ಸಾರಾಂಶ
ಎಚ್.ಟಿ.ಮೋಹನ್ ಕುಮಾರ್
ಕನ್ನಡಪ್ರಭ ವಾರ್ತೆ ಹಾಸನಮೈಸೂರು ವಿವಿಯನ್ನು ಒಡೆದು ರಚಿಸಿದ ಮೂರು ವಿಶ್ವವಿದ್ಯಾಲಯಗಳ ಪೈಕಿ ಹಾಸನ ವಿಶ್ವವಿದ್ಯಾಲಯವೂ ಒಂದು. ಇನ್ನೆರಡು ಚಾಮರಾಜನಗರ ಮತ್ತು ಮಂಡ್ಯ ವಿಶ್ವವಿದ್ಯಾಲಯಗಳು. ಈ ಎರಡು ವಿವಿಗಳಿಗಿಂತ ಹಾಸನ ವಿವಿಯ ಜೋಳಿಗೆಗೆ ಹೆಚ್ಚಿನ ಕಾಲೇಜುಗಳು ಲಭ್ಯವಾಗಿದ್ದರಿಂದ ಹಣಕಾಸು ಪರಿಸ್ಥಿತಿ ವಿಚಾರದಲ್ಲಿ ಉಸಿರುಗಟ್ಟುವ ಪರಿಸ್ಥಿತಿಯೇನೂ ಇಲ್ಲ. ಆದರೂ, ಮೂಲಸೌಕರ್ಯ, ಕ್ಯಾಂಪಸ್ ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಿಸುತ್ತಿದೆ.
ಕೆಲವು ಹೊಸ ವಿವಿಗಳಲ್ಲಿ ಒಬ್ಬರೂ ಖಾಯಂ ಸಿಬ್ಬಂದಿಯೇ ಇಲ್ಲದೆ ನಡೆಯುತ್ತಿವೆ. ಆದರೆ, ಹಾಸನ ವಿವಿಯಲ್ಲಿ ಸುಮಾರು 13 ಮಂದಿ ಖಾಯಂ ಬೋಧಕರು, ನಾಲ್ವರು ಖಾಯಂ ಬೋಧಕೇತರ ನೌಕರರೂ ಇದ್ದಾರೆ. ಈ ಸಿಬ್ಬಂದಿಯ ವೇತನ ಸರ್ಕಾರದಿಂದಲೇ ಸಂದಾಯವಾಗುವುದರಿಂದ, ಉಳಿದ 63 ಮಂದಿ ಅತಿಥಿ ಉಪನ್ಯಾಸಕರು, 42 ಬೋಧಕೇತರ ಗುತ್ತಿಗೆ ನೌಕರರಿಗೆ ವಿವಿಯೇ ತನ್ನ ಆಂತರಿಕ ಆದಾಯದಿಂದ ಗೌರವಧನ ನೀಡುತ್ತಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಉಳಿಯುತ್ತಿಲ್ಲ.ಹಿಂದಿನ ಸರ್ಕಾರ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರವಾಗಿದ್ದ ಹಾಸನದ ಹೇಮ ಗಂಗೋತ್ರಿಯನ್ನು 2023ರಲ್ಲಿ ಹಾಸನ ವಿಶ್ವವಿದ್ಯಾಲಯವಾಗಿ ಘೋಷಿಸಿತು. ವಿವಿಗೆ ಉತ್ತಮ ಕ್ಯಾಂಪಸ್ ನಿರ್ಮಿಸಲು 78 ಎಕರೆ ಜಾಗವೂ ಇದೆ. ಚಾಮರಾಜನಗರ ವಿವಿಗೆ 22, ಮಂಡ್ಯ ವಿವಿಗೆ 47 ಕಾಲೇಜುಗಳು ಮೈಸೂರು ವಿವಿಯಿಂದ ಲಭಿಸಿದ್ದರೆ. ಹಾಸನ ವಿವಿಗೆ 58 ಕಾಲೇಜುಗಳು ದೊರಕಿವೆ. ಜೊತೆಗೆ ವಿವಿಯ ಕ್ಯಾಂಪಸ್ ಹಾಗೂ ಸಂಯೋಜಿತ ಕಾಲೇಜುಗಳಿಂದ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯೂ 21 ಸಾವಿರಕ್ಕೂ ಮೀರಿದೆ. ಈ ಕಾರಣದಿಂದ ಸಂಯೋಜನಾ ಶುಲ್ಕ, ವಿದ್ಯಾರ್ಥಿಗಳ ದಾಖಲಾತಿ ಅನುಮೋದನೆ ಶುಲ್ಕ, ಪರೀಕ್ಷಾ ಶುಲ್ಕವು ಇನ್ನೆರಡು ವಿವಿಗಳಿಗಿಂತ ಹೆಚ್ಚಾಗಿಯೇ ಬರುತ್ತದೆ. ಇಲ್ಲಿನ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ, ವಾರ್ಷಿಕ ₹10 ಕೋಟಿಗಳಿಗೂ ಅಧಿಕ ಆದಾಯ ವಿವಿಗೆ ಲಭ್ಯವಾಗುತ್ತಿದೆ.
