ಸಾರಾಂಶ
ಭಕ್ತರ ಆಕ್ರೋಶ, ಗದ್ದಲಕ್ಕೆ ಮಣಿದ ಜಿಲ್ಲಾಡಳಿತ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲಕ್ಕೆ ಎಲ್ಲಾ ರೀತಿಯ ವಿಶೇಷ ಪಾಸುಗಳನ್ನು ರದ್ದುಪಡಿಸಿ ಧರ್ಮ ದರ್ಶನಕ್ಕಷ್ಟೇ ಅವಕಾಶ ನೀಡಿದೆ.
ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲಕ್ಕೆ ಎಂಟನೇ ದಿನವಾದ ಗುರುವಾರ ರಾಜ್ಯದ ವಿವಿಧೆಡೆಯಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಏಳೆಂಟು ಗಂಟೆ ಕಾದರೂ ದರ್ಶನ ಸಾಧ್ಯವಾಗದೆ ಜಿಲ್ಲಾಡಳಿತ ವಿರುದ್ಧ ಹಾಗೂ ವಿಶೇಷ ಪಾಸುಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಕೊನೆಗೆ ಭಕ್ತರ ಆಕ್ರೋಶ, ಗದ್ದಲಕ್ಕೆ ಮಣಿದ ಜಿಲ್ಲಾಡಳಿತ ಎಲ್ಲಾ ರೀತಿಯ ವಿಶೇಷ ಪಾಸುಗಳನ್ನು ರದ್ದುಪಡಿಸಿ ಧರ್ಮ ದರ್ಶನಕ್ಕಷ್ಟೇ ಅವಕಾಶ ನೀಡಿದೆ.
ಈ ವರ್ಷ ಹಾಸನಾಂಬೆಯ ದರ್ಶನಕ್ಕಾಗಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಪರದಾಟ ಅನುಭವಿಸಿತು. ಧರ್ಮದರ್ಶನದ ಸಾಲು ಮೂರು ಕಿ.ಮೀ.ಗೂ ಹೆಚ್ಚು ಉದ್ದ ಬೆಳೆದಿತ್ತು. ಇನ್ನು ವಿಐಪಿ, ವಿವಿಐಪಿ, 1000 ರುಪಾಯಿಯ ವಿಶೇಷ ಪಾಸ್, ಮತ್ತಿತರ ಪಾಸ್ ಹೊಂದಿರುವವರ ಸಾಲಿನಲ್ಲೂ ಕ್ಯೂ ಇತ್ತು. ಈ ಬಾರಿ 20 ಲಕ್ಷ ಮಂದಿ ದೇವಿ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಈ ಗೊಂದಲ ಸೃಷ್ಟಿಯಾಗಿತ್ತು. ಜನರನ್ನು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿತ್ತು. ಇದರ ಜತೆಗೆ ಬೇಕಾಬಿಟ್ಟಿಯಾಗಿ ಹಂಚಿರುವ ವಿಐಪಿ ಪಾಸುಗಳಿಂದಾಗಿ ಜಿಲ್ಲಾಡಲಿತ ಈ ಬಾರಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೂ ಗುರಿಯಾಗಬೇಕಾಯಿತು.
ಲಾಠಿ ಪ್ರಹಾರ: ಇದರ ಮಧ್ಯೆ, ಭದ್ರತೆಗೆ ನಿಯೋಜಿಸಿರುವ ಪೊಲೀಸರು ಪೌರ ಕಾರ್ಮಿಕರ ಮೇಲೆ ದರ್ಪ ತೋರುತ್ತಿದ್ದಾರೆ, ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಪೌರಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಗ ಪೊಲೀಸರು ಮತ್ತು ಪೌರಕಾರ್ಮಿಕರ ನಡುವೆ ನೂಕಾಟ-ತಳ್ಳಾಟ ನಡೆದು ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಬೇಕಾಯಿತು.