ಹ್ಯಾಟ್ರಿಕ್‌ ಹೀರೋ ಜಿಗಜಿಣಗಿಗೆ ಮತ್ತೆ ಸ್ಪರ್ಧೆ ಉಮೇದು

| Published : Jan 22 2024, 02:16 AM IST

ಹ್ಯಾಟ್ರಿಕ್‌ ಹೀರೋ ಜಿಗಜಿಣಗಿಗೆ ಮತ್ತೆ ಸ್ಪರ್ಧೆ ಉಮೇದು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸಿ ಮೀಸಲು ಕ್ಷೇತ್ರವಾಗಿರುವ ವಿಜಯಪುರದಲ್ಲಿ ಈ ಬಾರಿಯ ಟಿಕೆಟ್ ಫೈಟ್ ತೀವ್ರ ಕುತೂಹಲ ಮೂಡಿಸಿದೆ. ಇಪ್ಪತ್ತೈದು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್‌ ಜಿಗಜಿಣಗಿ ಹಾಲಿ ಸಂಸದ. ಈ ಬಾರಿ ಹೇಗಾದರೂ ಮಾಡಿ ವಿಜಯಪುರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್‌ಗೆ ಇಲ್ಲಿ ಸೂಕ್ತ ಅಭ್ಯರ್ಥಿಯದ್ದೇ ಸಮಸ್ಯೆ.

ಬ್ರಹ್ಮಾನಂದ ಎನ್‌.ಹಡಗಲಿ

ಕನ್ನಡಪ್ರಭ ವಾರ್ತೆ ವಿಜಯಪುರ

ಎಸ್ಸಿ ಮೀಸಲು ಕ್ಷೇತ್ರವಾಗಿರುವ ವಿಜಯಪುರದಲ್ಲಿ ಈ ಬಾರಿಯ ಟಿಕೆಟ್ ಫೈಟ್ ತೀವ್ರ ಕುತೂಹಲ ಮೂಡಿಸಿದೆ. ಇಪ್ಪತ್ತೈದು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್‌ ಜಿಗಜಿಣಗಿ ಹಾಲಿ ಸಂಸದ. ಈ ಬಾರಿ ಹೇಗಾದರೂ ಮಾಡಿ ವಿಜಯಪುರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್‌ಗೆ ಇಲ್ಲಿ ಸೂಕ್ತ ಅಭ್ಯರ್ಥಿಯದ್ದೇ ಸಮಸ್ಯೆ.

1999 ಮತ್ತು 2004ರಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು ಸತತ ಎರಡು ಅವಧಿಗೆ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಎಸ್ಸಿಗೆ ಮೀಸಲಾದ ಬಳಿಕ ನಡೆದ ಎಲ್ಲಾ ಚುನಾವಣೆಯಲ್ಲೂ ಇಲ್ಲಿವರೆಗೆ ಬಿಜೆಪಿಯ ಪಾರುಪತ್ಯವೇ ನಡೆದುಕೊಂಡು ಬಂದಿದೆ. ರಮೇಶ್‌ ಜಿಗಜಿಣಗಿ ಅವರು ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಮತ್ತೊಂದು ಅವಧಿಗೆ ಟಿಕೆಟ್‌ ಆಕಾಂಕ್ಷಿಯಾಗಿರುವ ಅವರಿಗೆ ಈ ಬಾರಿ ವಯಸ್ಸಷ್ಟೇ ಅಡ್ಡಿಯಾಗಿದೆ.

2009ರಿಂದ ಸತತವಾಗಿ ಗೆದ್ದು ಬಂದಿರುವ ರಮೇಶ ಜಿಗಜಿಣಗಿ ಮತ್ತೊಮ್ಮೆ ಸ್ಪರ್ಧಿಸುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ವಯಸ್ಸು 70 ದಾಟಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಮಾತು ಪಕ್ಷದ ಆಂತರಿಕ ವಲಯದಿಂದಲೇ ಕೇಳಿಬರುತ್ತಿದೆ. ಹೀಗಾಗಿ ಪಕ್ಷದ ವರಿಷ್ಠರು ಅಚ್ಚರಿ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂಥ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಕೈ ಸುಟ್ಟುಕೊಂಡಿದ್ದರು. ಇದರಿಂದ ಎಚ್ಚೆತ್ತುಕೊಂಡು ಇತ್ತೀಚೆಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆಗೆ ಟಿಕೆಟ್‌ ನೀಡಿ ಯಶಸ್ವಿಯಾದರು. ಇದೇ ನಡೆಯನ್ನು ಕೇಂದ್ರ ಬಿಜೆಪಿ ವರಿಷ್ಠರು ಲೋಕಸಭೆ ಚುನಾವಣೆ ವಿಚಾರದಲ್ಲಿ ಅನುಸರಿಸಿದರೆ ರಮೇಶ ಜಿಗಜಿಣಗಿ ಅವರ ಮತ್ತೊಂದು ಅವಧಿಗೆ ಸ್ಪರ್ಧಿಸುವ ಹಾದಿ ಸುಗಮ ಎನ್ನಲಾಗುತ್ತಿದೆ.

ಜಿಗಜಿಣಗಿ ಅವರ ಕ್ಲೀನ್‌ ಇಮೇಜ್‌ ಕೂಡ ಅವರಿಗೆ ವರವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇನ್ನು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೆಸರು ಕೂಡ ಟಿಕೆಟ್‌ಗಾಗಿ ಕೇಳಿಬರುತ್ತಿದೆಯಾದರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ತಮಗಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕಾರಜೋಳ ಕುಟುಂಬದ ಯಾರಿಗಾದರೂ ಟಿಕೆಟ್‌ ನೀಡಬೇಕೆಂಬ ಒತ್ತಡವೂ ಇದೆ.

ಇವರಲ್ಲದೆ ಮಾಜಿ ಪೊಲೀಸ್‌ ಅಧಿಕಾರಿ ಮಹೇಂದ್ರ ನಾಯಕ, ವಿಜಯಪುರ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಹಾಗೂ ಮಧುಮೇಹ ತಜ್ಞರಾದ ಡಾ.ಬಾಬುರಾಜೇಂದ್ರ ನಾಯಕ ಅವರು ಬಂಜಾರ ಸಮುದಾಯಕ್ಕೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಬೋವಿ ಸಮುದಾಯದ ನಾಗರಾಜ ಬೋವಿ ಕೂಡ ಟಿಕೆಟ್‌ಗಾಗಿ ಮನವಿ ಸಲ್ಲಿಸಿದ್ದಾರೆ.

ವಿಜಯಪುರ ಲೋಕಸಭೆ ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್‌ ಶಾಸಕರೇ ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿನಿಂದ ಹೊಸ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಭೇದಿಸುವ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಸದ್ಯ ಮಾಜಿ ಶಾಸಕ ರಾಜು ಆಲಗೂರ (ದಲಿತ ಬಲಗೈ), ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ, ಕಾಂಗ್ರೆಸ್‌ ನಾಯಕಿ ಕಾಂತಾ ನಾಯಕ ಅವರ ಹೆಸರುಗಳು ಪಕ್ಷದಲ್ಲಿ ಬಲವಾಗಿ ಕೇಳಿಬರುತ್ತಿವೆ.