ರಸಮೇವು ಜಾನುವಾರುಗಳಿಗೆ ಉತ್ತಮ ಆಹಾರ: ಡಾ. ಮಹೇಶ ಕಡಗಿ

| Published : Sep 14 2025, 01:05 AM IST

ರಸಮೇವು ಜಾನುವಾರುಗಳಿಗೆ ಉತ್ತಮ ಆಹಾರ: ಡಾ. ಮಹೇಶ ಕಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ಬೈಫ್ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ರಸಮೇವು ತಯಾರಿಕೆಯ ತರಬೇತಿ ಕಾರ್ಯಕ್ರಮ ನಡೆಯಿತು.

ಶಿಗ್ಗಾಂವಿ: ಕೃಷಿ ಚಟುವಟಿಕೆ ಉತ್ತೇಜನಕ್ಕೆ ಜಾನುವಾರುಗಳ ರಕ್ಷಣೆ ಅವಶ್ಯವಾಗಿದ್ದು, ಅವುಗಳ ಆರೋಗ್ಯಕ್ಕಾಗಿ ಮತ್ತು ಆಹಾರ ಸಂಕ್ಷಣೆಗಾಗಿ ರೈತರಲ್ಲಿ ಅರಿವು ಅವಶ್ಯವಾಗಿದೆ. ರಸಮೇವು ಜಾನುವಾರುಗಳಿಗೆ ಉತ್ತಮವಾಗಿದ್ದು, ಅದರ ಮಾಹಿತಿ ಪಡೆಯುವುದು ಮುಖ್ಯವಾಗಿದೆ ಎಂದು ಪಶು ವಿಜ್ಞಾನಿ ಡಾ. ಮಹೇಶ ಕಡಗಿ ತಿಳಿಸಿದರು.ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ಬೈಫ್ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ನಡೆದ ರಸಮೇವು ತಯಾರಿಕೆಯ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ರಸಮೇವು ಮಾಡಲು ದಪ್ಪದಂಟಿನ ಜೋಳ ಮತ್ತು ಮುಸುಕಿನ ಜೋಳ ರಸಮೇವಿಗೆ ಸೂಕ್ತವಾದ ಬೆಳೆಗಳು. ರಸಮೇವನ್ನು ಗುಂಡಿಗಳಲ್ಲೂ, ಟ್ರೆಂಚ್‌ಗಳಲ್ಲೂ, ರಸಮೇವಿನ ಚೀಲ ಮತ್ತು ಪ್ಲಾಸ್ಟಿಕ್ ಡ್ರಮ್‌ಗಳಲ್ಲಿಯೂ ತಯಾರಿಸಬಹುದು. ಮೇವಿನಲ್ಲಿ ಸುಮಾರು ಶೇ. ೭೦ರಷ್ಟು ತೇವಾಂಶ ಇರುವಾಗ ಹಾಗೂ ಮುಸುಕಿನ ಜೋಳವಾದಲ್ಲಿ ತೆನೆಯಲ್ಲಿ ಹಾಲು ಆದಾಗ ಮೇವನ್ನು ಕೊಯ್ಲು ಮಾಡುವುದು ಸೂಕ್ತ ಎಂದರು.ಒಂದರಿಂದ ಒಂದೂವರೆ ಇಂಚು ಉದ್ದವಿರುವಂತೆ ಮೇವು ಕತ್ತರಿಸುವ ಯಂತ್ರಗಳ ಸಹಾಯದಿಂದ ಕತ್ತರಿಸಿ ಗುಂಡಿ, ಚೀಲಗಳಲ್ಲಿ ಗಾಳಿಯಾಡದಂತೆ ತುಂಬಬೇಕು. ನಂತರ ಮೇಲ್ಭಾಗವನ್ನು ಸರಿಯಾಗಿ ಗಾಳಿಯಾಡದಂತೆ ಮುಚ್ಚಬೇಕು. ಒಂದು ತಿಂಗಳ ನಂತರ ಈ ಹಸಿರು ಮೇವು ಬಂಗಾರದ ಹಳದಿ ಬಣ್ಣದ ರಸಮೇವಾಗಿ ಪರಿವರ್ತನೆಗೊಳ್ಳುತ್ತದೆ. ರಸಮೇವು ತಯಾರಿಕೆಯಲ್ಲಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗಿ ಮೇವು ಕೆಡದಿರಲು ಸಹಾಯಕವಾಗುವುದು. ಹಸಿರು ಮೇವು ಲಭ್ಯವಿಲ್ಲದ ಕಾಲದಲ್ಲಿ ಈ ರಸಮೇವನ್ನು ಹಾಲು ಹಿಂಡುವ ಆಕಳಿಗೆ ದಿನಕ್ಕೆ ೧೦ ಕೆಜಿಯಷ್ಟು ನೀಡಬಹುದು ಎಂದರು.ತೋಟಗಾರಿಕೆ ಕೇಂದ್ರದ ವಿಜ್ಞಾನಿ ಡಾ. ಸಂತೋಷ ಎಚ್.ಎಂ. ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಾರೆ. ಕಟಾವಿನ ನಂತರ ಬಹುತೇಕ ರೈತರು ಮೇವಿನ ಸಂರಕ್ಷಣೆಯನ್ನು ಮಾಡುವುದಿಲ್ಲ. ರೈತರು ಕಟಾವಿನ ನಂತರವು ಮೆಕ್ಕೆಜೋಳದ ದಂಟು, ಸೊಪ್ಪೆ ಮತ್ತು ರವದಿಯನ್ನು ಸಂರಕ್ಷಣೆ ಮಾಡಿ ಮತ್ತು ರಸಮೇವು ತಯಾರಿಸಿ ಮೇವಿನ ಅಭಾವವಿರುವ ಸಂದರ್ಭದಲ್ಲಿ ಅದನ್ನು ಬಳಕೆ ಮಾಡಬೇಕು ಎಂದರು.ಬೈಫ್‌ ಸಂಸ್ಥೆ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಜಿ.ಎಸ್. ಹೆಗ್ಡೆ ಮಾತನಾಡಿ, ರೈತರು ಬೇಸಿಗೆ ಸಮಯದಲ್ಲಿ ಮೇವಿನ ಅಭಾವವನ್ನು ತಡೆಗಟ್ಟಲು ಹಸಿರು ಮೇವನ್ನು ಸಂರಕ್ಷಿಸಿ ರಸಮೇವು ಮಾಡಬೇಕು ಎಂದರು.ನಂತರ ಗ್ರಾಮದ ರೈತರಿಗೆ ರಸಮೇವು ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಸುಮಾರು ಸುತ್ತಲಿನ ೪೦ ಗ್ರ‍್ರಾಮದ ರೈತರು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಇದ್ದರು.