ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಸತತ ಐದು ವರ್ಷಗಳಿಂದ ರಾಜಕೀಯ ಬದ್ಧ ವೈರಿಗಳಂತೆಯೇ ಕಂಡುಬಂದಿದ್ದ ಸಂಸದ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಂಸದೆ ಸುಮಲತಾ ಅಂಬರೀಶ್ ಈಗ ಎನ್‌ಡಿಎ ಒಕ್ಕೂಟದೊಳಗೆ ಸ್ನೇಹದ ರಾಜಕಾರಣ ಆರಂಭಿಸಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾದಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದೆಯಾಗಿದ್ದ ಸುಮಲತಾ ಮನೆಗೆ ತೆರಳಿ ಬೆಂಬಲ ಕೋರಿದ್ದರು. ಆದರೂ, ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಬಾರದೆ ಸುಮಲತಾ ಅಂತರ ಕಾಯ್ದುಕೊಂಡಿದ್ದರು. ಈ ವಿಷಯವಾಗಿ ದೇವೇಗೌಡರು ಬಹಿರಂಗವಾಗಿಯೇ ಸುಮಲತಾರಿಂದ ನಮಗೆ ಸಹಕಾರ ಸಿಗುತ್ತಿಲ್ಲವೆಂದು ಅಸಮಾಧಾನ ಹೊರಹಾಕಿದ್ದರು. ಆದರೆ, ಸುಮಲತಾ ಪ್ರಚಾರಕ್ಕೆ ಬಾರದಿರುವುದನ್ನು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಜೆಡಿಎಸ್ ದಳಪತಿಗಳೂ ಗಂಭೀರವಾಗಿ ಪರಿಗಣಿಸಿರಲಿಲ್ಲ.ಎಚ್‌ಡಿಕೆಗೆ ಶುಭ ಹಾರೈಸಿದ ಸುಮಲತಾ:ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಸ್ಥಾನ ಗಳಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಾಜಿ ಸಂಸದೆ ಸುಮಲತಾ ಭೇಟಿಯಾಗಿ ಶುಭಾಶಯ ಕೋರಿರುವುದು ವಿಶೇಷವಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದ್ದಾರೆ. ಇದರೊಂದಿಗೆ ಹಳೆಯ ದ್ವೇಷವನ್ನು ಮರೆತು ಮೈತ್ರಿ ಪಕ್ಷದೊಳಗೆ ಸ್ನೇಹದ ರಾಜಕಾರಣಕ್ಕೆ ಸುಮಲತಾ ಬುನಾದಿ ಹಾಕಿದಂತೆ ಕಂಡುಬರುತ್ತಿದ್ದಾರೆ.