ಸಾರಾಂಶ
ಗುತ್ತಿಗೆದಾರರು ಮಳೆ ನಡುವೆ ಚತುಷ್ಪಥ ರಸ್ತೆ ಕಾಮಗಾರಿ ಆರಂಭಿಸಿದ ಪರಿಣಾಮ ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಸತತ ೧೨ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು.
ಸಕಲೇಶಪುರ : ಗುತ್ತಿಗೆದಾರರು ಮಳೆ ನಡುವೆ ಚತುಷ್ಪಥ ರಸ್ತೆ ಕಾಮಗಾರಿ ಆರಂಭಿಸಿದ ಪರಿಣಾಮ ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಸತತ ೧೨ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು.
ತಾಲೂಕಿನ ಆನೆಮಹಲ್ ಗ್ರಾಮ ಸಮೀಪ ಬಾಕಿ ಉಳಿದಿರುವ ಚತುಷ್ಪಥ ಕಾಮಗಾರಿಯನ್ನು ಮಂಗಳವಾರ ರಾತ್ರಿ ಆರಂಭಿಸಲಾಗಿತ್ತು. ಕಾಮಗಾರಿ ಆರಂಭವಾದ ವೇಳೆ ಭಾರೀ ಪ್ರಮಾಣಲ್ಲಿ ಮಳೆ ಸುರಿದಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು. ಆದರೆ ಕಾಮಗಾರಿ ಆರಂಭವಾದ ವೇಳೆ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದ ಹೊಂಡಗಳನ್ನು ಸೃಷ್ಟಿಸಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದರಿಂದಾಗಿ ಬೆಂಗಳೂರು ಮಂಗಳೂರು ನಡುವೆ ವಾಹನ ಸಂಚಾರವನ್ನು ಮಂಗಳವಾರ ಮಧ್ಯರಾತ್ರಿ ಏಕಾಏಕಿ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ರಸ್ತೆಯ ಎರಡೂ ಬದಿ ಸಾವಿರಾರು ವಾಹನಗಳು ಕಿ.ಮೀ.ಗಟ್ಟಲೆ ಸರತಿ ಸಾಲಿನಲ್ಲಿ ನಿಲುಗಡೆಯಾಗುವಂತ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದ ಸಾರಿಗೆ ಬಸ್‌ಗಳು, ಕಾರುಗಳಲ್ಲಿ ಇದ್ದ ಮಹಿಳೆಯರು ಮಕ್ಕಳು ಊಟ ತಿಂಡಿಯಿಲ್ಲದೆ, ಜಲಬಾಧೆ ತೀರಿಸಿಕೊಳ್ಳಲು ಪರದಾಡುವಂತಾಯಿತು. ಬುಧವಾರ ಮುಂಜಾನೆ ಸಹ ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಳ್ಳದ ಕಾರಣ ತಾಲೂಕಿನ ಗ್ರಾಮೀಣ ಭಾಗದಿಂದ ಶಾಲಾ ಕಾಲೇಜುಗಳಿಗೆ ಪರೀಕ್ಷೆ ಎದುರಿಸಲು ಹೋಗುತ್ತಿದ್ದ ವಿದ್ಯಾರ್ಥಿಗಳು ಸಕಾಲಕ್ಕೆ ಪರೀಕ್ಷೆಗೆ ಹಾಜರಾಗದೆ ಪರದಾಡುವಂತಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು , ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ೮ ವರ್ಷಗಳಿಂದ ನಿರಂತರವಾಗಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಆದರೂ ಸಹ ಹಾಸನದಿಂದ ಮಾರನಹಳ್ಳಿವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಮಂಗಳವಾರ ಸುರಿಯುವ ಮಳೆ ನಡುವೆ ಮುಂದಾಲೋಚನೆ ಇಲ್ಲದೆ ಕಾಮಗಾರಿ ಆರಂಭಿಸಿದ್ದು ಅವ್ಯವಸ್ಥೆ ಸೃಷ್ಟಿಗೆ ಕಾರಣವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
*ಬಾಕ್ಸ್‌ನ್ಯೂಸ್: ಸಮಸ್ಯೆ ಬಗೆಹರಿಸಿದ ಶಾಸಕ
ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವುದನ್ನು ಗಮನಿಸಿದ ಶಾಸಕ ಸಿಮೆಂಟ್ ಮಂಜು ಕಾಮಗಾರಿಯಿಂದ ಕೆಸರುಮಯವಾಗಿದ್ದ ರಸ್ತೆಗೆ ಬುಧವಾರ ಮುಂಜಾನೆ ಜಲ್ಲಿ ತರಿಸಿ ರಸ್ತೆಗೆ ಹಾಕುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದಾಗಿ ಬುಧವಾರ ಸಂಜೆ ವೇಳೆಗೆ ಬಹುತೇಕ ಟ್ರಾಫಿಕ್ ಸಮಸ್ಯೆ ಹತೋಟಿಗೆ ಬಂದಿತು.