ಹಾಸನಾಂಬೆ: ಈ ಬಾರಿ ಗೋಲ್ಡ್ ಪಾಸ್‌ ಮಾತ್ರ

| Published : Aug 27 2025, 01:00 AM IST

ಸಾರಾಂಶ

ಕಳೆದ ವರ್ಷ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆದಿದೆ. ಆದರೆ ವಿವಿಐಪಿ ಪಾಸ್‌ಗಳ ವಿತರಣೆ, ಶಿಷ್ಟಾಚಾರದ ಹಾವಳಿ ಇವುಗಳಿಂದ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ತಿಳಿದು ಬಂದಿದ್ದು, ಈ ಬಾರಿ ಇಂತಹ ತಪ್ಪುಗಳು ಆಗಬಾರದು.

ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿಯ ಹಾಸನಾಂಬ ದೇವಿಯ ಮಹೋತ್ಸವದಲ್ಲಿ ದರ್ಶನಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆಯುವ ಸಾಮಾನ್ಯ ಭಕ್ತರಿಗೆ ಯಾವ ರೀತಿಯ ಸಮಸ್ಯೆಗಳು ಆಗಬಾರದು. ಹಾಗಾಗಿ ಈ ವರ್ಷದಿಂದ ವಿವಿಐಪಿ ಪಾಸ್ ರದ್ದು ಮಾಡಿ ಈ ಬಾರಿ ಗೋಲ್ಡ್ ಪಾಸ್‌ಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಂಭಾಂಗಣದಲ್ಲಿ ಮಂಗಳವಾರ ಅಕ್ಟೋಬರ್ 9ರಿಂದ 23ರ ವರೆಗೆ ನಡೆಯುವ ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆದಿದೆ. ಆದರೆ ವಿವಿಐಪಿ ಪಾಸ್‌ಗಳ ವಿತರಣೆ, ಶಿಷ್ಟಾಚಾರದ ಹಾವಳಿ ಇವುಗಳಿಂದ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ತಿಳಿದು ಬಂದಿದ್ದು, ಈ ಬಾರಿ ಇಂತಹ ತಪ್ಪುಗಳು ಆಗಬಾರದು ಎಂದರು.

ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕಾರ ನೀಡಬೇಕು. ವಿವಿಐಪಿ ಬದಲು ಈ ಬಾರಿ ಗೋಲ್ಡ್ ಪಾಸ್ಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಪಾಸಿನ ಸಮಯವನ್ನು 2 ಗಂಟೆಗೆ ಸಿಮೀತಗೊಳಿಸಬೇಕು. ಇದರಿಂದ ಸಾಮಾನ್ಯ ಭಕ್ತರಿಗೆ ತೊಂದರೆ ಹಾಗೂ ಕಿರಿಕಿರಿಯಾಗದಂತೆ ನಿಗಾವಹಿಸಬೇಕು. ಶಿಷ್ಟಚಾರದಲ್ಲಿಯೂ ಬದಲಾವಣೆ ಮಾಡಿಕೊಂಡು ಒಂದು ಜಾಗ ಗುರುತಿಸಿ ಟಿಟಿ ವಾಹನ ಬಳಿಸಿಕೊಂಡು ಬರುವ ಭಕ್ತರಿಗೆ ದೇವಿಯ ದರ್ಶನ ಮಾಡಿಸಬೇಕು. ಇದರಿಂದ ಸಾಮಾನ್ಯ ಭಕ್ತರು ಹೆಚ್ಚು ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಇದಕ್ಕೆ ಜನಪ್ರತಿನಿಧಿಗಳು ಸಹಕಾರ ಮಾಡಬೇಕು. ಅಧಿಕಾರಿಗಳು ಪಾಲಿಸಬೇಕು ಎಂದರು.

ಪಾಸ್‌ಗಳಿಂದ ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ದೂರುಗಳಿಂದ ಈ ಬಾರಿಗೆ ಪಾಸ್‌ಗಳನ್ನು ರದ್ದು ಮಾಡಿ ಕೇವಲ ಗೋಲ್ಡ್ ಸ್ಸ್‌ಗಳನ್ನು ಮಾಡಲಾಗಿದೆ. ಹಾಸನಾಂಬ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಜಾನಪದ ಕಲೆಗೆ ಹೆಚ್ಚು ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದ್ದೇನೆ. ಇನ್ನು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮದಲ್ಲಿ ವೇದಿಕೆ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದ್ದೇನೆ ಎಂದರು.

ಜಾತ್ರಾಮಹೋತ್ಸವ ಅವಧಿಯಲ್ಲಿ ಕಚೇರಿಯಲ್ಲಿ ಜನರ ಕೆಲಸಗಳೇ ಆಗುವುದಿಲ್ಲ. ಒಂದೂವರೆಯಿಂದ ಎರಡು ತಿಂಗಳು ಜನರು ಪರಿತಪಿಸುವಂತಾಗುತ್ತದೆ. ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ಹಾಗಾಗಿ ಕಚೇರಿಯಲ್ಲಿ ಜನರಿಗೆ ಕೆಲಸಗಳು ಆಗುವಂತೆ ಕ್ರಮವಹಿಸಲಾಗುವುದು ಎಂದರು.

ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಶಿವಲಿಂಗೇಗೌಡ, ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು ಕೆಲವೊಂದು ಸಲಹೆ ನೀಡಿದರು. ಮಹಾನಗರ ಪಾಲಿಕೆ ಮೇಯರ್ ಹೇಮಾಲತಾ ಅವರು ಮಹಾನಗರ ಪಾಲಿಕೆ ಸದಸ್ಯರಿಗೆ, ಪೌರಕಾರ್ಮಿಕರಿಗೆ ಜಾತ್ರೆಯಲ್ಲಿ ಅವಮಾನ ಮಾಡುವಂತ ಘಟನೆಗಳು ನಡೆಯುತ್ತಿದ್ದು ಈ ಬಾರಿ ಅದು ನಿಲ್ಲಬೇಕು. ಇವರಿಗೆ ವಿಶೇಷ ದರ್ಶನ ಗೌರವ ಕೊಡಬೇಕು ಎಂದರು.ಗೋಲ್ಡ್ ಕಾರ್ಡ್ ಪಡೆದರೆ ಮುಂಜಾನೆ 5 ರಿಂದ ರಾತ್ರಿ 11 ಗಂಟೆವರೆಗೆ ದರ್ಶನ ಇರುತ್ತದೆ. ಸಿಎಂ, ಡಿಸಿಎಂ ಹಾಗೂ ಸಿಜೆ ಹೊರತುಪಡಿಸಿ ಉಳಿದ ಎಲ್ಲಾ ಗಣ್ಯರ ವೈಯಕ್ತಿಕ ಶಿಷ್ಟಾಚಾರದ ಬದಲು ಜಿಲ್ಲಾಡಳಿತ ನಿಯೋಜಿತ ವಾಹನ ಬಳಕೆ ಮಾಡಲಾಗುವುದು.

ಹಾಸನಾಂಬೆ ಉತ್ಸವದ ಸಮಯದಲ್ಲಿ ಇಲಾಖೆಗಳ ಕೆಲಸ ಒಂದೂವರೆ ತಿಂಗಳು ಸ್ಥಗಿತವಾಗುವಂತಾಗಿದೆ. ಕಳೆದ ವರ್ಷವೂ ಇದು ಕಂಡಿದ್ದೇನೆ. ಈ ಬಾರಿ ಉತ್ಸವದ ಜೊತೆಗೆ ಜನರ ಕೆಲಸಕ್ಕೂ ಆದ್ಯತೆ ನೀಡಬೇಕು ಎಂದು ಸಚಿವರು ಸೂಚಿಸಿದರು. ವಿಐಪಿ ದರ್ಶನ ನಿಯಂತ್ರಣದ ಕುರಿತು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹಾಸನಾಂಬೆ ದರ್ಶನಕ್ಕೆ ಬರುತ್ತಾರೆ. ಆದರೆ ವಿಐಪಿ, ವಿವಿಐಪಿ ದರ್ಶನದಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಗಂಟೆಗಟ್ಟಲೆ ಜನರನ್ನು ನಿಲ್ಲಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಈ ಗಣ್ಯ ಸಂಸ್ಕೃತಿಗೆ ತಡೆಗಟ್ಟಲು ಸಹಕರಿಸಬೇಕು. ವಿಐಪಿ ಹಾಗೂ ಶಿಷ್ಟಾಚಾರ ದರ್ಶನಕ್ಕೆ ಸಮಯ ನಿಗದಿ ಮಾಡಬೇಕು. ಗೋಲ್ಡ್ ಕಾರ್ಡ್ ದರ್ಶನಕ್ಕೆ 2 ಗಂಟೆ, ಶಿಷ್ಟಾಚಾರ ದರ್ಶನಕ್ಕೆ 2 ಗಂಟೆ ಮಾತ್ರ ಅವಕಾಶ ನೀಡಬೇಕು. ಜನರಿಗೆ ಅನುಕೂಲವಾಗುವುದಾದರೆ ಈ ಬದಲಾವಣೆಗಳನ್ನು ಅನುಸರಿಸೋಣ ಎಂದು ಸಚಿವರು ಸ್ಪಷ್ಟಪಡಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತ, ಸಿಇಓ ಪೂರ್ಣೀಮಾ, ಮಹಾನಗರ ಪಾಲಿಕೆ ಮೇಯರ್ ಹೇಮಾಲತಾ ಕಮಲ್ ಕುಮಾರ್, ಶಾಸಕ ಎಚ್.ಪಿ. ಸ್ವರೂಪ್, ಸಿಮೆಂಟ್ ಮಂಜು ಇನ್ನಿತರರಿದ್ದರು.