ರಾಜಕಾರಣದಲ್ಲಿ ದುಡುಕಿನ ನಿರ್ಧಾರಗಳನ್ನು ಎಂದಿಗೂ ಕೈಗೊಳ್ಳದ ಸುಮಲತಾ ಪ್ರತಿಯೊಂದು ನಿರ್ಧಾರವನ್ನೂ ಸೂಕ್ಷ್ಮವಾಗಿ ಆಲೋಚಿಸಿ, ಸಾಧಕ-ಬಾಧಕಗಳನ್ನು ಅವಲೋಕಿಸಿ ತೀರ್ಮಾನಗಳನ್ನು ಕೈಗೊಳ್ಳುತ್ತಾ ವಿವಾದಗಳಿಗೆ ಸಿಲುಕದೆ ರಾಜಕೀಯವಾಗಿ ರಕ್ಷಣಾತ್ಮಕವಾಗಿ ಆಟವಾಡುತ್ತಿದ್ದಾರೆ. ಅವರ ರಾಜಕೀಯ ಸೂಕ್ಷ್ಮತೆ, ಬುದ್ಧಿವಂತಿಕೆ ಕಂಡು ಪ್ರಮುಖ ರಾಜಕೀಯ ನಾಯಕರೆಲ್ಲರೂ ಬೆಸ್ತುಬಿದ್ದಿದ್ದಾರೆ.ಜಿಲ್ಲಾ ರಾಜಕೀಯದಲ್ಲಿ ಹೊಸ ಮನ್ವಂತರ:ಜೆಡಿಎಸ್ ವರಿಷ್ಠರಿಂದ ಹಿಡಿದು ಮಂಡ್ಯ ಜಿಲ್ಲಾಮಟ್ಟದ ಜೆಡಿಎಸ್ ನಾಯಕರೊಂದಿಗಿನ ಎಲ್ಲಾ ವಿರಸವನ್ನು ಮರೆಸುವಂತೆ ಸುಮಲತಾ ಸ್ನೇಹಶೀಲ ರಾಜಕಾರಣಕ್ಕೆ ಮುಂದಾಗಿರುವುದು ಜಿಲ್ಲಾ ರಾಜಕೀಯದಲ್ಲಿ ಹೊಸ ಮನ್ವಂತರ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಏಕೆಂದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆಂಬಲವಾಗಿ ನಿಂತು ಗೆಲ್ಲಿಸಿದವರು ಈಗ ವಿರೋಧಿ ಸ್ಥಾನದಲ್ಲಿದ್ದಾರೆ. ಅವರು ಎಚ್.ಡಿ.ಕುಮಾರಸ್ವಾಮಿಗೆ ಬದ್ಧ ವೈರಿಗಳಾಗಿರುವುದರಿಂದ ಅವರ ಸೊಲ್ಲಡಗಿಸಲೆಂದೇ ಪಣ ತೊಟ್ಟಿರುವ ಎಚ್‌ಡಿಕೆ, ಮೈತ್ರಿಪಕ್ಷದ ಬಲ ಹಾಗೂ ಸುಮಲತಾ ಬೆಂಬಲದೊಂದಿಗೆ ಹೇಗೆ ಅವರನ್ನು ಕಟ್ಟಿಹಾಕಲು ಕಾರ್ಯತಂತ್ರ ರೂಪಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.ಸುಮಲತಾ ರಾಜಕೀಯ ಪ್ರವೇಶ ಮತ್ತು ಲೋಕಸಭಾ ಚುನಾವಣಾ ಗೆಲುವಿನಿಂದ ಐದು ವರ್ಷಗಳ ಹಿಂದೆ ಜಿಲ್ಲಾ ರಾಜಕಾರಣದಲ್ಲಿ ಹೊಸ ರಾಜಕೀಯ ಮನ್ವಂತರ ಸೃಷ್ಟಿಯಾದಂತೆ, ಈಗ ಎಚ್.ಡಿ.ಕುಮಾರಸ್ವಾಮಿ ಗೆಲುವಿನಿಂದ ಮಂಡ್ಯ ರಾಜಕಾರಣ ಮತ್ತೊಂದು ಮನ್ವಂತರ ಕಂಡಿದೆ. ಈಗ ಸಂಸದ ಕುಮಾರಸ್ವಾಮಿ-ಮಾಜಿ ಸಂಸದೆ ಸುಮಲತಾ ಜೊತೆಗೂಡಿರುವುದು ಜೆಡಿಎಸ್-ಬಿಜೆಪಿಗೆ ಇನ್ನಷ್ಟು ಬಲ ಕೊಟ್ಟಂತಾಗಿದೆ. ಸಂಸದೆಯಾಗಿ ಸುಮಲತಾ ಜಿಲ್ಲೆಯ ಜನ-ಮನ ಗೆಲ್ಲುವಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿದ್ದರೂ ಚತುರ ರಾಜಕಾರಣಿಯಾಗಿ ಎಲ್ಲರ ಗಮನಸೆಳೆದಿದ್ದಾರೆ. ಇನ್ನು ಮುಂದೆ ಜಿಲ್ಲಾ ರಾಜಕಾರಣದೊಳಗೆ ನಡೆಯಬಹುದಾದ ಬೆಳವಣಿಗೆಗಳು ಕುತೂಹಲಕಾರಿಯಾಗಿವೆ.