ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಟ್ಟಿಹೊಳೆಯ ನಿರ್ಮಲ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಹಟ್ಟಿಹೊಳೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಎರಡನೇ ಆವೃತ್ತಿಯು ಇತ್ತೀಚೆಗೆ ತೆರೆ ಕಂಡಿತು.ಪಂದ್ಯಾವಳಿಯ ಚಾಂಪಿಯನ್ ಆಗಿ ಟೀಂ ರ‌್ಯಾಬಿಟ್ ಸತತ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಬ್ಲಾಕ್ ರಾಕ್ ತಂಡವು ದ್ವಿತೀಯ ಸ್ಥಾನ ಪಡೆದರೆ, ಟೀಂ ರಾಯಲ್ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.ಎರಡನೇ ಆವೃತ್ತಿಯ ಹೆಚ್.ಪಿ.ಎಲ್.ನ ಉದ್ಘಾಟನಾ ಸಮಾರಂಭದಲ್ಲಿ ಜಮ್ಮು ಕಾಶ್ಮೀರದ ಪೆಹಲ್‌ಗಾಂನಲ್ಲಿ ನಡೆದ ಉಗ್ರಗಾಮಿಗಳ ದಾಳಿಗೆ ಪ್ರಾಣ ಕಳೆದುಕೊಂಡವರಿಗೆ ಸಂತಾಪವನ್ನು ಸೂಚಿಸುತ್ತಾ ಉದ್ಯಮಿ ಹಾಗೂ ಸೂರ್ಯಕಿರಣ ಎಸ್ಟೇಟ್ ಮಾಲೀಕರಾದ ನಂದ ಬೆಳ್ಳಿಯಪ್ಪರವರು ಪಂದ್ಯಾಟದ ಉದ್ಘಾಟನೆ ನೆರವೇರಿಸಿದರು.ಕ್ರೀಡಾಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಥಳೀಯ ಕಾಫಿ ಬೆಳೆಗಾರರಾದ ದೀಪಕ್ ದೇವಯ್ಯ ಮಾತನಾಡಿ, ಕೊಡಗು ಜಿಲ್ಲೆಯೂ ಎಲ್ಲಾ ಮಾದರಿಯ ಕ್ರೀಡಾಪಟುಗಳನ್ನು ತಯಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆಟಗಾರರು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕಗಳಿಸಿದ ಹಟ್ಟಿಹೊಳೆ ಗ್ರಾಮದ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಹಟ್ಟಿಹೊಳೆಯ ಅಂಗನವಾಡಿಯಲ್ಲಿ 33 ವರ್ಷಗಳ ಕಾಲ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎ.ರುಕ್ಮಿಣಿ ಇವರನ್ನು ಸನ್ಮಾನಿಸಲಾಯಿತು.ಉತ್ತಮ ಶಿಸ್ತಿನ ತಂಡವಾಗಿ ಹಟ್ಟಿ ಸ್ಟ್ರೈಕರ್ಸ್ ತಂಡ ಹೊರಹೊಮ್ಮಿತು. ಫೈನಲ್ ಪಂದ್ಯಾಟ ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್, ಪಂದ್ಯ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಟೀಂ ರ‌್ಯಾಬಿಟ್ ತಂಡದ ಹರೀಶ್ ಮಸ್ಕಲ್ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಹಟ್ಟಿಹೊಳೆಯ ಧರ್ಮಗುರುಗಳಾದ ಗಿಲ್ಬರ್ಟ್ ಡಿ ಸಿಲ್ವಾ, ಹರೀಶ್, ಕುಟ್ಟಂಡ ಕುಟ್ಟಪ್ಪ ಹಾಗೂ ಜಮೀರ್ ರವರು ಉಪಸ್ಥಿತರಿದ್ದರು.