ಳಿ ಕೊಪ್ಪಲು ಗ್ರಾಮದ ಈಶ್ವರ್ (17), ಹೊಳೆನರಸೀಪುರ ತಾಲೂಕಿನ ಶಿವಯ್ಯನ‌ಕೊಪ್ಪಲು ಗ್ರಾಮದ ಚಂದನ್ (26), ಹಾಸನ ತಾಲೂಕಿನ ಬಂಟಹಳ್ಳಿಯ ಪ್ರಭಾಕರ್ (55), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್ (23), ಚಿಕ್ಕಮಗಳೂರು ಜಿಲ್ಲೆಯ ಮಣ್ಣೇನಹಳ್ಳಿ ಮರ್ಲೆ ಗ್ರಾಮದ ಬಿಇ ವಿದ್ಯಾರ್ಥಿ ಸುರೇಶ್, ಬಳ್ಳಾರಿಯ ಅಂತಿಮ ಬಿಇ ವಿದ್ಯಾರ್ಥಿ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ.

ಮೃತದೇಹಗಳ ಹಸ್ತಾಂತರ:

ಈ ಮಧ್ಯೆ, ಶುಕ್ರವಾರ ರಾತ್ರಿ ದುರಂತದಲ್ಲಿ ಮೃತಪಟ್ಟ 9 ಮಂದಿಯ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಹಿಮ್ಸ್‌ ಆಸ್ಪತ್ರೆಯಲ್ಲಿ ಶನಿವಾರ ನಡೆಸಲಾಯಿತು. ಬಳಿಕ, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಈ ಮಧ್ಯೆ, ಮೃತರ ಗೌರವಾರ್ಥ ಮೊಸಳೆಹೊಸಳ್ಳಿ ಗ್ರಾಮದಲ್ಲಿ ವರ್ತಕರು ಶನಿವಾರ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಗೌರವ ಸೂಚಿಸಿದರು.