ಕೃಷಿ ವಿವಿ ವಿಚಾರದಲ್ಲಿ ಹಾಸನ ರಾಜಕಾರಣ ಸರಿಯಲ್ಲ: ಪ್ರೊ.ಜೆಪಿ

| Published : Mar 28 2025, 12:33 AM IST

ಕೃಷಿ ವಿವಿ ವಿಚಾರದಲ್ಲಿ ಹಾಸನ ರಾಜಕಾರಣ ಸರಿಯಲ್ಲ: ಪ್ರೊ.ಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣದಲ್ಲಿ ದೇವೇಗೌಡರ ಕುಟುಂಬವನ್ನು ಮಂಡ್ಯ ಜಿಲ್ಲೆ ಪೋಷಣೆ ಮಾಡುತ್ತಿದೆ. ರಾಮನಗರ ಜಿಲ್ಲೆಯವರು ಕುಮಾರಸ್ವಾಮಿ ಅವರನ್ನು ಕೈಬಿಟ್ಟರೂ ಮಂಡ್ಯ ಜಿಲ್ಲೆಯ ಜನರು ರಾಜಕೀಯವಾಗಿ ಪುನರ್ಜನ್ಮ ಕೊಟ್ಟು ಕೇಂದ್ರ ರಾಜಕಾರಣಕ್ಕೆ ಕಳುಹಿಸಿದ್ದಾರೆ. ಕುಮಾರಸ್ವಾಮಿ ಅವರು ಹಾಸನ ರಾಜಕಾರಣಿಗಳ ಬಾಯಿಮುಚ್ಚಿಸುವ ಕೆಲಸ ಮಾಡಬೇಕಿದೆ.

ಹಾಸನಕ್ಕೆ ಸಾಕಷ್ಟು ಸಂಸ್ಥೆಗಳು ಹೋದರೂ ಇಲ್ಲಿನವರು ತಗಾದೆ ತೆಗೆದಿಲ್ಲ । ಕೃಷಿ ವಿವಿಗೆ ಎಚ್.ಡಿ.ರೇವಣ್ಣ ಅಪಸ್ವರ; ಹಾಸನ ಜಿಲ್ಲೆ ಹೊರಗಿಡುವಂತೆ ಒತ್ತಡಕ್ಕೆ ವಿರೋಧ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಕೃಷಿ ವಿಶ್ವವಿದ್ಯಾಲಯ ವಿಚಾರಕ್ಕೆ ಹಾಸನ ಜಿಲ್ಲಾ ರಾಜಕಾರಣ ಎಂಟ್ರಿ ಕೊಟ್ಟಿದೆ. ಹಾಸನ- ಮಂಡ್ಯ ಜಿಲ್ಲೆಗಳು ನನ್ನೆರಡು ಕಣ್ಣುಗಳು ಎಂದೇಳುವ ಎಚ್.ಡಿ.ದೇವೇಗೌಡರ ಕುಟುಂಬದ ಕುಡಿ ಎಚ್.ಡಿ.ರೇವಣ್ಣ ಕೃಷಿ ವಿವಿ ವಿರುದ್ಧ ಅಪಸ್ವರ ಎತ್ತಿದ್ದಾರೆ. ಹಾಸನ ಜಿಲ್ಲೆಯನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಹೊರಗಿಡುವಂತೆ ಒತ್ತಾಯಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಮಂಡ್ಯ ಕೃಷಿ ವಿಶ್ವವಿದ್ಯಾನಿಲಯಕ್ಕೆ ಎಚ್.ಡಿ.ರೇವಣ್ಣನವರು ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಸನ ಜಿಲ್ಲೆಗೆ ಸಾಕಷ್ಟು ಸಂಸ್ಥೆಗಳು ಹೋದರೂ ಮಂಡ್ಯ ಜಿಲ್ಲೆಯ ರಾಜಕಾರಣಿಗಳು ಚಕಾರ ಎತ್ತಿಲ್ಲ. ಮಂಡ್ಯಕ್ಕೆ ಕೊಟ್ಟಂಥ ಅನುದಾನ ಹಾಸನ ಪಾಲಾದರೂ ಪ್ರಶ್ನೆ ಮಾಡಿಲ್ಲ. ಇದರ ನಡುವೆಯೂ ಕೃಷಿ ವಿಶ್ವವಿದ್ಯಾಲಯದ ವಿಚಾರದಲ್ಲಿ ರಾಜಕೀಯ ದ್ವೇಷವನ್ನು ಮುಂದಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಂಡ್ಯ ಕೃಷಿ ವಿಶ್ವವಿದ್ಯಾಲಯವಾಗುತ್ತಿರುವುದರಿಂದ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳನ್ನು ವ್ಯಾಪಿಸಿಕೊಳ್ಳಲಿದೆ. ಆದರೆ, ಎಚ್.ಡಿ.ರೇವಣ್ಣ ಸೇರಿದಂತೆ ಹಾಸನ ರಾಜಕಾರಣಿಗಳು ಹಾಸನ ಕೃಷಿ ಕಾಲೇಜುಗಳ ಮಾನ್ಯತೆಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲೇ ಉಳಿಸಿಕೊಳ್ಳಬೇಕೆಂದು ಶಾಸನಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಹಾಸನದಿಂದ ಬೆಂಗಳೂರಿಗೆ ೧೫೦ ಕಿ.ಮೀ. ದೂರವಿದ್ದರೆ, ಮಂಡ್ಯಕ್ಕೆ ೧೦೦ ಕಿ.ಮೀ. ದೂರವಿದೆ. ಪ್ರಾದೇಶಿಕವಾಗಿ ಮಂಡ್ಯ- ಹಾಸನ ಸಮಾನ ಅಂಶಗಳು, ಕೃಷಿ ಚಟುವಟಿಕೆಯನ್ನು ಹೊಂದಿವೆ. ಅಪರೂಪಕೊಮ್ಮೆ ಕೃಷಿ ವಿಶ್ವವಿದ್ಯಾನಿಲಯ ಬಂದಿರುವುದನ್ನು ಸಹಿಸಿಕೊಳ್ಳಾರದೆ ಹಪಹಪಿಸುತ್ತಿರುವುದು ಮಂಡ್ಯಕ್ಕೆ ಮಾಡುತ್ತಿರುವ ಅಪಚಾರ ಎಂದು ಟೀಕಿಸಿದರು.

