ಹುಟ್ಟೂರಿನ ಸನ್ಮಾನ ಮತ್ತು ಅಭಿಮಾನ ಜ್ಞಾನಪೀಠ ಪ್ರಶಸ್ತಿಗಿಂತಲೂ ಮಿಗಿಲು: ಎಚ್. ವಿಶ್ವನಾಥ್

| Published : Jul 18 2024, 01:39 AM IST

ಹುಟ್ಟೂರಿನ ಸನ್ಮಾನ ಮತ್ತು ಅಭಿಮಾನ ಜ್ಞಾನಪೀಠ ಪ್ರಶಸ್ತಿಗಿಂತಲೂ ಮಿಗಿಲು: ಎಚ್. ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಜು.20 ರಂದು ಲಂಡನ್ ನಗರದ ಥೇಮ್ಸ್ ನದಿ ದಂಡೆಯಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯ ಮುಂದೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬರೆದಿರುವ ಪಾರ್ಲಿಮೆಂಟ್ ಪ್ರದಕ್ಷಿಣೆ ಪುಸ್ತಕ ಬಿಡುಗಡೆಗೆ ತೆರಳುತ್ತಿರುವ ತಮಗೆ ಅಡಗೂರು ಗ್ರಾಮದ ಬೋರೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಹುಟ್ಟೂರಿನ ಸನ್ಮಾನ ಮತ್ತು ಅಭಿಮಾನ ಜ್ಞಾನಪೀಠ ಪ್ರಶಸ್ತಿಗಿಂತಲೂ ಮಿಗಿಲು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಂತಸ ವ್ಯಕ್ತಪಡಿಸಿದರು.

ಜು.20 ರಂದು ಲಂಡನ್ ನಗರದ ಥೇಮ್ಸ್ ನದಿ ದಂಡೆಯಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯ ಮುಂದೆ ತಾವು ಬರೆದಿರುವ ಪಾರ್ಲಿಮೆಂಟ್ ಪ್ರದಕ್ಷಿಣೆ ಪುಸ್ತಕ ಬಿಡುಗಡೆಗೆ ತೆರಳುತ್ತಿರುವ ತಮಗೆ ಅಡಗೂರು ಗ್ರಾಮದ ಬೋರೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹತ್ತೂರಿಗಿಂತ ತಾಯಿ ಹೆತ್ತೂರು ಹೆಚ್ಚು ಎಂಬ ನಾಣ್ಣುಡಿಯಂತೆ ಬಾಲ್ಯದಿಂದ ಹುಟ್ಟಿ ಬೆಳೆದ ಊರು ಕೇರಿ ಮತ್ತು ಸ್ನೇಹಿತರ ಒಡನಾಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಅಡಗೂರು ಎಂಬ ಕುಗ್ರಾಮದಲ್ಲಿ ಜನಿಸಿದ ನಾನು ಇಂದು ಲಂಡನ್ ನಗರಕ್ಕೆ ತೆರಳಿ ಕನ್ನಡ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದರು.

ನನ್ನೂರು ಮತ್ತು ನನ್ನ ಕ್ಷೇತ್ರದ ಜನತೆಯ ಆಶೀರ್ವಾದ ಮತ್ತು ಹರಕೆಯ ಫಲವಾಗಿ ನಾನು ರಾಜಕೀಯ ಕ್ಷೇತ್ರದೊಂದಿಗೆ ಸಾಹಿತ್ಯ ವಲಯದಲ್ಲಿಯೂ ಸಣ್ಣ ಸಾಧನೆ ಮಾಡಿದ್ದು, ಇಂತಹ ಕೆಲಸಕ್ಕೆ ನನ್ನವರೇ ನನಗೆ ಸ್ಪೂರ್ತಿಯ ಚಿಲುಮೆ ಎಂದು ಬಣ್ಣನೆ ವ್ಯಕ್ತಪಡಿಸಿದರು.

ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಜನಿಸಿದ ಊರು ಮತ್ತು ಬಾಲ್ಯದ ಗೆಳೆಯರನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ ಅವರು, ಆ ಬಂಧ ಮತ್ತು ಅನುಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಹಾಗಾಗಿ ಸಮಾಜದ ಉನ್ನತ ಸ್ಥರದಲ್ಲಿ ಇರುವವರು ಸಹ ಆಗಾಗ ತನ್ನೂರಿಗೆ ಭೇಟಿ ನೀಡಿ ಆ ಸಂತಸದಲ್ಲಿ ಪಾಲ್ಗೊಂಡರೆ ವಯಸ್ಸು ಮತ್ತು ಆಯಸ್ಸು ಇಮ್ಮಡಿಯಾಗುತ್ತದೆ ಎಂದರು.

ಪಾರ್ಲಿಮೆಂಟ್ ಪ್ರದಕ್ಷಿಣೆಗಳು ನನ್ನ 9ನೇ ಪುಸ್ತಕವಾಗಿದ್ದು, ಮುಂದೆಯೂ ನಿರಂತರವಾಗಿ ಸಮಾಜದ ಆಗು ಹೋಗು ಮತ್ತು ಭವಿಷ್ಯದ ಪರಿಣಾಮಗಳ ಬಗ್ಗೆ ಬರೆಯಲು ನಾನು ಉತ್ಸುಕನಾಗಿದ್ದು ಇದಕ್ಕೆ ಸರ್ವರೂ ಸಹಕಾರ ನೀಡಬೇಕೆಂದು ಕೋರಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ ಮಾತನಾಡಿ, ಎಚ್. ವಿಶ್ವನಾಥ್ ಅವರು ನಮ್ಮೂರಿನ ಹೆಮ್ಮೆಯ ಪುತ್ರನಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಿ ಸಾಧನೆಯ ಸರದಾರ ಎಂಬ ಹೆಸರು ಗಳಿಸಿ ಕನ್ನಡ ಸಾಹಿತ್ಯ ಲೋಕದಲ್ಲಿಯೂ ಗುರುತಿಸಿಕೊಂಡು ನಮ್ಮ ಹೆಮ್ಮೆಯ ಭಾಷೆ ಜಗತ್ತಿನ ಎಲ್ಲೆಡೆ ಪಸರಿಸುವಂತೆ ಮಾಡುತ್ತಿರುವುದು ಸರ್ವರೂ ಗರ್ವಪಡುವ ಸಂಗತಿ ಎಂದರು.

ಮುಂದಿನ ದಿನಗಳಲ್ಲಿ ನಮ್ಮೂರಿನ ಮಗ ಮತ್ತಷ್ಟು ಎತ್ತರಕ್ಕೆ ಏರಿ ವಿಶ್ವದಾದ್ಯಂತ ಕಸ್ತೂರಿ ಕನ್ನಡದ ಕಂಪನ್ನು ಸೂಸುವಂತೆ ಮಾಡಬೇಕೆಂದು ಆಶಿಸಿದ ಅವರು, ಅವರ ಲಂಡನ್ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಪಾರ್ಲಿಮೆಂಟ್ ಪ್ರದಕ್ಷಿಣೆ ಪುಸ್ತಕ ಬಿಡುಗಡೆಗಾಗಿ ಬುಧವಾರ ರಾತ್ರಿ ಲಂಡನ್ ನಗರಕ್ಕೆ ಪ್ರಯಾಣ ಬೆಳೆಸಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮತ್ತು ಶಾಂತಮ್ಮ ವಿಶ್ವನಾಥ್ ಅವರನ್ನು ಗ್ರಾಮದ ಮುಖಂಡರು ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.

ಗ್ರಾಪಂ ಮಾಜಿ ಅಧ್ಯಕ್ಷ ಎ.ಎಚ್. ಸ್ವಾಮೀಗೌಡ, ಸದಸ್ಯ ಉಮೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿರ್ದೇಶಕ ಎ.ಸಿ. ವಿರೂಪಾಕ್ಷ, ಗಳಿಗೆಕೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಂಜಪ್ಪ, ನಿವೃತ್ತ ಮುಖ್ಯ ಶಿಕ್ಷಕ ಸಂಗಪ್ಪ, ಗ್ರಾಮದ ಮುಖಂಡರಾದ ಎ.ಎಂ. ನಾಗರಾಜ. ಎ.ಎನ್. ರಾಜಶೇಖರ, ಉಮೇಶ್ ಧರ್ಮ, ಎ.ಆರ್. ನಾಗರಾಜು ಇದ್ದರು.