ಹಟ್ಟಿಕೇರಿ ಸೀಬರ್ಡ್‌ ಕಾಲನಿಗೆ ಮೂಲಭೂತ ಸೌಲಭ್ಯ ಒದಗಿಸಿ

| Published : Feb 13 2024, 12:52 AM IST

ಹಟ್ಟಿಕೇರಿ ಸೀಬರ್ಡ್‌ ಕಾಲನಿಗೆ ಮೂಲಭೂತ ಸೌಲಭ್ಯ ಒದಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಬರ್ಡ್‌ ನಿರಾಶ್ರಿತರ ಕಾಲನಿಯಲ್ಲಿ ನಿರಾಶ್ರಿತರು ದಯನೀಯವಾಗಿ ಬದುಕು ಸಾಗಿಸುತ್ತೀದ್ದೇವೆ. ಕೇವಲ ತುಂಡು ಜಮೀನು ನೀಡಿ ರಕ್ಷಣಾ ಇಲಾಖೆ ಕೈ ತೊಳೆದುಕೊಂಡಿದೆ.

ಅಂಕೋಲಾ:

ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಬರ್ಡ್‌ ನಿರಾಶ್ರಿತರ ಕಾಲನಿಯಲ್ಲಿ ನಿರಾಶ್ರಿತರು ದಯನೀಯವಾಗಿ ಬದುಕು ಸಾಗಿಸುತ್ತೀದ್ದೇವೆ. ಕೇವಲ ತುಂಡು ಜಮೀನು ನೀಡಿ ರಕ್ಷಣಾ ಇಲಾಖೆ ಕೈ ತೊಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಹಟ್ಟಿಕೇರಿ ಕಾಲನಿಗೆ ಮೂಲಭೂತವಾಗಿ ಬೇಕಾದ ನೀರು, ರಸ್ತೆ ಹಾಗೂ ಸ್ಮಶಾನ ನಿರ್ಮಿಸಿಕೊಡುವಂತೆ ನಿರಾಶ್ರಿತರಾದ ಕುಟುಂಬಗಳು ಆಗ್ರಹಿಸಿದೆ.

ಚಂದ್ರೇಶ್ ಥಾಕು ನಾಯ್ಕ ಮಾತನಾಡಿ, ಕಳೆದ 34 ವರ್ಷಗಳ ಹಿಂದೆ ಸೀಬರ್ಡ್‌ ಯೋಜನೆಗೆ ನಮ್ಮ ಮನೆ ಹಾಗೂ ಫಲವತ್ತಾದ ಭೂಮಿಯನ್ನು ದೇಶದ ಹಿತ ರಕ್ಷಣೆಗೆ ಬಿಟ್ಟು ಕೊಟ್ಟಿದ್ದೇವೆ. ನಿರಾಶ್ರಿತರಿಗೆ ಯೋಜನಾ ಅನುದಾನದಲ್ಲಿ ಕಾಲಕಾಲಕ್ಕೆ ಸೌಲಭ್ಯ ಕಲ್ಪಿಸಿಕೊಡುವುದಾಗಿ ಹಾಗೂ ಶಾಶ್ವತವಾಗಿ ಯೋಜನಾ ಅನುದಾನದಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಈ ಹಿಂದೆ ಜಿಲ್ಲಾಧಿಕಾರಿಗಳು ಭರವಸೆ ನೀಡಿ, ಭಂಜರು ಭೂಮಿಯಲ್ಲಿ ಕಾಲನಿ ನಿರ್ಮಿಸಿ ವಸತಿ ಕಲ್ಪಿಸಲಾಯಿತು. ಆದರೆ 34 ಹಿಂದೆ ನಿರ್ಮಿಸಿರುವ ಡಾಂಬರ್‌ ರಸ್ತೆಗಳು ಕೊಚ್ಚಿ ಹೋಗಿದ್ದು, ರಸ್ತೆ ಅವಶೇಷ ಮಾತ್ರ ಇದ್ದು, ದುರಸ್ತಿ ಮಾಡದೇ ನಿರ್ಲಕ್ಷಿಸಲಾಗಿದೆ. ವಿದ್ಯುತ್ ಪೂರೈಕೆಗಾಗಿ ಅಳವಡಿಸಿರುವ ತಂತಿಗಳು ಬೀಳುವ ಸ್ಥಿತಿಗೆ ತಲುಪಿದೆ ಎಂದರು.

ಹಾಗೆ ನೀರಿನ ಸಮಸ್ಯೆಯಿಂದ ಇಲ್ಲಿನ ಜನತೆ ಹೈರಾಣಾಗಿ ಹೋಗಿದ್ದೇವೆ. ಎರಡು ದಿನಕ್ಕೊಮ್ಮೆ ಅರ್ಧ ಗಂಟೆಯ ಕಾಲ ಅತ್ಯಲ್ಪ ನೀರನ್ನು ಹಟ್ಟಿಕೇರಿ ಗ್ರಾಪಂನಿಂದ ಸರಬರಾಜು ಮಾಡಲಾಗುತ್ತದೆ. ಆದರೆ ಇದು ಯಾವುದಕ್ಕೂ ಸಾಲದೆ ಸಂಕಷ್ಠದಲ್ಲಿ ಸಿಲುಕಿದ್ದೇವೆ. ಈ ಹಿಂದೆ ಹಲವು ಬಾರಿ ಸಮಸ್ಯೆಯ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಕಾಲನಿಯು 53 ಎಕರೆ 11 ಗುಂಟೆ ವಿಸ್ತೀರ್ಣ ಹೊಂದಿದ್ದು 200 ಮನೆ ಹೊಂದಿದೆ. ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕಾಲನಿಗೆ ಮರು ಡಾಂಬರಿಕರಣ, ಚರಂಡಿ ಅಭಿವೃದ್ಧಿ, ವಿದ್ಯುತ್ ಕಂಬ ಅಳವಡಿಕೆ, ಹಳೆಯ ವಿದ್ಯುತ್ ಲೈನ್ ಬದಲಾವಣೆ, ಸ್ಮಶಾನ ಭೂಮಿ ಅಭಿವೃದ್ಧಿ, ದೇವಾಲಯ ನಿರ್ಮಾಣ, ಸಭಾಭವನ, ಕುಡಿಯುವ ನೀರಿನ ಬಾವಿ ನಿರ್ಮಾಣ ಸೇರಿದಂತೆ ಮೂಲಭೂತ ಬೇಡಿಕೆ ಪೂರೈಸುವಂತೆ ವಿನಂತಿಸಿದರು.ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ವೇಳೆ ಗ್ರಾಮಸ್ಥರಾದ ಮೋಹಿನಿ ಜೆ. ನಾಯ್ಕ ಚಂದ್ರಕಾಂತ ದಾಡು ನಾಯ್ಕ, ತಿಪ್ಪಯ್ಯ ಗೋವಿಂದಪ್ಪ ನಾಯ್ಕ, ಅಶೋಕ ರಾಗೋಬ ನಾಯ್ಕ, ಸರಸ್ವತಿ ದೊಡ್ಮನಿ ಉಪಸ್ಥಿತರಿದ್ದರು.