ರಾಜಕಾರಣದಲ್ಲಿ ದೇವೇಗೌಡರ ಕುಟುಂಬವನ್ನು ಮಂಡ್ಯ ಜಿಲ್ಲೆ ಪೋಷಣೆ ಮಾಡುತ್ತಿದೆ. ರಾಮನಗರ ಜಿಲ್ಲೆಯವರು ಕುಮಾರಸ್ವಾಮಿ ಅವರನ್ನು ಕೈಬಿಟ್ಟರೂ ಮಂಡ್ಯ ಜಿಲ್ಲೆಯ ಜನರು ರಾಜಕೀಯವಾಗಿ ಪುನರ್ಜನ್ಮ ಕೊಟ್ಟು ಕೇಂದ್ರ ರಾಜಕಾರಣಕ್ಕೆ ಕಳುಹಿಸಿದ್ದಾರೆ. ಕುಮಾರಸ್ವಾಮಿ ಅವರು ಹಾಸನ ರಾಜಕಾರಣಿಗಳ ಬಾಯಿಮುಚ್ಚಿಸುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.

ಮಂಡ್ಯ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಕೃಷಿ ವಿಶ್ವವಿದ್ಯಾನಿಲಯ ಅತ್ಯಗತ್ಯವಾಗಿದೆ. ಇದರಿಂದ ಹಾಸನ ಮಹತ್ವವಾದದ್ದನ್ನೇನೂ ಕಳೆದುಕೊಳ್ಳುವುದಿಲ್ಲ. ಹಾಸನ ಜಿಲ್ಲೆಯಷ್ಟು ಬೆಳವಣಿಗೆಯನ್ನು ಮಂಡ್ಯ ಕಾಣದಿರುವುದು ದುರದೃಷ್ಟಕರ. ಇಂತಹ ಸನ್ನಿವೇಶದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಚಾರದಲ್ಲಿ ಹಾಸನ ರಾಜಕಾರಣಿಗಳು ಅಸ್ಪಶ್ಯತೆಯ ಭಾವನೆಯನ್ನು ಹೊಂದುವುದು ಸರಿಯಲ್ಲ ಎಂದು ಹೇಳಿದರು.

ರಾಗಿ, ಭತ್ತದ ಜೊತೆಗೆ ಕಬ್ಬು ತಳಿಗಳು, ಮುಸುಕಿನ ಜೋಳ, ಪಶುಗಳಿಗೆ ಸಂಬಂಧಿಸಿದ ಜೋಳಗಳಲ್ಲಿಯೂ ವಿ.ಸಿ.ಫಾರಂ ಕೊಡುಗೆ ಮಹತ್ವದ್ದು, ಇವುಗಳಲ್ಲಿ ಬಹಳಷ್ಟಕ್ಕೆ ವಿಶ್ವಮಾನ್ಯತೆ ದೊರಕಿದೆ. ಇಂತಹ ವೈಶಿಷ್ಟ್ಯತೆಯನ್ನು ಹೊಂದಿರುವ ವಿ.ಸಿ.ಫಾರಂ ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ ರೂಪುಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕೃಷಿ ವಿಶ್ವವಿದ್ಯಾನಿಲಯದ ವಿಚಾರದಲ್ಲಿ ರಾಜಕಾರಣ ಮಾಡದೆ ಒಗ್ಗಟ್ಟಿನಿಂದ ಮುನ್ನಡೆಯುವುದಕ್ಕೆ ಹಾಸನ ರಾಜಕಾರಣಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

೨೭ಕೆಎಂಎನ್‌ಡಿ-೩

ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿದರು.