ಕನ್ನಡಪ್ರಭ ವಾರ್ತೆ ಮಂಡ್ಯ

ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಾನು ಮಠದ ಸದ್ಭಕ್ತ. ಮಠವನ್ನು ಆರಾಧಿಸುತ್ತೇನೆ. ತಿರುಚುವಂತಹ ಕೆಲಸವನ್ನು ನಮ್ಮ ಸ್ನೇಹಿತರು ಮಾಡುತ್ತಿದ್ದಾರೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.

ನಾನೆಂದಿಗೂ ಚುಂಚಶ್ರೀಗಳಿಗೆ ಅಗೌರವ ತೋರಿಲ್ಲ. ಅವರು ಹೇಳಿದಾಗ ಕೆಲಸಗಳೆಲ್ಲವನ್ನೂ ಚಾಚೂ ತಪ್ಪದೇ ಮಾಡಿದ್ದೇನೆ. ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಈಗಿರುವ ಶ್ರೀಗಳನ್ನು ಭೇಟಿ ಮಾಡುವುದಕ್ಕೆ ಸ್ವಲ್ಪ ತಡವಾಗುತ್ತಿದೆ ಎಂದಷ್ಟೇ ಹೇಳಿದ್ದೇನೆ ಅಷ್ಟೇ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಸುದ್ದಿಗಾರರೆದುರು ಸ್ಪಷ್ಟಪಡಿಸಿದರು.

ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ವಿದ್ಯಾವಂತರು, ಬುದ್ಧಿವಂತರು. ಶ್ರೀಮಠವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ನಾನು ಮಠದೊಂದಿಗೆ ಹೆಚ್ಚು ಸಂಪರ್ಕವಿಲ್ಲದಿದ್ದರೂ ಶ್ರೀಗಳ ವಿಚಾರದಲ್ಲಿ ಬಹಳ ಗೌರವದಿಂದ ನಡೆದುಕೊಳ್ಳುತ್ತಿದ್ದೇನೆ. ಆದರೂ ಕೆಲವರು ಮಾತಿನ ಭರದಲ್ಲಿ ಆಡಿದಂತಹ ಕೆಲವು ಮಾತನ್ನು ತಿರುಚಿದ್ದಾರೆ. ಅವರು ಯಾರೆಂಬುದು ಮುಂದೆ ಹೇಳುತ್ತೇನೆ. ನನ್ನ ಮಾತಿನಿಂದ ಶ್ರೀಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಶ್ರೀಮಠದ ಭಕ್ತರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಇದನ್ನು ಇಲ್ಲಿಗೆ ಕೈಬಿಡುವಂತೆ ಮನವಿ ಮಾಡಿದರು.ಚುಂಚಶ್ರೀ ಬಗ್ಗೆ ವಿವೇಚನೆಯಿಂದ ಮಾತನಾಡಲಿ: ಸಚ್ಚಿದಾನಂದ

ಕನ್ನಡಪ್ರಭ ವಾರ್ತೆ ಮಂಡ್ಯ


ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಮತ್ತು ವಿವೇಚನೆ ಇರಬೇಕು. ಈ ನಿಟ್ಟಿನಲ್ಲಿ ಶಾಸಕ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ ನೀಡಿರುವ ಹೇಳಿಕೆ ಅವರಿಗೇ ಶೋಭೆ ತರುವಂತದ್ದಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಿಚುಂಚನಗಿರಿ ಮಠಕ್ಕೆ 1800 ವರ್ಷದ ಇತಿಹಾಸವಿದೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಸದುದ್ದೇಶದಿಂದ ಡಾ.ನಿರ್ಮಲಾನಂದನಾಥ ಅವರನ್ನು ನೇಮಿಸಿದರು. ಅದರಂತೆ ನಿರ್ಮಲಾನಂದನಾಥ ಶ್ರೀಗಳು ಕೂಡ ಪ್ರಪಂಚದಾದ್ಯಂತ ಮಠದ ಹಿರಿಮೆಯನ್ನು ಪಸರಿಸುತ್ತಿದ್ದಾರೆ. ಸರ್ಕಾರ ಸಮರ್ಪಕವಾಗಿ ಮಾಡಲಾಗದ ಕಾರ್ಯವನ್ನು ಅಂದರೆ ಅನ್ನ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಮಠ ತನ್ನದೇ ಆದ ಕೊಡುಗೆ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಮಠದಲ್ಲಿ ಶಿಕ್ಷಣ ಕಲಿತು ಬದುಕು ರೂಪಿಸಿಕೊಂಡಿದ್ದಾರೆ. 650ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದಿದ್ದಾರೆ.ಒಕ್ಕಲಿಗ ಸೇರಿದಂತೆ ಎಲ್ಲ ಸಮುದಾಯ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಚುಂಚಶ್ರೀ ಮಾಡುತ್ತಿದ್ದಾರೆ. ರಾಷ್ಟ್ರೀಯ ಧರ್ಮ ಪರಿಷತ್ ಸಲಹೆಗಾರರಾಗಿ ಶ್ರೀಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಕ್ಷಾತೀತವಾಗಿ ಶ್ರೀಗಳ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಕೈನ ಒಂದು ಬೆರಳು ಬೇರೆಯವರ ಬಗ್ಗೆ ತಪ್ಪು ತೋರಿಸಿದರೆ ಉಳಿದ ನಾಲ್ಕು ತಮ್ಮ ಕಡೆಯೆ ತೋರಿಸುತ್ತದೆ ಎನ್ನುವುದನ್ನು ಶಾಸಕರು ನೆನಪು ಮಾಡಿಕೊಳ್ಳಬೇಕು. ಸಾಧು-ಸಂತರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ತಮ್ಮ ಭಾಷಣದಲ್ಲಿ ಮಠ ಸಂಪರ್ಕ ಕಡಿಮೆ ಎಂದಿದ್ದಾರೆ. ಹಾಗಿದ್ದ ಮೇಲೆ ಮಠಗಳ ಸಾಮಾಜಿಕ ಸೇವೆಯ ಬಗ್ಗೆ ಅವರಿಗೆ ಏನು ಮಾಹಿತಿ ಇರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡುವ ಮುನ್ನ ಯೋಚಿಸಬೇಕು. ಆದರೆ, ಶಾಸಕ ವರ್ತನೆ ಅವರಿಗೆ ಮಠದ ಮೇಲಿರುವ ಭಾವನೆಯನ್ನು ತೋರಿಸುತ್ತದೆ. ಚುಂಚನಗಿರಿ ಮಠದ ಹಳಿ ತಪ್ಪಿಲ್ಲ. ಕೆಲ ದಿನದ ಹಿಂದಷ್ಟೇ ರೈತರ ಬಗ್ಗೆ ನಾಲಿಗೆ ಹರಿಯಬಿಟಿದ್ದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಯಾವ ಆತಂಕಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಶ್ರೀ ಕಾಲಭೈರವೇಶ್ವರ ಅವರಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.