ಹಾವೇರಿ: ಹೋಳಿ ಹಬ್ಬದ ನಿಮಿತ್ತ ಜಿಲ್ಲಾ ಕೇಂದ್ರ ಹಾವೇರಿ ನಗರದ ಜನತೆ ಬಣ್ಣದ ಓಕುಳಿಯಲ್ಲಿ ಮಿಂದಿದ್ದರು.
ಮಕ್ಕಳ ಕೈಯಲ್ಲೊಂದು ಪಿಚಕಾರಿ, ಎಲ್ಲೆಡೆ ಹಲಗೆ-ತಮಟೆಯ ಸದ್ದು, ಯುವಕರ-ಯುವತಿಯರ ಮಸ್ತ್ ಡ್ಯಾನ್ಸ್, ಅದಕ್ಕೆ ತಕ್ಕಂತೆ ಹೆಜ್ಜೆ, ಕೆಲವೆಡೆ ರೀಲ್ಸ್, ಬಣ್ಣ ಹಚ್ಚಿ ಮುಖದ ಗುರುತು ಸಿಗದಿದ್ದರೂ ಸೆಲ್ಫಿ... ಹೀಗೆ ಇಡೀ ನಗರಾದ್ಯಂತ ಕಲರ್ ಫುಲ್ ಹೋಳಿಯಲ್ಲಿ ಜನರು ಮಿಂದೆದ್ದಿದ್ದರು.ಬಣ್ಣದಾಟದ ಓಕುಳಿಯ ಈ ಸಂದರ್ಭದಲ್ಲಿ ಕಾಮದಹನದ ನಂತರ ಒಬ್ಬರಿಗೊಬ್ಬರು ಹ್ಯಾಪಿ ಹೋಳಿ... ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡ ಸಾರ್ವಜನಿಕರು ಸಂಪೂರ್ಣ ರಂಗುರಂಗಿನ ಬಣ್ಣದಾಟದಲ್ಲಿ ತೊಡಗಿ ಸೌಹಾರ್ದತೆಯ ಸಂಕೇತ ಸಾರಿದರು. ಇಲ್ಲಿ ಮಕ್ಕಳು ಮಹಿಳೆಯರಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲೆಡೆ ಬೊಬ್ಬೆ ಹಾಕುತ್ತಲೇ ತಮ್ಮ ಮನೆ, ಬಡಾವಣೆಗಳಿಂದ ಬಣ್ಣದೋಕುಳಿ ಆರಂಭಿಸಿದ ಜನರು ಪರಸ್ಪರ ಗುಲಾಲ್ ಎರಚಿ ಖುಷಿಪಟ್ಟರು.
ಸರ್ಕಾರಿ ಕಾಮನ ದಹನ: ಬೆಳಗ್ಗೆ 11ಕ್ಕೆ ನಗರದ ಗೌಡ್ರ ಮನೆತನ, ಗಣ್ಯರು ಭಾಜಾ-ಭಜಂತ್ರಿಯೊಂದಿಗೆ ಅಂಬೇಡ್ಕರ್ ಓಣಿಗೆ ಹೋಗಿ ಬೆಂಕಿ ಕೆಂಡ ತೆಗೆದುಕೊಂಡು ಬಂದು ಎಂ.ಜಿ. ರಸ್ತೆಯ ಚೌಡಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸರ್ಕಾರಿ ಕಾಮದಹನ ಮಾಡಿದರು. ಆನಂತರ ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಆನೆಬಂಡಿ ಮೇಲೆ ಕಾಮಣ್ಣನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರು ಯುವಕರು ತಮ್ಮ ತಮ್ಮ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣನಿಗೆ ಬೆಂಕಿ ಕೆಂಡವನ್ನು ತೆಗೆದುಕೊಂಡು ಹೋಗಿ ದಹನ ಮಾಡಿ ಸಂಭ್ರಮಿಸಿದರು.ನಗರದ ವಿವಿಧೆಡೆ ಹೋಳಿ:
ರಂಗುರಂಗಿನ ಹೋಳಿ ಹಬ್ಬದ ಅಂಗವಾಗಿ ನಗರದ ಜೆ.ಎಚ್. ಪಟೇಲ್ ಸರ್ಕಲ್, ಬಸವೇಶ್ವರನಗರ, ಜೆ.ಪಿ. ವೃತ್ತ, ಮೈಲಾರ ಮಹದೇವ ವೃತ್ತ, ಸುಭಾಸ್ ವೃತ್ತ, ಶಿವಯೋಗೀಶ್ವರ ನಗರ, ಎಂ.ಜಿ. ವೃತ್ತ, ಹುಕ್ಕೇರಿಮಠ, ಅಶ್ವಿನಿ ನಗರ, ಶಿವಾಜಿ ನಗರ, ಕಲ್ಲುಮಂಟಪ ರೋಡ್, ಕಾಗಿನೆಲೆ ವೃತ್ತ, ಎಲ್‌ಬಿಎಸ್ ಮಾರುಕಟ್ಟೆ, ಎಪಿಎಂಸಿ, ಪುರದ ಓಣಿ, ಶಿವಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ ಯುವಕ-ಯುವತಿಯರು ಹಲಗೆ ಸಪ್ಪಳಕ್ಕೆ ಹೆಜ್ಜೆ ಹಾಕಿ, ಪರಸ್ಪರ ಬಣ್ಣವನ್ನು ಎರಚಿ ಹೋಳಿ ಹಬ್ಬ ಸಂಭ್ರಮಿಸಿದರು.
