ಹೊರಬಿದ್ದ ಹಾಸನ ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್‌ ಫಲಿತಾಂಶ

| Published : May 24 2024, 12:47 AM IST

ಹೊರಬಿದ್ದ ಹಾಸನ ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್‌ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳು ಹಾಗೂ ಎಂಎ, ಎಂಕಾಂ, ಎಂಎಸ್ಸಿ ಮತ್ತು ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಈ ಪದವಿಗಳ ಫಲಿತಾಂಶವನ್ನು ಮೇ.22 ರ ಬುಧವಾರ ಪ್ರಕಟಿಸಲಾಗಿದೆ.

ಶೈಕ್ಷಣಿಕ ಮಾಹಿತಿ । 22ಕ್ಕೆ ಪ್ರಥಮ ವರ್ಷದ ಸ್ನಾತಕ, ಸ್ನಾತಕೋತ್ತರ ಪದವಿಗಳ ಫಲಿತಾಂಶ ಪ್ರಕಟ । ಕಳೆದ ವರ್ಷ ಶುರುವಾಗಿದ್ದ ವಿವಿ

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳು ಹಾಗೂ ಎಂಎ, ಎಂಕಾಂ, ಎಂಎಸ್ಸಿ ಮತ್ತು ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಈ ಪದವಿಗಳ ಫಲಿತಾಂಶವನ್ನು ಮೇ.22 ರ ಬುಧವಾರ ಪ್ರಕಟಿಸಲಾಗಿದೆ.

ಹಾಸನ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆಯನ್ನು ಜಿಲ್ಲೆಯ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ವಿಷಯವಾರು ಮೌಲ್ಯಮಾಪಕರು ಬಹು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಎಂಎಸ್) ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಹಾಸನ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ. ೨೦೨೩-೨೦೨೪ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್‌ನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ ರಾಜ್ಯದ ಮೊದಲ ನೂತನ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಹಾಸನ ವಿಶ್ವವಿದ್ಯಾಲಯ ಭಾಜನವಾಗಿದೆ.

ಈ ಕುರಿತು ಮಾತನಾಡಿದ ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ತಾರನಾಥ್, ಕರ್ನಾಟಕ ಸರ್ಕಾರವು ೨೦೨೨-೨೩ನೇ ಸಾಲಿನಲ್ಲಿ ಹಾಸನದಲ್ಲಿ ನೂತನವಾಗಿ ಹಾಸನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ೨೦೨೩ರ ಏಪ್ರಿಲ್‌ 28 ರಂದು ಅಧಿಕೃತವಾಗಿ ಉದ್ಘಾಟನೆ ಮಾಡಿತ್ತು. ಹಾಸನ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ತನ್ನ ಅಧಿನಿಯಮದ ಅಡಿಯಲ್ಲಿ ೨೦೨೩ ರ ಜುಲೈ ೨೫ ರಂದು ಮಾನ್ಯತೆಯನ್ನು ನೀಡಿ ಪ್ರಕಟಣೆ ಹೊರಡಿಸಿತ್ತು. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಸರ್ವತೋಮುಖ ಪ್ರಗತಿಗಾಗಿ ಇದು ಪೂರಕವಾಗಿದೆ ಎಂದು ತಿಳಿಸಿದರು.

ಹಾಸನ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪುಟ್ಟಸ್ವಾಮಿ ಮಾತನಾಡಿ, ‘ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ತೊಡಕುಗಳು ಆಗಬಾರದು ಎಂಬ ಸದುದ್ದೇಶದಿಂದ ಮೌಲ್ಯಮಾಪನ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲಾಗಿತ್ತು. ಪರೀಕ್ಷೆಗಳು ಮುಗಿದ ನಂತರ ಶೀಘ್ರವಾಗಿ ಮೌಲ್ಯಮಾಪನ ಮುಗಿಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ’ ಎಂದು ಹೇಳಿದರು.

ಹಾಸನ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ತಫಜುಲ್ ಹುಸೇನ್, ಸಿಡಿಸಿಯ ನಿರ್ದೇಶಕ ಪ್ರೊ.ಮಹಾದೇವ ಪ್ರಸಾದ್ ಎಂ. ಹಾಗೂ ಯುಯುಎಂಎಸ್ ನೋಡಲ್ ಅಧಿಕಾರಿ ಪ್ರೊ.ಶರಣಪ್ಪ ಪಿ. ಇದ್ದರು.