ಹುಟ್ಟಿದ ದಿನವೇ ಹಾಸನ ಅವಘಡದಲ್ಲಿ ಉಸಿರು ಚೆಲ್ಲಿದ ಹೊಸದುರ್ಗ ಯುವಕ

| Published : Sep 14 2025, 01:04 AM IST

ಹುಟ್ಟಿದ ದಿನವೇ ಹಾಸನ ಅವಘಡದಲ್ಲಿ ಉಸಿರು ಚೆಲ್ಲಿದ ಹೊಸದುರ್ಗ ಯುವಕ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣಪತಿ ವಿಸರ್ಜನೆ ವೇಳೆ ನಡೆದ ಅವಘಡದಲ್ಲಿ ಇಲ್ಲಿಯ ಎಂಜಿನಿಯರ್‌ ಓದುತ್ತಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಯುವಕನಿಗೆ ಅಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಆ ದಿನವೇ ಯುವಕ ಉಸಿರು ನಿಲ್ಲಿಸಿರುವ ದಾರುಣ ಸಂಗತಿ ಬೆಳಕಿಗೆ ಬಂದಿದೆ.

ಎನ್‌ ವಿಶ್ವನಾಥ್‌ ಶ್ರೀರಾಂಪುರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣಪತಿ ವಿಸರ್ಜನೆ ವೇಳೆ ನಡೆದ ಅವಘಡದಲ್ಲಿ ಇಲ್ಲಿಯ ಎಂಜಿನಿಯರ್‌ ಓದುತ್ತಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಯುವಕನಿಗೆ ಅಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಆ ದಿನವೇ ಯುವಕ ಉಸಿರು ನಿಲ್ಲಿಸಿರುವ ದಾರುಣ ಸಂಗತಿ ಬೆಳಕಿಗೆ ಬಂದಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಎನ್.ಮಿಥುನ್ (21) ಹುಟ್ಟೂರು ಹೊಸದುರ್ಗ ತಾಲೂಕಿನ ಗವಿರಂಗಾಪುರ ಬೆಟ್ಟದಲ್ಲಿ ಮಗನ ಸಾವಿನ ಸುದ್ದಿ ತಿಳಿದ ಯುವಕನ ಕುಟುಂಬದವರ ರೋದನೆ ವಿಧಿಯ ಆಟಕ್ಕೆ ಜನರ ಕಣ್ಣೀರು ಹೇಳತೀರದಾಗಿದೆ.

ಮೃತ ಮಿಥುನ್‌ ಗವಿರಂಗಾಪುರದ ನಿವಾಸಿಯಾಗಿದ್ದ ಕುಸುಮಾ ಹಾಗೂ ನಾಗರಾಜ್‌ ದಂಪತಿ ಮಗನಾಗಿದ್ದು ತಂದೆ ಗವಿರಂಗನಾಥ ಸ್ವಾಮಿ ಬೆಟ್ಟದಲ್ಲಿನ ಗವಿರಂಗನಾಥ ಸ್ವಾಮಿ ದೇವಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಇಬ್ಬರು ಹೆಣ್ಣುಮಕ್ಕಳಿದ್ದು, ಒಬ್ಬ ಮಗಳು ಎಂಜಿನಿಯರಿಂಗ್ ಮಾಡಿದ್ದು ವಿವಾಹವಾಗಿದೆ. ಇನ್ನೊಬ್ಬರು ಹಾಸನದಲ್ಲಿ ಫುಡ್ ಟೆಕ್ನಾಲಜಿ ಓದಿದ್ದಾರೆ.

ಶ್ರೀರಾಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿ (472 ಅಂಕ) ಹಾಗೆಯೇ ಹಂದನಕೆರೆಯಲ್ಲಿ ಪಿಯುಸಿ (427 ಅಂಕ) ಮಾಡಿದ್ದ ಮಿಥುನ್‌ ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಸರ್ಕಾರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದರು. ಮೊದಲಿಂದಲೂ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದಾನೆ. ನಿತ್ಯ ಸ್ವಾಮಿಯ ಸೇವೆ ಮಾಡುವ ಕುಟುಂಬ ಅವರದು.

ಮಗನ ಪಾರ್ಥಿವ ಶರೀರವನ್ನು ಹಾಸನದಿಂದ ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ‘ಮಗನನ್ನು ಪ್ರೀತಿಯಿಂದ ಕಣ್ಣಿಟ್ಟು ಸಾಕಿದ್ದೆವು, ಇನ್ನೇನು ಎಂಜಿನಿಯರ್ ಆಗಿ ನಮಗೆಲ್ಲಾ ಆಧಾರ ಆಗುತ್ತಾನೆ ಎಂದು ಎದುರು ನೋಡುತ್ತಿದ್ದೆ. ಶುಕ್ರವಾರ ಜನ್ಮ ದಿನಕ್ಕೆ ಎಲ್ಲರೂ ಶುಭಾಶಯ ಕೋರಿದ್ದೆವು. ಅಂದೇ ರಾತ್ರಿ ದೇವರ ಎದುರಿನಲ್ಲಿಯೇ ಮಗನ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನೊಂದು ಸೆಮಿಸ್ಟರ್ ಆಗಿದ್ದರೆ ಮಗನ ಎಂಜಿನಿಯರಿಂಗ್ ಮುಗಿಯುತ್ತಿತ್ತು. ನಂತರ ಕೆಇಬಿಯಲ್ಲಿ ಉದ್ಯೋಗ ಮಾಡಬೇಕೆಂಬ ಕನಸಿತ್ತು. ಪ್ರತಿ ದಿನ ರಾತ್ರಿ 8 ಗಂಟೆಗೆ ಫೋನ್ ಮಾಡಿ ಎಲ್ಲರನ್ನೂ ಮಾತನಾಡಿಸುತ್ತಿದ್ದ. ಲ್ಯಾಪ್‌ಟಾಪ್ ಕೊಡಿಸು ಎಂದಿದ್ದ. ಲ್ಯಾಪ್‌ಟಾಪ್ ಖರೀದಿಗೆ ಮುಂದಾಗಿದ್ದೆ. ಶುಕ್ರವಾರ ಮಾತ್ರ ರಾತ್ರಿ ಎರಡು ಬಾರಿ ಫೋನ್ ಮಾಡಿ ಮಾತಾಡಿದ್ದ. ದೇವಾಲಯದಲ್ಲಿ ಹೆಚ್ಚು ಜನರು ಬಂದ ಸಮಯದಲ್ಲಿ ಕೆಲಸದಲ್ಲಿ ಸಹಕರಿಸುತ್ತಿದ್ದ. ಈ ಶನಿವಾರ ಮನೆಗೆ ಬಾ ಎಂದಿದ್ದೆ. ಮುಂದಿನ ವಾರ ಖಂಡಿತ ಬರುತ್ತೇನೆ ಎಂದವನು ಇಂದು ಹೆಣವಾಗಿ ಬಂದಿದ್ದಾನೆ’ ಎಂದು ತಂದೆ ನಾಗರಾಜ್ ಗೋಳಾಡಿದರು.

‘ಒಬ್ಬನೇ ಮಗ ಅತ್ಯಂತ ಪ್ರೀತಿಯಿಂದ ಸಾಕಿದ್ದೆ. ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದೆ. ಗವಿರಂಗನಾಥ ಸ್ವಾಮಿಯ ಸೇವೆ ಮಾಡುತ್ತಿದ್ದೆ. ಅದೆಂತಹ ದುರಾದೃಷ್ಟ, ಗಣೇಶನ ಎದುರಿನಲ್ಲಿಯೇ ಮಗನ ಪ್ರಾಣ ಹೋಗಿದೆ. ನನ್ನ ಕನಸು ಇಂದು ಹೆಣವಾಗಿದೆ, ಉದ್ಯೋಗ ಪಡೆದ ನಂತರ ಮಗನಿಗೆ ಮದುವೆ ಮಾಡಬೇಕೆಂದಿದ್ದೆ. ಅಂತಹ ಮಗನಿಗೆ ಮಣ್ಣು ಹಾಕುವ ಸ್ಥಿತಿ ಯಾವ ತಾಯಂದಿರಿಗೂ ಬೇಡ..’ ಎಂದು ಮಿಥುನ್ ತಾಯಿ ಕುಸುಮ ಭಾವುಕರಾದರು

ಡಿಸೆಂಬರ್‌ಗೆ ಎಂಜಿನಿಯರಿಂಗ್ ಮುಗಿಯುತ್ತಿತ್ತು. ಉದ್ಯೋಗ ಮಾಡುವುದಾಗಿ ಹೇಳುತ್ತಿದ್ದ. ಗುರುವಾರ ರಾತ್ರಿ 12 ಗಂಟೆಗೆ ಹಾಸ್ಟೆಲ್‌ನಲ್ಲಿ ಹುಡುಗರೆಲ್ಲಾ ಸೇರಿ ಕೇಕ್ ಕಟ್ ಮಾಡಿಸಿದ್ದರು. ಶುಕ್ರವಾರ ಎಂದಿನಂತೆ ಕಾಲೇಜು ಮುಗಿಸಿಕೊಂಡು ಹಾಸ್ಟೆಲ್‌ಗೆ ಹೋಗಿದ್ದ ಮಿಥುನ್‌ ರಾತ್ರಿ 8 ಗಂಟೆಗೆ ತಂದೆಗೆ ಫೋನ್ ಮಾಡಿ, ನಂತರ ಗಣೇಶ ವಿಸರ್ಜನೆ ಸ್ಥಳಕ್ಕೆ ಬಂದಿದ್ದ ಒಂದೆರೆಡು ಹೆಜ್ಜೆ ಮುಂದಿದ್ದರೆ ನನ್ನ ಆತ್ಮೀಯ ಸ್ನೇಹಿತ ಜೀವಂತವಾಗಿರುತ್ತಿದ್ದ ಎಂದು ಮಿಥುನ್ ಸ್ನೇಹಿತ ಕೋಲಾರದ ಸಂಜಯ್‌ ಹೇಳಿದರು.

ಇಡೀ ಗವಿರಂಗಾಪುರ ಬೆಟ್ಟ ಗ್ರಾಮವೇ ಈಗ ಶೋಕಸಾಗರದಲ್ಲಿ ಮುಳುಗಿದೆ. ಯುವಕನ ಅಂತ್ಯ ಸಂಸ್ಕಾರವನ್ನು ಶನಿವಾರ ಅವರ ತೋಟದಲ್ಲಿ ನೆರವೇರಿಸಲಾಯಿತು.