ಕಾರ್ಮಿಕರ ಕೆಲಸ ಕಸಿದ ಹ್ಯಾಟ್‌ ಸನ್‌ ಸಂಸ್ಥೆ: ಪ್ರತಿಭಟನೆ

| Published : Jan 27 2025, 12:45 AM IST

ಕಾರ್ಮಿಕರ ಕೆಲಸ ಕಸಿದ ಹ್ಯಾಟ್‌ ಸನ್‌ ಸಂಸ್ಥೆ: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಏಕಾಏಕಿ ತೆಗೆದು ಹಾಕಿ, ಬಿಹಾರ ಮೂಲದ ಕಾರ್ಮಿಕರನ್ನು ನೇಮಿಸಿರುವ ಕ್ರಮ ಖಂಡಿಸಿ ತಾಲೂಕಿನ ಕುಂದೂರು ಹಾಗೂ ಯಕ್ಕನಹಳ್ಳಿಯ ಸಮೀಪದ ಆರೋಕ್ಯ ಹಾಲು, ಮೊಸರು ಪ್ಯಾಕಿಂಗ್ ಕೇಂದ್ರದ (ಹ್ಯಾಟ್ಸನ್) ಮುಂದೆ ನೂರಾರು ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.

- ಸ್ಥಳೀಯರಿಗೆ ಕೆಲಸ ಕೊಡದೇ ಬಿಹಾರಿ ಬಾಲಕಾರ್ಮಿಕರ ನಿಯೋಜನೆ: ಸಂತ್ರಸ್ತರ ಆರೋಪ । ನ್ಯಾಯಕ್ಕಾಗಿ ಆಗ್ರಹ

- - -

- ಕುಂದೂರು, ಯಕ್ಕನಹಳ್ಳಿಯ ಸಮೀಪದ ಆರೋಕ್ಯ ಹಾಲು, ಮೊಸರು ಪ್ಯಾಕಿಂಗ್ ಕೇಂದ್ರ ಬಳಿ ಪ್ರತಿಭಟನೆ

- ಹ್ಯಾಟ್ಸನ್‌ ಸಂಸ್ಥೆ ನಿರ್ಧಾರದಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಆಕ್ರೋಶ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಏಕಾಏಕಿ ತೆಗೆದು ಹಾಕಿ, ಬಿಹಾರ ಮೂಲದ ಕಾರ್ಮಿಕರನ್ನು ನೇಮಿಸಿರುವ ಕ್ರಮ ಖಂಡಿಸಿ ತಾಲೂಕಿನ ಕುಂದೂರು ಹಾಗೂ ಯಕ್ಕನಹಳ್ಳಿ ಗ್ರಾಮಗಳ ಮಧ್ಯೆ ಬರುವ ಆರೋಕ್ಯ ಹಾಲು, ಮೊಸರು ಪ್ಯಾಕಿಂಗ್ ಕೇಂದ್ರದ (ಹ್ಯಾಟ್ಸನ್) ಮುಂದೆ ನೂರಾರು ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದರು.

ಆರೋಕ್ಯ ಉತ್ಪಾದನಾ ಕೇಂದ್ರ ಪ್ರಾರಂಭ ಆದಾಗಿನಿಂದ ಇಲ್ಲಿಯವರೆಗೂ ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗ ದಿಢೀರನೆ ನೂರಾರು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬಂದಿದೆ. ನಮಗೆ ನ್ಯಾಯ ಬೇಕು, ಕೂಡಲೇ ನಮ್ಮನೆಲ್ಲಾ ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾರ್ಮಿಕರು ಆಗ್ರಹಪಡಿಸಿದರು.

ಪ್ರತಿಭಟನಾನಿರತ ಮುಖಂಡರು ಮಾತನಾಡಿ, ₹1200 ಸಂಬಳದಿಂದ ₹12 ಸಾವಿರವರೆಗೂ ಕಾರ್ಮಿಕರು ಕೆಲಸ ಮಾಡಿಕೊಂಡು ಬಂದಿದ್ದಾರೆ. ಕೇಂದ್ರದಲ್ಲಿ ಕಿರುಕುಳಗಳನ್ನೆಲ್ಲ ಸಹಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಆದರೂ ಯಾವುದೇ ಸಕಾರಣ ಇಲ್ಲದೇ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ಬೇರೆ ರಾಜ್ಯದಿಂದ ಬಂದು ಇಲ್ಲಿಯ ಎಲ್ಲ ಸೌಲಭ್ಯಗಳನ್ನು ಬಳಸಿ, ಹಾಲು- ಮೊಸರು ಪ್ಯಾಕಿಂಗ್‌ ಘಟಕ ಪ್ರಾರಂಭಿಸಿ, ದುಪ್ಪಟ್ಟು ಆದಾಯ ಗಳಿಸುತ್ತಿರುವ ಸಂಸ್ಥೆಗೆ ನಮ್ಮ ಶ್ರಮವೇ ಕಾರಣವಾಗಿದೆ. ಹೀಗಿದ್ದರೂ, ಸದರಿ ಕೇಂದ್ರದವರು ಸ್ಥಳೀಯರಿಗೆ ಕೆಲಸ ಕೊಡದೇ ಬಿಹಾರ ರಾಜ್ಯದ, ಅದರಲ್ಲೂ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿರುವುದು ನಿಜಕ್ಕೂ ಖಂಡಿನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯಲು ನೀರು ಕೊಡದ ಸಿಬ್ಬಂದಿ:

ಬಿರುಬಿಸಿನಲ್ಲೇ ಕುಳಿತು ಪ್ರತಿಭಟನೆ ಮಾಡುತ್ತಿದ್ದ ವೇಳೆ ಬಾಯಾರಿದ ಕಾರ್ಮಿಕರು ನೀರು ಕೇಳಿದರೂ ಕೊಡದೇ ಘಟಕದ ನೌಕರರು ಅಮಾನವೀಯತೆ ಮೆರೆಯುತ್ತಾರೆ ಎಂದು ಕಾರ್ಮಿಕರು ಆರೋಪಿಸಿದರು.

