ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, 12 ಎಮ್ಮೆಗಳ ಸಜೀವ ದಹನ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಕ್ಕೆ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು ಭೇಟಿ ನೀಡಿ ಜಾನುವಾರು ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, 12 ಎಮ್ಮೆಗಳ ಸಜೀವ ದಹನ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಕ್ಕೆ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು ಭೇಟಿ ನೀಡಿ ಜಾನುವಾರು ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಕಳೆದ ಗುರುವಾರ ರಾತ್ರಿ ಗುಡುಗು, ಮಿಂಚು ಸಹಿತ ಜೋರಾಗಿ ಬೀಸಿದ ಮಳೆಗಾಳಿಗೆ ವಿದ್ಯುತ್ ಲೈನ್‌ಗಳ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೊಟ್ಟಿಗೆಯಲ್ಲಿದ್ದ 14 ಎಮ್ಮೆಗಳ ಪೈಕಿ 12 ಎಮ್ಮೆಗಳು ಸಜೀವ ದಹನಗೊಂಡಿದ್ದವು. ಎರಡು ಎಮ್ಮೆಗಳು ತೀವ್ರವಾಗಿ ಸುಟ್ಟು ಅಸ್ವಸ್ಥಗೊಂಡಿದ್ದವು. ಜತೆಗೆ ನಾಲ್ಕೈದು ಟ್ರ್ಯಾಕ್ಟರ್‌ನಷ್ಟು ಮೆಕ್ಕೆಜೋಳ ರೌದಿ ಕೂಡ ಸುಟ್ಟು ಭಸ್ಮವಾಗಿತ್ತು. ಇದರಿಂದ ಗ್ರಾಮದ ರೈತ ಪರಮೇಶಪ್ಪ ಸೋಮಣ್ಣ ಜಾಡರ ಕುಟುಂಬ ಚಿಂತಾಕ್ರಾಂತವಾಗಿತ್ತು, ಶನಿವಾರ ಗ್ರಾಮಕ್ಕೆ ಆಗಮಿಸಿದ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಎದುರು ರೈತ ಪರಮೇಶಪ್ಪ ಹಾಗೂ ಪತ್ನಿ ಅಳುತ್ತಾ ಗೋಗರೆಯುತ್ತಿದ್ದ ದೃಶ್ಯ ನೆರೆದಿದ್ದವರ ಹೃದಯ ಚುರ್ ಎನಿಸುವಂತೆ ಮಾಡಿತು. ಈ ವೇಳೆ ಶಾಸಕ ಬಸವರಾಜ ಶಿವಣ್ಣನವರ ಕುಟುಂಬಸ್ಥರನ್ನು ಸಮಾಧಾನಪಡಿಸಿ ಮಾತನಾಡಿ, ಸುಮಾರು 12 ಎಮ್ಮೆಗಳು ಸಜೀವ ದಹನಗೊಂಡಿರುವುದು ನನಗೂ ವೈಯಕ್ತಿಕವಾಗಿ ಬಹಳ ನೋವನ್ನುಂಟು ಮಾಡಿದೆ. ಘಟನೆ ಆಗಬಾರದಿತ್ತು, ನಡೆದು ಹೋಗಿದೆ. ನೀವು ಆತ್ಮಸ್ಥೈರ್ಯದಿಂದ ಇರಬೇಕು. ನಿಮ್ಮ ಪರವಾಗಿ ನಾವು ಇದ್ದೇವೆ. ಶಾಸಕರು ಇದ್ದಾರೆ. ಸರ್ಕಾರವೂ ಇದೆ ಎಂದು ಸಮಾಧಾನಪಡಿಸಿದರು. ಬಳಿಕ ವೈಯಕ್ತಿಕವಾಗಿ 25 ಸಾವಿರ ರು. ಧನಸಹಾಯ ಮಾಡಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಹಾಗೂ ಪಶು ಸಂಗೋಪನಾ ಇಲಾಖೆಯಿಂದಲೂ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಸೇರಿದಂತೆ ಗ್ರಾಮದ ಮುಖಂಡರು ಇದ್ದರು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭೇಟಿ:ಗ್ರಾಮಕ್ಕೆ ಆಗಮಿಸಿದ ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ರೈತ ಪರಮೇಶಪ್ಪ ಜಾಡರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವ್ವನ ಹೇಳಿದರು. 12ಕ್ಕೂ ಹೆಚ್ಚು ಎಮ್ಮೆಗಳು ಬೆಂಕಿಗೆ ಬಲಿಯಾಗಿರುವುದು ಬಹಳ ನೋವನ್ನುಂಟು ಮಾಡಿದೆ. ತಾವೂ ಕೂಡ ವೈಯಕ್ತಿಕವಾಗಿ 1 ಲಕ್ಷ ರು. ಸಹಾಯಧನ ನೀಡುತ್ತೇನೆ ಎಂದು ತಿಳಿಸಿದರು. ಸರ್ಕಾರದ ವತಿಯಿಂದಲೂ ಸೂಕ್ತ ಪರಿಹಾರ ಕೊಡಿಸಲು ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.