ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಾವು ಶಾಸಕರಾಗಿದ್ದಾಗ ಆರಂಭಿಸಿದ್ದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಾವು ಶಾಸಕರಾಗಿದ್ದಾಗ ಆರಂಭಿಸಿದ್ದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ತಾವು ಬಿಜೆಪಿಯಿಂದ ಅಮಾನತಾಗುವಂತೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಿಡಿಕಾರಿದರು. ನಗರದ ಕಲ್ಸಂಕ ಟ್ರಾಫಿಕ್ ಜಂಕ್ಷನ್ ನಾನು ಶಾಸಕನಾಗಿದ್ದಾಗ ಆರಂಭಿಸಿದ ಯೋಜನೆ ಎನ್ನುವ ಕಾರಣಕ್ಕೆ ಶಾಸಕರು ಅದಕ್ಕೆ ಅಡ್ಡಗಾಲು ಹಾಕಿದ್ದಾರೆ. ಶಾಸಕರ ಕಚೇರಿಯಲ್ಲಿದ್ದ ನನ್ನ ಫೋಟೋಗಳನ್ನು ತೆಗೆಸಿದ್ದಾರೆ. ಪಕ್ಷದ ಕಾರ್ಯಕ್ರಮಗಳಿಂದ ನನ್ನನ್ನು ದೂರ ಇಡುವಂತೆ ಮಾಡಿದ್ದಾರೆ, ನನ್ನ ವೈಯಕ್ತಿಕ ವ್ಯವಹಾರಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.

ನಾನು ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಕ್ಕೆ ಯಶ್‌ಪಾಲ್‌ ಅವರೇ ಕಾರಣ. ನಾನು ಮೂರು ಬಾರಿ ಶಾಸಕನಾಗಿದ್ದವನು, ಬಿಜೆಪಿ ನನ್ನನ್ನು ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ಬೇಸರವಾಗುತ್ತಿದೆ. ಬಿಜೆಪಿ ಇತರ ನಾಯಕರು ಕೂಡ ಈ ಬಗ್ಗೆ ಯೋಚನೆ ಮಾಡಿಲ್ಲ, ಉಡುಪಿಯಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ನನ್ನ ಪಾತ್ರ ಇಲ್ವಾ? ಎಂದು ಅಳಲು ತೋಡಿಕೊಡರು.

ನಾನು ಯಾವುದೇ ಯೋಜನೆಗಳಿಂದ ಕಿಕ್ ಬ್ಯಾಕ್ ಪಡೆದಿಲ್ಲ ಎಂದ ಭಟ್, ಇಂತಹ ಆರೋಪಗಳಿಗೆ ನಾನು ಹೆದರಿ ಕುಳಿತುಕೊಳ್ಳುವವನಲ್ಲ, ನಾನು ನನ್ನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದೇನೆ, ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವದಲ್ಲಿ ಬ್ಯುಸಿಯಾಗಿದ್ದೇನೆ ಎಂದರು.

ಮುಂದಿನ ವಿಧಾನಸಭೆಗೆ ಸ್ಪರ್ಧೆ....

ಬಿಜೆಪಿ ಕರೆದರೆ ಸೇರ್ಪಡೆಯಾಗಲು ತಯಾರಿದ್ದೇನೆ. ಆದರೆ ಬಿಜೆಪಿ ನಾಯಕರು ಕರೆದಿಲ್ಲ, ನನ್ನ ಹತ್ತಿರ ಮಾತು ಕೂಡ ಆಡಿಲ್ಲ. ಈಗ ನನ್ನ ಅವಶ್ಯಕತೆ ಅವರಿಗೆ ಇಲ್ಲ ಅನಿಸಿರಬೇಕು. ಹೀಗಾಗಿ ನನ್ನಷ್ಟಕ್ಕೆ ನಾನು ಇದ್ದೇನೆ. ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಪಕ್ಷದವರನ್ನು ಭೇಟಿಯಾಗಿಲ್ಲ‌. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ನಿರ್ಧರಿಸಿದ್ದೇನೆ. ಆದರೆ ಯಾವ ಪಕ್ಷದಿಂದ ಎಂದು ನಿರ್ಧರಿಸಿಲ್ಲ, ಇನ್ನೂ ಮೂರುವರೆ ವರ್ಷ ಇದೆ. ಆ ಸಂದರ್ಭದಲ್ಲಿ ನಿರ್ಧಾರ ಮಾಡುತ್ತೇನೆ. ಉಡುಪಿ ವಿಧಾನಸಭಾ ಕ್ಷೇತ್ರದ ಜನತೆ ಇಲ್ಲಿಯವರೆಗೂ ನನ್ನನ್ನು ಸೋಲಿಸಿಲ್ಲ. ಮೂರು ಬಾರಿ ನನ್ನನ್ನು‌ ಗೆಲ್ಲಿಸಿದ್ದಾರೆ ಎಂದರು.