ಜನಪ್ರತಿನಿಧಿಗಳು ಗವಿಶ್ರೀ ವಹಿಸಿದ ಜವಾಬ್ದಾರಿ ಮರೆತರೇ?

| Published : Mar 28 2025, 12:33 AM IST

ಸಾರಾಂಶ

ಬಿಎಸ್‌ಪಿಎಲ್ ಕಾರ್ಖಾನೆ ವಿರೋಧಿಸಿ ಫೆ. 24ರಂದು ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಲಾಗಿತ್ತು. ಈ ವೇಳೆ ಶ್ರೀಗಳು ಮಾತನಾಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ಅವರಿಗೆ ಕಾರ್ಖಾನೆ ಅನುಮತಿ ರದ್ದು ಮಾಡಿಕೊಂಡು ಕೊಪ್ಪಳಕ್ಕೆ ಬರಬೇಕು ಹಾಗೂ ಇದಕ್ಕೆ ಎಲ್ಲ ಜನಪ್ರತಿನಿಧಿಗಳು ಸಾಥ್‌ ನೀಡಬೇಕೆಂದು ಹೇಳಿದ್ದರು.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ಬಳಿ ಬೃಹತ್ ಬಿಎಸ್‌ಪಿಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಸ್ಥಾಪನೆಯಾಗಬಾರದು. ಇದರ ಹೊಣೆ ಜಿಲ್ಲೆಯ ಜನಪ್ರತಿನಿಧಿಗಳದ್ದು ಎಂದು ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆದ ಹೋರಾಟದಲ್ಲಿ ಗವಿಸಿದ್ಧೇಶ್ವರ ಶ್ರೀಗಳು ಜವಾಬ್ದಾರಿ ವಹಿಸಿ ಒಂದು ತಿಂಗಳು ಕಳೆದರೂ ಕಾರ್ಖಾನೆ ರದ್ದಾದ ಆದೇಶವಾಗಿಲ್ಲ. ಜನಪ್ರತಿನಿಧಿಗಳು ಸಹ ಮೌನವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಎಸ್‌ಪಿಎಲ್ ಕಾರ್ಖಾನೆ ವಿರೋಧಿಸಿ ಫೆ. 24ರಂದು ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಲಾಗಿತ್ತು. ಈ ವೇಳೆ ಶ್ರೀಗಳು ಮಾತನಾಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ಅವರಿಗೆ ಕಾರ್ಖಾನೆ ಅನುಮತಿ ರದ್ದು ಮಾಡಿಕೊಂಡು ಕೊಪ್ಪಳಕ್ಕೆ ಬರಬೇಕು ಹಾಗೂ ಇದಕ್ಕೆ ಎಲ್ಲ ಜನಪ್ರತಿನಿಧಿಗಳು ಸಾಥ್‌ ನೀಡಬೇಕೆಂದು ಹೇಳಿದ್ದರು. ಇದಾದ ಬಳಿಕ ಸರ್ವಪಕ್ಷದ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾರ್ಖಾನೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಆದರೆ, ಈ ವರೆಗೂ ಸರ್ಕಾರ ಲಿಖಿತ ಆದೇಶ ಮಾಡದೆ ಇರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಲು ತೋರಿದ ಆಸಕ್ತಿಯನ್ನು ನಂತರ ಜನಪ್ರತಿನಿಧಿಗಳು ಕಳೆದುಕೊಂಡಂತೆ ಕಾಣುತ್ತಿದೆ. ಬಿಎಸ್‌ಪಿಎಲ್ ಕಾರ್ಖಾನೆ ರದ್ದುಗೊಳಿಸುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪಳ್ಳಕ್ಕೆ ಬರದ ಎಂಬಿಪಾ:

ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರು, ಅಧಿವೇಶನದಲ್ಲಿ, ಬಿಎಸ್‌ಪಿಎಲ್ ಕಾರ್ಖಾನೆ ಕುರಿತಂತೆ ಕೊಪ್ಪಳಕ್ಕೆ ಭೇಟಿ ನೀಡಿ ಗವಿಸಿದ್ಧೇಶ್ವರ ಶ್ರೀಗಳ ಭೇಟಿಯಾಗಿ ಹೋರಾಟಗಾರರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದರು. ಜತೆಗೆ ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದು ಸೂಕ್ತವೇ ಎನ್ನುವುದನ್ನು ಅಧ್ಯಯನ ಮಾಡಲು ಐಐಎಸ್ಸಿಗೆ ವಹಿಸಿರುವುದಾಗಿ ಹೇಳಿದ್ದಾರೆ. ಆದರೆ ಸಚಿವರು ಕೊಪ್ಪಳ ಜಿಲ್ಲೆಗೆ ಇನ್ನೂ ವರೆಗೆ ಭೇಟಿ ನೀಡಲೇ ಇಲ್ಲ.

ಸಾಮಾಜಿಕ ಜಾಲತಾಣದಲ್ಲಿ ಟೀಕೆ:

ಗವಿಸಿದ್ಧೇಶ್ವರ ಶ್ರೀಗಳು ವಹಿಸಿದ್ದ ಜವಾಬ್ದಾರಿ ನಿಭಾಯಿಸುವ ಕುರಿತು ಈ ವರೆಗೂ ಸಾರ್ವಜನಿಕವಾಗಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ ನೀಡದೆ ಇರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಈ ನಡುವೆ ಬಿಎಸ್‌ಪಿಎಲ್ ಕಾರ್ಖಾನೆ ಕಾರ್ಯಾರಂಭಕ್ಕೆ ಕಾಮಗಾರಿ ಮಾಡುತ್ತಿದೆ. ಜತೆಗೆ ಎಂಎಸ್‌ಪಿಎಲ್ ಕಾರ್ಖಾನೆ ಸಿಬ್ಬಂದಿ ಕರೆತರಲು ಬಿಎಸ್‌ಪಿಎಲ್ ಹೆಸರಿನ ಬಸ್‌ಗಳನ್ನು ಕೊಪ್ಪಳದಲ್ಲಿ ಓಡಿಸುವ ಮೂಲಕ ಕಾರ್ಖಾನೆ ಸ್ಥಾಪನೆ ಕುರಿತು ಮತ್ತಷ್ಟು ಗೊಂದಲ ಹೆಚ್ಚಿಸಿದೆ.ಕಾರ್ಖಾನೆ ಸ್ಥಾಪನೆ ರದ್ದುಗೊಳಿಸಲು ಗವಿಸಿದ್ಧೇಶ್ವರ ಶ್ರೀಗಳು ಜನಪ್ರತಿನಿಧಿಗಳಿಗೆ ಜವಾಬ್ದಾರಿ ವಹಿಸಿದ್ದರು. ಅವರು ಲಿಖಿತ ರೂಪದಲ್ಲಿ ಕಾರ್ಖಾನೆ ರದ್ದತಿ ಕುರಿತು ಸರ್ಕಾರದಿಂದ ಆದೇಶ ಹೊರಡಿಸದೆ ಇರುವುದು ಬೇಸರದ ಸಂಗತಿ.

ರಮೇಶ ತುಪ್ಪದ ಸಂಚಾಲಕರು ಕೊಪ್ಪಳ ತಾಲೂಕು ಪರಿಸರ ಹೋರಾಟ ಸಮಿತಿಬಿಎಸ್‌ಪಿಎಲ್ ಕಾರ್ಖಾನೆಯನ್ನು ಕೊಪ್ಪಳ ಬಳಿ ಸ್ಥಾಪಿಸಲು ನಾವು ಬಿಡುವುದಿಲ್ಲ. ಈಗಾಗಲೇ ನಿರಂತರ ಹೋರಾಟ ಮಾಡುತ್ತಿದ್ದು, ಜನಪ್ರತಿನಿಧಿಗಳು ತಮ್ಮ ಜವಬ್ದಾರಿ ನಿಭಾಯಿಸದೆ ಇದ್ದರೆ ಹೋರಾಟ ತೀವ್ರಗೊಳಿಸುತ್ತೇವೆ.

ಅಲ್ಲಮಪ್ರಭು ಬೆಟ್ಟದೂರು ಸಂಚಾಲಕ, ಕೊಪ್ಪಳ ಬಚಾವೋ ಆಂದೋಲನ ಸಮಿತಿ