ಜೆಡಿಎಸ್ ನಾಯಕರು ಸಾಥ್:ಮಾಜಿ ಸಂಸದೆ ಸುಮಲತಾ ಅವರೊಂದಿಗೆ ಸ್ಥಳೀಯ ಜೆಡಿಎಸ್ ನಾಯಕರಿಗೆ ಎಷ್ಟೇ ಮನಸ್ತಾಪಗಳಿದ್ದರೂ ಅವುಗಳನ್ನು ಇನ್ನು ಮುಂದೆ ಬಹಿರಂಗವಾಗಿ ಎಲ್ಲಿಯೂ ವ್ಯಕ್ತಪಡಿಸಲಾಗುವುದಿಲ್ಲ. ವರಿಷ್ಠರೇ ಸ್ನೇಹ ರಾಜಕಾರಣಕ್ಕೆ ಒಲವು ತೋರಿರುವುದರಿಂದ ಅದಕ್ಕೆ ಪೂರಕವಾಗಿ ಅವರೂ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ಸಿಗರು ಸುಮಲತಾ ಅವರನ್ನು ಜೆಡಿಎಸ್ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡ ಮಾದರಿಯಲ್ಲೇ ಈಗ ಕಾಂಗ್ರೆಸ್ ವಿರುದ್ಧ ಸುಮಲತಾ ಅವರನ್ನು ಬಳಸಿಕೊಳ್ಳುವುದಕ್ಕೆ ಜೆಡಿಎಸ್ ಚಿಂತನೆ ನಡೆಸುತ್ತಿದೆ. ಆದರೆ, ಸುಮಲತಾ ಅವರಿಗೆ ಯಾವುದೇ ರಾಜಕೀಯ ಅಧಿಕಾರವಿಲ್ಲದಿರುವುದರಿಂದ ಅವರ ಜಿಲ್ಲಾ ಪ್ರವೇಶವೇ ಅಪರೂಪವಾಗಿದೆ. ಹೀಗಿರುವಾಗ ಕಾಂಗ್ರೆಸ್‌ನವರ ವಿರುದ್ಧ ಸುಮಾಸ್ತ್ರ ಬಳಸುವುದು ಹೇಗೆ ಎನ್ನುವುದೂ ಪ್ರಶ್ನೆಯಾಗಿದೆ.ಕಾಂಗ್ರೆಸ್‌ನವರಿಗೂ ಇಕ್ಕಟ್ಟು:ಇನ್ನು ಮುಂದೆ ಜಿಲ್ಲೆಯೊಳಗೆ ಸಂಸದ ಎಚ್.ಡಿ.ಕುಮಾರಸ್ವಾಮಿ ಜೊತೆಯಲ್ಲೇ ಸುಮಲತಾ ಅಂಬರೀಶ್ ಅವರನ್ನೂ ಎದುರಿಸುವಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಮೂರು ತಿಂಗಳ ಅಂತರದಲ್ಲಿ ಇಂತಹದೊಂದು ರಾಜಕೀಯ ಪರಿವರ್ತನೆಯನ್ನು ಬಹುಶಃ ಕಾಂಗ್ರೆಸ್ ನಾಯಕರು ನಿರೀಕ್ಷಿಸಿರಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಅಖಾಡ ಪ್ರವೇಶ, ಮಂಡ್ಯಕ್ಕಾಗಿ ಬಿಜೆಪಿ ಎದುರು ಬಿಗಿಪಟ್ಟು ಹಿಡಿದಿದ್ದ ಸುಮಲತಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕೂಡಲೇ ಸೈಲೆಂಟ್ ಆಗಿದ್ದು, ಎಚ್‌ಡಿಕೆ ಜೊತೆ ಸ್ನೇಹದ ರಾಜಕಾರಣಕ್ಕೆ ಸಮ್ಮತಿಸಿದ್ದು ಎಲ್ಲವೂ ಅನಿರೀಕ್ಷಿತವಾಗಿ ನಡೆದುಹೋದವು. ಇಷ್ಟು ದಿನಗಳ ಕಾಲ ಜೆಡಿಎಸ್ ವರಿಷ್ಠರನ್ನು, ಸ್ಥಳೀಯ ನಾಯಕರನ್ನು ಪ್ರಭಲವಾಗಿ ವಿರೋಧಿಸಿಕೊಂಡು ಬರುತ್ತಿದ್ದ, ಅದರಲ್ಲಿ ಯಶಸ್ಸು ಕಾಣುತ್ತಿದ್ದ ಮಾಜಿ ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಅವರೀಗ ಎನ್‌ಡಿಎ ಪಕ್ಷದಲ್ಲಿದ್ದಾರೆ. ಮೈತ್ರಿ ಕಾರಣದಿಂದ ಎಚ್.ಡಿ.ಕುಮಾರಸ್ವಾಮಿ ಕೂಡ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಕುಮಾರಸ್ವಾಮಿ ಅವರ ಭಾರೀ ಅಂತರದ ಗೆಲುವು ಕಾಂಗ್ರೆಸ್ಸಿಗರ ನಿದ್ದೆಗೆಡಿಸುವಂತೆ ಮಾಡಿದೆ. ಇದರ ನಡುವೆ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯೊಳಗೆ ಮುಂದೆ ಪ್ರಭಲವಾಗಿ ಎದುರಿಸುವುದು ಹೇಗೆ? ಅವರನ್ನು ತೀವ್ರವಾಗಿ ವಿರೋಧಿಸಿದರೆ ೨೦೧೮ರಲ್ಲಿ ಬಂದ ಜನತಾ ತೀರ್ಪು ಪುನರಾವರ್ತನೆಯಾಗುವುದೇ? ಎಂಬ ಪ್ರಶ್ನೆಗಳು ಕಾಂಗ್ರೆಸ್‌ನವರನ್ನು ಕಾಡಲಾರಂಭಿಸಿದೆ.
ಕುಮಾರಸ್ವಾಮಿ ಅದೃಷ್ಟ:ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಅಖಾಡ ಪ್ರವೇಶ, ತಾಲೂಕು ಮಟ್ಟಕ್ಕೆ ಪ್ರಚಾರ ಸೀಮಿತವಾದರೂ ೨.೮೪ ಲಕ್ಷ ಮತಗಳ ಅಂತರದ ಗೆಲುವು, ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಪಡೆದದ್ದು ಹೀಗೆ ಎಲ್ಲವೂ ನಿರೀಕ್ಷೆಯಂತೆಯೇ ನಡೆದದ್ದು ಕುಮಾರಸ್ವಾಮಿ ಅದೃಷ್ಟವೆಂದೇ ಹೇಳಬಹುದು. ಮಂಡ್ಯ ನೆಲದಲ್ಲಿ ಕುಗ್ಗಿಹೋಗುತ್ತಿದ್ದ ಜೆಡಿಎಸ್‌ಗೆ ಆಧಾರವಾಗಿ ಎಚ್.ಡಿ.ಕುಮಾರಸ್ವಾಮಿ ನಿಂತಿದ್ದಾರೆ. ಸುಮಲತಾ ಅವರನ್ನು ಬಿಜೆಪಿ ಶಕ್ತಿಯಾಗಿಸಿಕೊಳ್ಳುವುದಕ್ಕೆ ಕಮಲ ನಾಯಕರು ಸಜ್ಜಾಗಿದ್ದಾರೆ. ಇದರ ನಡುವೆ ಕುಮಾರಸ್ವಾಮಿ-ಸುಮಲತಾ ಸ್ನೇಹ ರಾಜಕಾರಣ ಹೇಗಿರಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.