ಪ್ರತಿನಿತ್ಯ 1.30 ಲಕ್ಷ ಲೀಟರ್ ಹಾಲು ಸಂಗ್ರಹವಾಗಿ ಪ್ಯಾಕಿಂಗ್ ಆಗಿ ರಾಜ್ಯದ ಅನೇಕ ಕಡೆಗೆ ಸರಬರಾಜಾಗುತ್ತಿದೆ. ಇದರ ಹಿಂದೆ ಸ್ಥಳೀಯ ಕಾರ್ಮಿಕರ ಶ್ರಮ ಹೆಚ್ಚಾಗಿದೆ. ಈವರೆವಿಗೂ ಒಂದೂ ವರ್ಷವೂ ಹೆಚ್ಚುವರಿ ವೇತನ ನೀಡಿಲ್ಲ. ಆದರೂ ಕೊಟ್ಟ ವೇತನಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ. ಕೆಲಸದ ವೇಳೆ ಚಹಾ, ತಿಂಡಿ ಸರಬರಾಜು ಸಹ ನಿಲ್ಲಿಸಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿ ಬಾಲ ಕಾರ್ಮಿಕರನ್ನು ನೇಮಿಸಿಕೊಂಡಿರುವ ಕೇಂದ್ರದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮದಿಂದ ವಾಪಸ್ ಕಳಿಸಿ:

ಕೆಲ ಗ್ರಾಮಸ್ಥರು ಮಾತನಾಡಿ, ಯಕ್ಕನಹಳ್ಳಿಯಲ್ಲಿ ಕೆಲ ಬಿಹಾರಿಗಳು ಮನೆ ಬಾಡಿಗೆಗೆ ಪಡೆದು ವಾಸಿಸುತ್ತಿದ್ದಾರೆ. ಅಂದಿನಿದಂದ ಗ್ರಾಮದಲ್ಲಿ ಕಳವು ಪ್ರಕಗಣಗಳು ಹೆಚ್ಚಾಗಿವೆ. ಇಲ್ಲಿ ಕೆಲಸ ಮಾಡಲು ಬಂದಿರುವ ಬಿಹಾರಿಗಳಿಗೆ ಆಧಾರ್ ಕಾರ್ಡ್ ಕೂಡ ಇಲ್ಲ. ಅಂತಹ ಬಿಹಾರಿಗಳನ್ನು ಇಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಕೆಲಸದಿಂದ ತೆಗೆದು ಹಾಕಬೇಕು. ಇಲ್ಲದಿದ್ದರೆ ಪೊಲೀಸ್‌ ಠಾಣೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕೈ ಬಿಡುವಂತೆ ಕಾರ್ಮಿಕರ ಮನವೊಲಿಸುವ ಕೆಲಸ ಮಾಡಿದರು. ಕೇಂದ್ರದಲ್ಲಿದ್ದ ಕೆಲವೇ ನೌಕರರು ಈ ವಿಷಯವನ್ನು ಚೆನ್ನೈನ ಕೇಂದ್ರ ಕಚೇರಿಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಚಿಕ್ಕಹಾಲಿವಾಣದ ಜಯದೇವಪ್ಪ, ಯಕ್ಕನಹಳ್ಳಿ ಈರಪ್ಪ, ಕಾರ್ಮಿಕರಾದ ಹರೀಶ್, ಮಂಜುನಾಥ್, ಪಿ.ಎನ್.ಹರ್ಷ, ಸಂಜು, ಪ್ರವೀಣ್, ಶ್ರೀನಿವಾಸ್, ಪ್ರಶಾಂತ್, ಬಸವರಾಜು, ವಿನೋದಮ್ಮ, ಶಾಕುಂತಲಮ್ಮ, ಉಷಾ, ನಿಂಗಮ್ಮ, ನಾಗರಾಜು, ಷಣ್ಮುಖ, ದೊಡ್ಡೇಶ್, ಸಂದೀಪ, ಹಾಲೇಶ್, ಪ್ರಮೋದ್, ಸುದೀಪ್ ಸೇರಿದಂತೆ ನೂರಾರು ಕಾರ್ಮಿಕರು ಇದ್ದರು.

- - - -26ಎಚ್ಎಲ್.ಐ3:

ಸ್ಥಳೀಯ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿ, ಬಿಹಾರದ ಬಾಲ ಕಾರ್ಮಿಕರನ್ನು ನೇಮಿಸಿಕೊಂಡ ನಡೆ ಖಂಡಿಸಿ ಕುಂದೂರು ಹಾಗೂ ಯಕ್ಕನಹಳ್ಳಿಯ ಸಮೀಪದ ಆರೋಕ್ಯ ಹಾಲು ಕೇಂದ್ರದ (ಹ್ಯಾಟ್ಸನ್) ಎದುರು ನೂರಾರು ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದರು.-26ಎಚ್.ಎಲ್.ಐ3ಎ: ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.