ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸಿದ ಹಾವೇರಿ ಜಿಲ್ಲಾಧಿಕಾರಿ

| Published : Mar 27 2025, 01:00 AM IST

ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸಿದ ಹಾವೇರಿ ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯ ಮಕ್ಕಳಿಗೆ ಜಿಲ್ಲಾಧಿಕಾರಿಗಳೇ ಸ್ವತಃ ಊಟ ಬಡಿಸಿದರು. ಶಾಲೆಯಲ್ಲಿ ನಿಯಮಾನುಸಾರ ಹಾಲು ಹಾಗೂ ಮೊಟ್ಟೆ ವಿತರಣೆಯಾಗುತ್ತಿರುವ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.

ಹಾವೇರಿ: ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕು ಹಾಗೂ ಅಂಗನವಾಡಿ ಸೌಲಭ್ಯಗಳು ಎಲ್ಲ ಮಕ್ಕಳಿಗೂ ತಲುಪಬೇಕು. ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡುವ ಮೂಲಕ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶಿಕ್ಷಕರ ಕೊರತೆ ಇರುವ ಶಾಲೆಗಳಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರದ ಎಲ್ಲ ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಶಿಕ್ಷಕರಿಗೆ ಹೇಳಿದರು.ಶಾಲೆಗಳಲ್ಲಿ ನಿತ್ಯ ನೀಡುವ ಮಧ್ಯಾಹ್ನದ ಬಿಸಿ ಊಟ ರುಚಿಯಾಗಿ ಹಾಗೂ ಗುಣಮಟ್ಟದಿಂದ ಕೂಡಿರಬೇಕು. ಅಡುಗೆ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಅಡುಗೆ ಸಿಬ್ಬಂದಿಗೆ ಸಲಹೆ ನೀಡಿದರು. ಬಳಿಕ ಶಾಲೆಯ ಮಕ್ಕಳಿಗೆ ಜಿಲ್ಲಾಧಿಕಾರಿಗಳೇ ಸ್ವತಃ ಊಟ ಬಡಿಸಿದರು. ಶಾಲೆಯಲ್ಲಿ ನಿಯಮಾನುಸಾರ ಹಾಲು ಹಾಗೂ ಮೊಟ್ಟೆ ವಿತರಣೆಯಾಗುತ್ತಿರುವ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಆಗ್ರಹ

ಸವಣೂರು: ಕಟ್ಟಡ ಕಾರ್ಮಿಕರು ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸೌಲಭ್ಯಗಳನ್ನು ಎಲ್ಲ ಕಟ್ಟಡ ಕಾರ್ಮಿಕರಿಗೂ ಒದಗಿಸಿಕೊಡುವಂತೆ ಡಿವೈಎಫ್‌ಐ ನೇತೃತ್ವದಲ್ಲಿ ಕಾರ್ಮಿಕರು ತಹಸೀಲ್ದಾರ್ ಭರತರಾಜ ಕೆ.ಎನ್. ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

2022- 2023ನೇ ಸಾಲಿನಲ್ಲಿ ಸೇವಾ ಸಿಂಧು ಮೂಲಕ ಮದುವೆ ಸಹಾಯಧನಕ್ಕೆ ಸಲ್ಲಿಸಿರುವ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಆಗಿದ್ದನ್ನು ತಡೆ ಹಿಡಿಯಲಾಗಿದೆ. ಮಂಜೂರಾದ ಫಲಾನುಭವಿಗೆ ಮದುವೆ ಸಹಾಯ ಧನವನ್ನು ಕೂಡಲೇ ವಿಲೇವಾರಿ ಮಾಡಬೇಕು. ರದ್ದಾದ ಕಾರ್ಮಿಕ ಕಾರ್ಡನ್ನು ಮರುಪರಿಶೀಲನೆ ಮಾಡಲು ಅಕ್ಷೇಪಣಾ ಅರ್ಜಿ ಕೊಟ್ಟಿರುವ ಫಲಾನುಭವಿಗಳ ಅರ್ಜಿಯನ್ನು ಪರಿಶೀಲನೆ ಮಾಡಿ ಅರ್ಹ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಬೇಕು. ಮಹಿಳಾ ಕಾರ್ಮಿಕರು ನವೀಕರಣಕ್ಕೆ ಸಲ್ಲಿಸಿರುವ ಕಾರ್ಡ್‌ಗಳನ್ನು ಕೂಡಲೇ ನವೀಕರಿಸಬೇಕು. ಅರ್ಹ ಕಾರ್ಮಿಕರಿಗೆ ಅನ್ಯಾಯವಾಗದಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಲೂಕಿನ ಕಾರ್ಮಿಕ ನಿರೀಕ್ಷಕರು ವೇಳೆಗೆ ಸರಿಯಾಗಿ ನವೀಕರಣ ಮಾಡದೆ, ಸುಮಾರು ಎಂಟು ತಿಂಗಳಿನಿಂದ ಕಾರ್ಮಿಕರನ್ನು ಅಲೆದಾಡಿಸುತ್ತಿದಾರೆ. ಅರ್ಹ ಕಾರ್ಮಿಕರು ಇದ್ದರೂ ಕಾರ್ಡ್ ಮಂಜೂರಿ ಮಾಡುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಇದನ್ನು ಕೂಡಲೇ ಬಗೆಹರಿಸಬೇಕು. ತಾಲೂಕಿನ ಕಾರ್ಮಿಕ ಇಲಾಖೆ ನೀರಿಕ್ಷಕರು ಮತ್ತು ಸಿಬ್ಬಂದಿ ನಿಯಮಾನುಸಾರ ಅರ್ಹ ಕಾರ್ಮಿಕರನ್ನು ಸ್ಥಾನಿಕವಾಗಿ ಗುರುತಿಸಿ, ಕಾರ್ಮಿಕರಿಗೆ ಸಿಗುವಂತ ಸೌಲಭ್ಯವನ್ನು ನೀಡುತ್ತಿಲ್ಲ ಹಾಗೂ ಅನರ್ಹ ಕಾರ್ಮಿಕರಿಗೆ ಕಾರ್ಮಿಕ ಕಾರ್ಡನ್ನು ವಿತರಿಸಿ, ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ.ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳಬೇಕು. ವೈದ್ಯಕೀಯ ವೆಚ್ಚವನ್ನು ಮತ್ತು ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಅನ್ನು 2021ರಿಂದ ಇಲ್ಲಿಯವರೆಗೂ ಕೊಟ್ಟಿಲ್ಲ. ಅವುಗಳನ್ನು ಕೂಡಾ ಕೂಡಲೇ ನೀಡಬೇಕು. ಇಲ್ಲದೇ ಹೋದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಸಲಾಮಸಾಬ ಮುಲ್ಲಾ, ನಿಂಗನಗೌಡ ದೊಡ್ಮನಿ, ಭವಾನಿ ಗುಡಗೇರಿ, ಮೀನಾಕ್ಷಿ ಸೊರಟೂರ, ಚನ್ನವೀರಯ್ಯ ಹಿರೇಮಠ, ಇರ್ಶಾದ ಮೋನಾಶಿ, ಮಂಜುನಾಥ ಮೆಳ್ಳಳ್ಳಿ, ರಿಯಾಜಹ್ಮದ ಕೋಟೆನವರ, ರಿಯಾಜಅಹ್ಮದ ಮರ್ಪಾಜಿ, ಹಜರತಲ್ಲಿ ನದಾಫ ಇತರರು ಇದ್ದರು.