ಪೊಲೀಸರ ಮೇಲೆ ಭರವಸೆ ಇಡಿ: ರೇಣುಕಾ ಸುಕುಮಾರ

| Published : Jul 02 2024, 01:32 AM IST

ಸಾರಾಂಶ

ಸಾರ್ವಜನಿಕರು ಮೊದಲು ಸಂಚಾರಿ ನಿಯಮ, ಕಾನೂನು ಪಾಲನೆಗೆ ಆದ್ಯತೆ ನೀಡಿ. ಎಲ್ಲ ಸಮಸ್ಯೆಗೂ ಪರಿಹಾರ ಪೊಲೀಸರು ಎಂಬ ಮನೊಭಾವದಿಂದ ಪ್ರತಿಯೊಬ್ಬರೂ ಹೊರಬನ್ನಿ.

ಹುಬ್ಬಳ್ಳಿ:

ಜನರಲ್ಲಿ ಈ ಹಿಂದೆ ಇದ್ದ ಬ್ರಿಟಿಷ ಪೊಲೀಸ್‌ ವ್ಯವಸ್ಥೆಯಿಂದ ಈಗ ಜನಸ್ನೇಹಿ ಪೊಲೀಸರು ಎಂಬ ಮನೋಭಾವ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರೂ ಸಹ ಪೊಲೀಸರ ಮೇಲೆ ಅಷ್ಟೇ ಭರವಸೆ ಇಡಿ ಎಂದು ಹು-ಧಾ ಮಹಾನಗರ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ ಹೇಳಿದರು.

ಅವರು ಶನಿವಾರ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ಸದಸ್ಯರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರು ಮೊದಲು ಸಂಚಾರಿ ನಿಯಮ, ಕಾನೂನು ಪಾಲನೆಗೆ ಆದ್ಯತೆ ನೀಡಿ. ಎಲ್ಲ ಸಮಸ್ಯೆಗೂ ಪರಿಹಾರ ಪೊಲೀಸರು ಎಂಬ ಮನೊಭಾವದಿಂದ ಪ್ರತಿಯೊಬ್ಬರೂ ಹೊರಬನ್ನಿ. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕೊಂಡುಕೊಳ್ಳಬೇಕು. ಹಾಗೆಯೇ ಸಮಸ್ಯೆಗಳು ಆಗದಂತೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡಿದ್ದೇ ಆದಲ್ಲಿ ಮೋಸ ಹೋಗುವುದು, ತೊಂದರೆಗೆ ಈಡಾಗುವುದು ತಪ್ಪುತ್ತದೆ ಎಂದರು.

ಇಂದಿನ ಜನರ ಮನಸ್ಥಿತಿ ಹೇಗಾಗಿದೆ ಎಂದರೆ, ನಾವು ಹೇಗೆ ಬೇಕಾದರೂ ಇರಬಹುದು, ಸಂಚಾರಿ ನಿಯಮ ಉಲ್ಲಂಘಿಸಬಹುದು. ಆದರೆ, ನನ್ನ ಸುತ್ತಮುತ್ತಲೂ, ನಾನು ಸಂಚರಿಸುವ ಮಾರ್ಗ ಚೆನ್ನಾಗಿರಬೇಕು ಎಂಬ ಮನಸ್ಥಿತಿ ಹೊಂದಿದ್ದಾರೆ. ಮೊದಲು ಇಂತಹ ಮನಸ್ಥಿತಿಯಿಂದ ಹೊರಬಂದಾಗ ಮಾತ್ರ ಸುಧಾರಣೆ ತರಲು ಸಾಧ್ಯವಾಗಲಿದೆ ಎಂದು ಹೇಳಿದರು.

ದಿನದಿಂದ ದಿನಕ್ಕೆ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ಸಮರ್ಪಕವಾದ ಅರಿವು ಹೊಂದದೇ ಇರುವುದು. ಇನ್ನು ಕೆಲವರು ಅರಿವು ಇದ್ದುಕೊಂಡೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಈ ಕುರಿತು ಈಗಾಗಲೇ ಹಲವು ಕಡೆಗಳಲ್ಲಿ ಜಾಗೃತಿ ಕಾರ್ಯ ಕೈಗೊಂಡರೂ ಸಹ ಜನರು ಮೋಸಕ್ಕೆ ಒಳಗಾಗುವುದು ತಪ್ಪಿಲ್ಲ. ಆದರೆ, ಜಾಗೃತಿ ಕಾರ್ಯದ ನಂತರ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಕೊಂಚ ಸಮಾಧಾನ ತಂದಿದೆ ಎಂದರು.ಇಂದು ಪೊಲೀಸರ ಮೇಲೆ ಜನರಿಗೆ ನಂಬಿಕೆಯಿಲ್ಲದಂತಾಗಿದೆ. ಇಂತಹ ಮನಸ್ಥಿತಿಯಿಂದ ಜನತೆ ಹೊರಬರಬೇಕು. ಮೊದಲು ನಾವು ಬದಲಾಗಬೇಕು ನಂತರ ಸಮಾಜದ ಬದಲಾವಣೆಗೆ ಕೈಜೋಡಿಸಬೇಕು. ಅಂದಾಗ ಮಾತ್ರ ಸುಧಾರಣೆ ಕಾಣಲು ಸಾಧ್ಯ. ಸಮಾಜದಲ್ಲಿ ಶೇ. 1ರಷ್ಟು ಜನರು ಪೊಲೀಸರೊಂದಿಗೆ ಕೈಜೋಡಿಸಿದ್ದೇ ಆದಲ್ಲಿ ಎಷ್ಟೋ ಸಮಸ್ಯೆಗಳಿಗೆ ತತ್‌ಕ್ಷಣ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಸಾರ್ವಜನಿಕರು ಇನ್ನಾದರೂ ಬದಲಾಗಿ ಸಂಚಾರಿ ನಿಯಮ, ಕಾನೂನು ಪಾಲನೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಹಾಗೂ ಟ್ರಾಫಿಕ್‌ ಸಮಸ್ಯೆಯಿಂದ ಪರಿಹಾರ ಕ್ರಮ ಕೈಗೊಳ್ಳಲು ಬೇಕಾದ ಅಗತ್ಯ ಸಲಹೆ-ಸೂಚನೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗುವುದು. ಹಾಗೂ ಸಾರ್ವಜನಿಕರ ಬೇಡಿಕೆಯ ಅನುಗುಣವಾಗಿ ಕೆಲವೇ ದಿನಗಳಲ್ಲಿ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಪ್ರಿಪೇಯ್ಡ್‌ ಆಟೋ ಸೇವೆ ಜಾರಿಗೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಸಾರ್ವಜನಿಕರಾದ ದಿವ್ಯಾ, ಜ್ಯೋತಿಷಿ ಗಣೇಶ ಹೆಗಡೆ, ಹೋಟೆಲ್ ಮಾಲಿಕರ ಸಂಘದ ರವಿ, ಸಾಮಾಜಿಕ ಕಾರ್ಯಕರ್ತ ಹುಸೇನಬಾಷಾ ತಲೆವಾಡ ಸೇರಿದಂತೆ ಹಲವರ ಪ್ರಶ್ನೆಗೆ ಪೊಲೀಸ್‌ ಆಯುಕ್ತೆ ಉತ್ತರಿಸಿದರು.

ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಕೆ. ಪಾಟೀಲ ಸೈಬರ್‌ ವಂಚನೆಯಿಂದ ತಪ್ಪಿಸಿಕೊಳ್ಳುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್‌.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗೇರ, ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.