ಹಾಗಾಗಿ ಸರ್ಕಾರದಿಂದ ಇದುವರೆಗೆ ಯಾವುದೇ ಅನುದಾನ ದೊರೆಯದಿದ್ದರೂ ಕನಿಷ್ಠ ಮೂಲಸೌಕರ್ಯ, ಬೋಧಕ, ಬೋಧಕೇತರ ಸಿಬ್ಬಂದಿಗೆ ವೇತನ, ಕ್ಯಾಂಪಸ್ ನಿರ್ವಹಣೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಅಷ್ಟೇನೂ ಸಮಸ್ಯೆ ಆಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.ಹೇಮ ಗಂಗೋತ್ರಿಯಲ್ಲಿ 466ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಇತರೆ ಕಾಲೇಜುಗಳಲ್ಲಿ ಒಟ್ಟಾರೆ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರೆ, ಉಳಿದೆಲ್ಲಾ ಸಂಯೋಜಿತ ಕಾಲೇಜುಗಳಲ್ಲಿ ಒಟ್ಟಾರೆ 21 ಸಾವಿರ ವಿದ್ಯಾರ್ಥಿಗಳು ಪದವಿ ಕೋರ್ಸುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಶೇಕಡ 99ರಷ್ಟು ಫಲಿತಾಂಶ ಇದೆ. ಒಂದಷ್ಟು ಮಂದಿ ಖಾಯಂ ಪ್ರಾಧ್ಯಾಪಕರೂ ಇರುವುದರಿಂದ ಸಂಶೋಧನಾ ಚಟುವಟಿಕೆಗಳಿಗೂ ಅಡ್ಡಿ ಇಲ್ಲ. ಇರುವ 11 ವಿಭಾಗಗಳಲ್ಲಿ 8 ವಿಭಾಗಗಳಲ್ಲಿ ಪಿಎಚ್‌ಡಿ, ಸಂಶೋಧನೆಗಳು ಕೂಡ ನಡೆಯುತ್ತಿವೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರು ಮತ್ತು ಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಬ್ಬಂದಿ ನೇಮಿಸಿಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತಿದೆ. ಖಾಯಂ ನೌಕರರ ಕೊರತೆ ಇದ್ದೇ ಇದೆ.----
ಬಾಕ್ಸ್ಹೇಮ ಗಂಗೋತ್ರಿಗೆ 32 ವರ್ಷ ಇತಿಹಾಸ
2023ರ ಮಾರ್ಚ್‌ನಲ್ಲಿ ಹಾಸನ ವಿವಿಯಾಗಿ ಪರಿವರ್ತನೆಗೊಂಡ ಹೇಮ ಗಂಗೋತ್ರಿ ಕ್ಯಾಂಪಸ್‌ಗೆ 32 ವರ್ಷಗಳ ಇತಿಹಾಸವಿದೆ. 1992ರಲ್ಲಿ ಖಾಸಗಿ ಕಟ್ಟಡದಲ್ಲಿ ಆರಂಭವಾದ ಈ ಪಿಜಿ ಕೇಂದ್ರವು, ನಂತರ 1994ರಲ್ಲಿ ಜಿಲ್ಲಾ ಕೇಂದ್ರದ ಈಗಿನ ಹೇಮಗಂಗೋತ್ರಿಗೆ ಸ್ಥಳಾಂತರವಾಯಿತು. ಇದರ ಹಿಂದೆ ಜಿಲ್ಲೆಯ ಅಂದಿನ ಸಚಿವರಾಗಿದ್ದ ಜಿ.ಪಟ್ಟಸ್ವಾಮಿಗೌಡ ಹಾಗೂ ಹಾಸನದ ಶಾಸಕರಾಗಿದ್ದ ಕೆ.ಎಚ್.ಹನುಮಂತಗೌಡರ ಕೊಡುಗೆ ಇದೆ. ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಜಿಲ್ಲೆಯವರೇ ಆದ ಮಳಲಿ ವಸಂತ್ ಕುಮಾರ್ ಅವರ ಶ್ರಮವೂ ಅನನ್ಯ ಎನ್ನುತ್ತಾರೆ ಸ್ಥಳೀಯರು. ಇದು ಮೈಸೂರು ವಿವಿಯಡಿ ಇದ್ದಾಗ ಸುಸಜ್ಜಿತ ಕಟ್ಟಡ, ತರಗತಿ ಕೊಠಡಿ, ಆಡಳಿತ ಕಚೇರಿ ಎಲ್ಲವೂ ಇದ್ದ ಕಾರಣ ಹೊಸ ವಿವಿಗೆ ಅಷ್ಟು ಹೊರೆ ಬೀಳಲಿಲ್ಲ. 1992ರಲ್ಲಿ ಹಾಸನ ನಗರದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೇವಲ 2 ವಿಷಯಗಳೊಂದಿಗೆ ಆರಂಭವಾಯಿತು. ಇಂದು 11 ವಿಭಾಗಗಳಿವೆ. 