ಕನ್ನಡಪ್ರಭ ವಾರ್ತೆ ಹಾಸನಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ವಿಲೀನಗೊಳಿಸುವ ಸರ್ಕಾರದ ಕ್ರಮಕ್ಕೆ ಹಾಸನ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಾಸನ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶವನ್ನು ನಡೆಸಲಾಯಿತು. ಸಮಾವೇಶದಲ್ಲಿ ಪಾಲ್ಗೊಂಡ ಸಾರ್ವಜನಿಕರು, ಪೋಷಕರು, ಸಾಹಿತಿಗಳು ಹಾಗೂ ಶಿಕ್ಷಣ ಹೋರಾಟಗಾರರು ಈ ಯೋಜನೆಯಿಂದ ಬಡ, ರೈತ ಮತ್ತು ಕಾರ್ಮಿಕ ವರ್ಗದ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ೫ ಕಿ.ಮೀ. ವ್ಯಾಪ್ತಿಯ ಶಾಲೆಗಳನ್ನು ಜೋಡಿಸುವ ಯೋಜನೆ ಜಾರಿಗೆ ತಂದರೂ ಮಕ್ಕಳ ಸುರಕ್ಷತೆ, ಸಾರಿಗೆ ವ್ಯವಸ್ಥೆ ಮತ್ತು ನಿರ್ವಹಣೆಯ ಕುರಿತು ಸ್ಪಷ್ಟ ಮಾರ್ಗಸೂಚಿಗಳು ಇಲ್ಲವೆಂದು ಆರೋಪಿಸಿದರು. ಉಚಿತ ಬಸ್ ವ್ಯವಸ್ಥೆ ಘೋಷಿಸಿದರೂ ಅದರ ಜವಾಬ್ದಾರಿಯನ್ನು ಎಸ್‌ಡಿಎಂಸಿ ಮತ್ತು ಪೋಷಕರ ಮೇಲೆ ಹಾಕಿರುವುದು ಅಸಾಧ್ಯ ಕ್ರಮ ಎಂದು ಟೀಕಿಸಿದರು.

“ಪ್ರತಿ ಗ್ರಾಮ ಪಂಚಾಯಿತಿಗೂ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಅದನ್ನು ಸ್ಥಳೀಯ ಸಮಿತಿಗಳ ಮೇಲೆ ಹಾಕುವುದು ಸರಿಯಲ್ಲ. ಕೆಪಿಎಸ್ ಶಾಲೆಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡುವ ಯೋಚನೆ ಶಿಕ್ಷಣದ ಖಾಸಗೀಕರಣದ ದಾರಿಗೆ ನೂಕುವ ಪ್ರಯತ್ನವಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಆರ್ಥಿಕ ಹೊಣೆಗಾರಿಕೆಯಿಂದ ಹಿಂದೆ ಸರಿದರೆ, ಶಾಲೆಗಳ ನಿರ್ವಹಣೆ ದುರ್ಬಲಗೊಳ್ಳಲಿದೆ. ಶಿಕ್ಷಣಕ್ಕೆ ಹಣವಿಲ್ಲವೆಂದು ಹೇಳುವ ಸರ್ಕಾರವೇ ಅಭಿವೃದ್ಧಿ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆಯುತ್ತಿರುವುದು ವೈರುದ್ಯವೆಂದು ಪ್ರಶ್ನಿಸಿದರು.ಮೈಸೂರಿನ ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳ ಉಳಿವಿನ ಪ್ರಶ್ನೆ ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದನ್ನು ಬಿಟ್ಟು, ಮಕ್ಕಳ ಶಿಕ್ಷಣದ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ.ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲೇ ಬಲವಾದ ಶಿಕ್ಷಣ ನೀಡಬೇಕು, ಕನ್ನಡದ ಬುನಾದಿ ಗಟ್ಟಿಯಾದಾಗ ಮಾತ್ರ ಇತರ ಭಾಷೆಗಳ ಅಧ್ಯಯನ ಸುಲಭವಾಗುತ್ತದೆ ಎಂದು ಹೇಳಿದರು.ಲೇಖಕಿ ಹಾಗೂ ಮಹಿಳಾ ಹೋರಾಟಗಾರ್ತಿ ರೂಪಾ ಹಾಸನ ಮಾತನಾಡಿ, ಸರಕಾರಿ ಶಾಲೆ ಒಂದು ಸಾಂಸ್ಕೃತಿಕ ಕೇಂದ್ರ. ಅದನ್ನು ಕೊಲ್ಲುವುದು ಅಂದರೆ ಸಂಸ್ಕೃತಿಯನ್ನೇ ಕೊಲ್ಲುವುದು. ಶಿಕ್ಷಣ ಹಕ್ಕು ಕಾಯ್ದೆಗೆ ವಿರುದ್ಧವಾದ ನೀತಿಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಯುತ್ತದೆ. ಕೊನೆಯವರೆಗೂ ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.ಸರಕಾರಿ ಶಾಲೆ ಉಳಿಸುವ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಮಮತಾ ಅಧ್ಯಕ್ಷೆ, ಚೈತ್ರಾ ಕಾರ್ಯದರ್ಶಿ ಆಗಿ ಆಯ್ಕೆಯಾದರು. ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ರೂಪ ಹಾಸನ - ಖ್ಯಾತ ಬರಹಗಾರರು, ಆರ್‌. ಪಿ. ವೆಂಕಟೇಶ್ ಮೂರ್ತಿ - ಬರಹಗಾರರು ಹಾಗೂ ಸಾಮಾಜಿಕ ಹೋರಾಟಗಾರರು, ಪ್ರೊ. ಮಲ್ಲೇಶ್ ಗೌಡ - ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಪ್ರೊ. ಶಿವಶಂಕರ್ - ನಿವೃತ್ತ ಪ್ರಾಂಶುಪಾಲರು, ಎನ್.ಡಿ.ಆರ್.ಕೆ ಕಾಲೇಜು, ಹಂಪನಹಳ್ಳಿ ತಿಮ್ಮೇಗೌಡ್ರು - ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳು, ರಾಜು ಗೊರೂರು - ಸಾಮಾಜಿಕ ಹೊರಟಗಾರರು ಆಯ್ಕೆಗೊಂಡರು.ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಣಗಾಲ್ ಮೂರ್ತಿ, ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ. ಭಟ್, ಎಐಯುಟಿಯುಸಿ ಕಾರ್ಮಿಕ ನಾಯಕ ಹನುಮೇಶ್, ಎಐಎಂಎಸ್‌ಎಸ್ ಮಹಿಳಾ ಮುಖಂಡೆ ನಿರ್ಮಲಾ ಎಚ್.ಎಲ್., ದೇವರಾಜಪುರ ಸರಕಾರಿ ಶಾಲೆ ಉಳಿಸಿ ಸಮಿತಿ ಅಧ್ಯಕ್ಷ ಮಲ್ಲೇಶ್ ಸೇರಿದಂತೆ ಅನೇಕರು ಭಾಗವಹಿಸಿದರು. ಜಿಲ್ಲಾ ಅಧ್ಯಕ್ಷ ಚೈತ್ರಾ, ಉಪಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ಸುಶ್ಮಾ ಹಾಗೂ ಪದಾಧಿಕಾರಿಗಳಾದ ಪುರುಷೋತ್ತಮ, ಶ್ರೇಷ್ಠಾ, ಧನಂಜಯ, ಧನರಾಜ್, ತಿಲಕ್, ಧನುಶ್ರೀ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.