ಹಾವಂಜೆ: ‘ಬಾಲಲೀಲಾ’ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ

| Published : Apr 14 2024, 01:45 AM IST

ಹಾವಂಜೆ: ‘ಬಾಲಲೀಲಾ’ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬೇಸಿಗೆ ಶಿಬಿರವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಬಿಹಾರದ ಜನಪದ ಕಲೆಗಳ ಕಲಿಕೆ, ಕಸದಿಂದ ರಸ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಬಟ್ಟೆಯ ಮೇಲೆ ಮುದ್ರಣ ಕಲೆ ಮುಂತಾದ ಹತ್ತು ಹಲವಾರು ಅಂಶಗಳನ್ನು ಶಿಬಿರದಲ್ಲಿ ಕಲಿಸಿ ಕೊಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹಾವಂಜೆಯ ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಸ್ಟುಡಿಯೋ ಅಶ್ರಯದಲ್ಲಿ ಗ್ರಾಮೀಣ ಭಾಗದಲ್ಲಿ ಸಂಯೋಜಿಸುತ್ತಿರುವ ‘ಬಾಲಲೀಲಾ’ ಚಿಣ್ಣರ ಬೇಸಿಗೆ ಶಿಬಿರವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು. ಮಣಿಪಾಲದ ವೈದ್ಯೆ ಡಾ. ಮಾಧುರಿ ಭಟ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸ್ವಚ್ಛಂದ ಪರಿಸರದಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರವು ಬಹು ಮಹತ್ವಪೂರ್ಣವಾದುದು ಮತ್ತು ಇಂದಿನ ಆಧುನಿಕ ಜೀವನದ ನಡುವೆ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಮುಗ್ಗೇರಿ ನಾಗರಾಜ ಭಟ್, ಭಾವನಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಹಾಗೂ ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ, ವಿಶುರಾವ್ ಹಾವಂಜೆ ಹಾಗೂ ಉದಯ್ ಕೋಟ್ಯಾನ್ ಉಪಸ್ಥಿತರಿದ್ದರು.

ಈ ಬೇಸಿಗೆ ಶಿಬಿರವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಬಿಹಾರದ ಜನಪದ ಕಲೆಗಳ ಕಲಿಕೆ, ಕಸದಿಂದ ರಸ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಬಟ್ಟೆಯ ಮೇಲೆ ಮುದ್ರಣ ಕಲೆ ಮುಂತಾದ ಹತ್ತು ಹಲವಾರು ಅಂಶಗಳನ್ನು ಶಿಬಿರದಲ್ಲಿ ಕಲಿಸಿ ಕೊಡಲಾಗುತ್ತಿದೆ.

* ಇಂದು ಸಮಾರೋಪ

ಶಿಬಿರದ ಸಮಾರೋಪ ಸಮಾರಂಭ ಏ.14ರಂದು ಸಂಜೆ ೨.೩೦ಕ್ಕೆ ನೆರವೇರಲಿದ್ದು, ಇದೇ ಸಂದರ್ಭದಲ್ಲಿ ‘ಕಲಾ ಸಿಂಧು’ ಪುರಸ್ಕಾರವನ್ನು ವಿದುಷಿ ಪವನ ಬಿ. ಆಚಾರ್ ಹಾಗೂ ಭಾವನಾ ಪುರಸ್ಕಾರವನ್ನು ಹೋಂ ಡಾಕ್ಟರ್ ಫೌಂಡೇಶನ್‌ನ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಉಡುಪಿಯ ಪ್ರಭಾವತಿ ವಿ. ಶೆಣೈ ಹಾಗೂ ಉದ್ಯಮಿಗಳಾದ ಆನಂದ ಕಾರ್ನಾಡ್‌ ಉಪಸ್ಥಿತರಿರುವರು.