ಟಪ್ಪಾಂಗುಚ್ಚಿ ಡ್ಯಾನ್ಸ್‌ಗೆ ಯುವಪಡೆ ಸುಸ್ತು: ರಂಗುರಂಗಿನ ಹೋಳಿ ಹಬ್ಬದ ಹಿನ್ನೆಲೆ ಯುವಕ, ಯುವತಿಯರು ಕ್ರೇಜ್ ಹೆಚ್ಚಿಸುವ ಟಪ್ಪಾಂಗುಚ್ಚಿ ಡ್ಯಾನ್ಸ್‌ಗಳಿಗೆ ಹೆಜ್ಜೆ ಹಾಕಿದರು. ವಸಂತಾ ವಸಂತಾ ಬ್ಯೂಟಿಫುಲ್ ವಸಂತಾ, ಲಂಗಾ ದಾವಣ್ಯಾಗ ಮಸ್ತ್ ಕಾಣಸ್ತಿ ಲಾವಣ್ಯ, ನನ್ನಾಣೆ ನಾನು ಮತ್ತಿನಲ್ಲಿ ಸುಖವಾ ಕಂಡೇನು... ಕರಿಯ ಕೂದಲಿಗೆ ಕೆಂಪನ ಬಣ್ಣ... ಸೋ ನೈಸ್ ಸೋ ನೈಸಾ..., ಚಿಗರಿಯ ಹೆಜ್ಜೆ ಕಾಲಾಗ ಗೆಜ್ಜೆ..., ಶೇಖ್ ಇಟ್ ಪುಷ್ಪವತಿ, ರಾ.. ರಾ.. ರಕ್ಕಮ್ಮ, ಪುಷ್ಪಾ ಪುಷ್ಪರಾಜ್.. ಏಳೇಳು ಬಣ್ಣದ ರಂಗಿನ ಹೋಳಿ ಹೀಗೆ ಅನೇಕ ಚಿತ್ರಗಳು ಹಾಗೂ ಟ್ರೆಂಡ್‌ನಲ್ಲಿರುವ ಜನಪದ ಹಾಡು, ರೀಲ್ಸ್, ರಿಮೇಕ್ಸ್ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಮೈ ಒದ್ದೆಯಾಗಿಸಿದ ರೇನ್ ಡ್ಯಾನ್ಸ್: ಹೋಳಿ ಹಬ್ಬದ ಅಂಗವಾಗಿ ಮುನ್ಸಿಪಲ್ ಹೈಸ್ಕೂಲ್ ರಸ್ತೆಯ ಆಂಜನೇಯ ದೇವಸ್ಥಾನ ಬಳಿ ಮಕ್ಕಳು ರೇನ್ ಡ್ಯಾನ್ಸ್ ಮಾಡಿ ಖುಷಿಪಟ್ಟರು. ನಗರದಲ್ಲೆಲ್ಲಾ ಬಣ್ಣದಾಟವಾಡಿ ಬಿಸಿಲೇರುತ್ತಿದ್ದಂತೆ ಕೆಲ ಯುವಕರು ರೇನ್ ಡ್ಯಾನ್ಸ್ ಮಾಡಲು ರೂಪಿಸಿದ ಸೆಟ್‌ಬಳಿ ಬಂದು ಮೈಯಲ್ಲಾ ಒದ್ದೆಯಾಗಿಸಿಕೊಂಡು ವಿವಿಧ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದರು. ಇದರ ಜತೆಗೆ ವಿವಿಧೆಡೆ ತಮ್ಮ ತಮ್ಮ ಬಡಾವಣೆ ಹಾಗೂ ಮನೆಗಳ ಮುಂದೆ ರೇನ್ ಪೈಪ್‌ಗಳನ್ನು ಅಳವಡಿಕೊಂಡು ಬಿಸಿಲಿನ ಬೇಗೆಯ ನಡುವೆ ಹೋಳಿಯಾಟದಲ್ಲಿ ಮಿಂದೇಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.