ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚೆಗೆ ಆಲೂರು ತಾಲೂಕಿನ ರಾಜನಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಹತ್ಯೆಗೀಡಾದ ವೀರಪ್ಪ ಪ್ರಕರಣರವನ್ನು ಖಂಡಿಸಿ, ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ ಹತ್ಯೆಗೈದವರನ್ನು ಶಿಕ್ಷೆಗೆ ಗುರಿಪಡಿಸುವಂತೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಿಐಟಿಯು, ಮಾದಿಗ ದಂಡೋರ ಹಾಗೂ ಡಿ. ಎಚ್.ಎಸ್. ಸಂಘಟನೆಗಳ ನೇತೃತ್ವದಲ್ಲಿ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಸಿಐಟಿಯು ಮುಖಂಡ ಧರ್ಮೇಶ್ ಮಾತನಾಡಿ, ಫೆಬ್ರವರಿ ೧೭ರಂದು ರಂದು ಆಲೂರು ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ವೀರಪ್ಪ ಅವರ ಹತ್ಯೆ ಅಮಾನುಷ ಹಾಗೂ ಮಾನವೀಯತೆಯನ್ನೇ ಮೀರಿದ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಘಟನೆ ನಡೆದು ೧೫ ದಿನಗಳು ಕಳೆದರೂ ತನಿಖೆ ನಿಧಾನಗತಿಯಲ್ಲಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ. ಹತ್ಯೆಗೈದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ನ್ಯಾಯದ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ. ಮೇಲ್ನೋಟಕ್ಕೆ ಆಸ್ತಿ ವಿವಾದ ಕಾರಣವಾಗಿರಬಹುದೆಂದು ಕಂಡರೂ, ಘಟನೆಯ ಕ್ರೌರ್ಯ ಮತ್ತು ಸಂಚುನಿಷ್ಠ ಸ್ವರೂಪವನ್ನು ಗಮನಿಸಿದರೆ ಇದರ ಹಿಂದೆ ವ್ಯವಸ್ಥಿತ ಪಿತೂರಿ ಇರುವ ಅನುಮಾನ ವ್ಯಕ್ತವಾಗುತ್ತದೆ ಎಂದರು. ಆದ್ದರಿಂದ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲೂ ಸಮಗ್ರ ಹಾಗೂ ತ್ವರಿತ ತನಿಖೆ ನಡೆಸಿ, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸರ್ಕಾರವು ವೀರಪ್ಪರವರ ಕುಟುಂಬಕ್ಕೆ ಸಮರ್ಪಕ ಪರಿಹಾರ ಹಾಗೂ ರಕ್ಷಣೆ ಒದಗಿಸಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸದಿದ್ದಲ್ಲಿ, ವೀರಪ್ಪರವರ ಸಾವಿಗೆ ನ್ಯಾಯ ಸಿಗುವವರೆಗೆ ತೀವ್ರ ಹಾಗೂ ಬೃಹತ್ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಸಂವಿಧಾನ ಓದು ರಾಜು ಗೊರೂರು, ರಾಜಶೇಖರ್‌, ವಿಜಯಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ರು.