25 ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಇದೆ. ಮೊದಲ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ಅವರ ಚುಕ್ಕಾಣಿಯಲ್ಲಿ ಎರಡು ವರ್ಷ ಪೂರ್ಣಗೊಳಿಸಿರುವ ವಿವಿಯು ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದು, ದಾಖಲಾತಿ ಆರಂಭವಾದರೆ ಮೂರನೇ ವರ್ಷದ ತರಗತಿಗಳು ಆರಂಭವಾಗಲಿವೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಆದಾಯ ವಾರ್ಷಿಕ ₹15 ಕೋಟಿ ತಲುಪುವ ನಿರೀಕ್ಷೆ ಅಧಿಕಾರಿಗಳದ್ದು.-----ಬಾಕ್ಸ್‌ವಿವಿ ಉಳಿಸಲು ಜನಪ್ರತಿನಿಧಿಗಳ ಒಗ್ಗಟ್ಟಿನ ಮಂತ್ರ
ತೀವ್ರ ಆರ್ಥಿಕ ಸಮಸ್ಯೆಯೂ ಇಲ್ಲದೆ, ಬೋಧಕ, ಬೋಧಕೇತರ ಸಿಬ್ಬಂದಿ ಜೊತೆಗೆ ಕಾಲೇಜು, ವಿದ್ಯಾರ್ಥಿಗಳಿಗೂ ಕೊರತೆ ಆಗದೆ ನಡೆಯುತ್ತಿರುವ ವಿಶ್ವವಿದ್ಯಾಲಯವನ್ನು ಶತಾಯಗತಾಯ ಉಳಿಸಿಕೊಳ್ಳಲು ಸಂಸದ ಶ್ರೇಯಸ್ ಪಟೇಲ್, ಶಾಸಕ ಎ.ಮಂಜು ಮತ್ತಿತರ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹಾಗೂ ಹಾಸನ ವಿವಿ ಉಳಿಸಿ ಹೋರಾಟ ಸಮಿತಿ, ಹಸಿರುಭೂಮಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಮೈಸೂರಿಗೆ 111 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಜಿಲ್ಲೆ. ಹಾಗಾಗಿ ಜಿಲ್ಲೆಯಲ್ಲೇ ವಿಶ್ವವಿದ್ಯಾಲಯ ಆಗಿ ಉನ್ನತ ಶಿಕ್ಷಣ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳಲ್ಲೂ ಸಂತಸ ತಂದಿದೆ. ಜಿಲ್ಲೆಗೆ ವಿವಿಯ ಅಗತ್ಯವೂ ಇದೆ. ಹಾಗಾಗಿ ಸರ್ಕಾರ ವಿವಿಗಳನ್ನು ಮುಚ್ಚುವ ಆಲೋಚನೆ ಕೈಬಿಡದೆ ಹೋದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. -----ಕೋಟ್---ಹಿಂದಿನ ಸರ್ಕಾರ ತರಾತುರಿಯಲ್ಲಿ ಹೊಸ ವಿವಿಗಳನ್ನು ಆರಂಭಿಸಿದೆ ಎಂದು ಆರೋಪಿಸುವ ಈಗಿನ ಸರ್ಕಾರ ವಿವಿಗಳಿಗೆ ಅಗತ್ಯ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೇ ಹೊರತು ಮುಚ್ಚುವ ಆಲೋಚನೆ ಖಂಡನೀಯ. ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಸರ್ಕಾರಗಳೇ ಹೀಗೆ ವಿಶ್ವವಿದ್ಯಾಲಯಗಳನ್ನು ಮುಚ್ಚುವುದು ರಾಜ್ಯದ ಅಭಿವೃದ್ದಿಗೆ ಶ್ರೇಯಸ್ಸಲ್ಲ.--ಎಚ್.ಎಲ್.ಮಲ್ಲೇಶ್‌ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
------ಹಾಸನ ವಿವಿ ಮುಚ್ಚಲು ಬಿಡುವುದಿಲ್ಲ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ನಿಯೋಗವನ್ನು ಶೀಘ್ರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಬಳಿಗೆ ಕೊಂಡೊಯ್ದು ವಿವಿ ಮುಚ್ಚದಂತೆ ಮನವಿ ಸಲ್ಲಿಸುತ್ತೇವೆ.
- ಶ್ರೇಯಸ್ ಪಟೇಲ್, ಸಂಸದ