ಮುಡಾ ಪ್ರಕರಣ ರಾಜ್ಯ ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆಯೇ?

| Published : Feb 26 2025, 01:03 AM IST

ಮುಡಾ ಪ್ರಕರಣ ರಾಜ್ಯ ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆಯೇ?
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ, ಪಾರ್ವತಿ, ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ಮತ್ತು ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರ ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ ಎಂದಿರುವ ಲೋಕಾಯುಕ್ತ

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸಿದ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಮತ್ತು ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಿಎಂ, ಸಿಎಂ ಅವರ ಪತ್ನಿ ಪಾರ್ವತಿ, ಸಿಎಂ ಅವರ ಭಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಭೂಮಿ ಮಾರಾಟ ಮಾಡಿದ್ದ ಜೆ. ದೇವರಾಜು ಅವರ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ಮೈಸೂರಿನ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಸ್ನೇಹಮಯಿ ಕೃಷ್ಣ ಅವರಿಗೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ಅಂತಿಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಸಿದ್ದರಾಮಯ್ಯ, ಪಾರ್ವತಿ, ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ಮತ್ತು ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರ ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ ಎಂದಿರುವ ಲೋಕಾಯುಕ್ತವು, ಅಧಿಕಾರಿಗಳಾದ ಅಂದಿನ ಜಿಲ್ಲಾಧಿಕಾರಿ ಕುಮಾರ ನಾಯಕ್, ತಹಸೀಲ್ದಾರ್ ಶಂಕರ್, ರೆವಿನ್ಯೂ ಇನ್‌ ಸ್ಪೆಕ್ಟರ್‌ ಸಿದ್ದಪ್ಪಾಜಿ, ಭೂಮಾಪಕ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಶಂಕರಪ್ಪ ಮುಂತಾದ ಅಧಿಕಾರಿಗಳಿಂದಲೇ ಕರ್ತವ್ಯ ಲೋಪವಾಗಿದೆ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ.50:50ರ ಅನುಪಾತದ ಪರಿಹಾರ ನಿಯಮವನ್ನು ಸರ್ಕಾರ ರದ್ದುಪಡಿಸಿದ ನಂತರವೂ ದಿನೇಶ್ ಕುಮಾರ್ ಮತ್ತು ಮುಡಾದ ಹಿಂದಿನ ಅಧ್ಯಕ್ಷ ಕೆ. ಮರೀಗೌಡ ಅವರ ಮೌಖಿಕ ಆದೇಶದಂತೆ 252 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದೂ ವರದಿ ನೀಡಿದೆ ಲೋಕಾಯುಕ್ತ! ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ನೀಡಿದ ವರದಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ! ಇದೊಂದು ಗಂಭೀರ ಪ್ರಕರಣ.ಈ ಪ್ರಕರಣದ ವಿಚಾರವಾಗಿ ಎಲ್ಲ ವಿಷಯಗಳು ಮಾಧ್ಯಮದಲ್ಲಿ ವರದಿಯಾಗಿದೆ.ಆದರೆ ಸುದ್ದಿಯಾಗದ ಸುದ್ದಿಗಳು ಹಲವಾರು! ಅವುಗಳೆಂದರೆ..,ಮೈಸೂರಿನ ಲೋಕಾಯುಕ್ತ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುವ ಸಮಯದಲ್ಲಿ ಕರ್ನಾಟಕ ರಾಜ್ಯ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ಅಥವಾ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರ ಸಲಹೆ, ಸೂಚನೆ ಅಥವಾ ಮಾರ್ಗದರ್ಶನ ಪಡೆದಿದ್ದಾರೆಯೇ?ಈ ಹಗರಣದ ವಿಚಾರವಾಗಿ ಸ್ನೇಹಮಯಿ ಕೃಷ್ಣ ಲೋಕಾಯುಕ್ತರಿಗೆ ದೂರು ನೀಡಿದಂದಿನಿಂದ ಹಿಡಿದು ನ್ಯಾಯಾಲಯದ ನಿರ್ದೇಶನದ ಮೇರೆಗೆ ದೂರು ದಾಖಲಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ. ರಿಪೋರ್ಟ್ ಹಾಗೂ ಅಂತಿಮ ವರದಿ ಸಲ್ಲಿಸುವ ಹಂತದವರೆಗೆ ಕರ್ನಾಟಕ ರಾಜ್ಯದ ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರ ಗಮನಕ್ಕೆ ಈ ವಿಷಯವನ್ನು ತಿಳಿಸಿದ್ದಾರೆಯೇ?ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರಿಂದ ಸಲಹೆ, ಸೂಚನೆ, ಅಭಿಪ್ರಾಯ ಹಾಗೂ ಮಾರ್ಗದರ್ಶನ ಪಡೆದಿದ್ದರೆ ಅದೇಕೆ ಸುದ್ದಿಯಾಗಿಲ್ಲ?ಮೈಸೂರಿನ ಲೋಕಾಯುಕ್ತ ಪೊಲೀಸರು ಈ ಪ್ರಕರಣದ ವಿಚಾರವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮುನ್ನ ಕರ್ನಾಟಕ ರಾಜ್ಯ ಗೌರವಾನ್ವಿತ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರ ಅಭಿಪ್ರಾಯವನ್ನು ಪಡೆಯುವ ಅಗತ್ಯ ಇಲ್ಲವೇ?ಈ ಹಗರಣ, ಪ್ರಕರಣದ ವಿಚಾರವಾಗಿ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ವರದಿ ನೀಡುವ ಹಂತ ಹಂತದಲ್ಲಿಯೂ ಕರ್ನಾಟಕ ರಾಜ್ಯದ ಗೌರವಾನ್ವಿತ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರ ಸಲಹೆ, ಸೂಚನೆ, ಮಾರ್ಗರ್ಶನ ಹಾಗೂ ಅಭಿಪ್ರಾಯಗಳನ್ನು ಪಡೆದಿದೆಯೋ ಇಲ್ಲವೋ ಎಂಬುದನ್ನು ಗೌರವಾನ್ವಿತ ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ಸ್ಪಷ್ಟಪಡಿಸಿದರೆ ಮೈಸೂರಿನ ಲೋಕಾಯುಕ್ತ ಪೊಲೀಸರು ನೀಡಿದ ಕ್ಲೀನ್ ಚಿಟ್ ಗೇ ಕ್ಲೀನ್ ಚಿಟ್ ನೀಡಿದಂತಾಗುವುದರ ಜೊತೆಗೆ ಮುಡಾ ಹಗರಣದ ಚರ್ಚೆಗೂ ಪೂರ್ಣ ವಿರಾಮ ಹಾಕಿದಂತಾಗುತ್ತದೆ.- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.