ಜಾತಿ ಸಮೀಕ್ಷೆ ಪ್ರಗತಿಯಲ್ಲಿ 2ನೇ ಸ್ಥಾನದಲ್ಲಿ ಹಾವೇರಿ

| Published : Oct 09 2025, 02:01 AM IST

ಜಾತಿ ಸಮೀಕ್ಷೆ ಪ್ರಗತಿಯಲ್ಲಿ 2ನೇ ಸ್ಥಾನದಲ್ಲಿ ಹಾವೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಜಿಲ್ಲೆಯಲ್ಲಿ ಈ ವರೆಗೆ ಶೇ. 98.8ರಷ್ಟು ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಹಾವೇರಿ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ.

ಹಾವೇರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಜಿಲ್ಲೆಯಲ್ಲಿ ಈ ವರೆಗೆ ಶೇ. 98.8ರಷ್ಟು ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಹಾವೇರಿ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ.

ಜಿಲ್ಲೆಯ 4,15,063 ಕುಟುಂಬಗಳ ಪೈಕಿ 4,04,587 ಕುಟುಂಬಗಳ ಸಮೀಕ್ಷಾ ಕಾರ್ಯ ನಡೆದಿದ್ದು, ಇನ್ನೂ 10,476 ಕುಟುಂಬಗಳ ಬಾಕಿಯಿದೆ. ಸಮೀಕ್ಷೆ ಕಾರ್ಯವನ್ನು ಅ. 18ರ ವರೆಗೆ ವಿಸ್ತರಣೆ ಮಾಡಿದ್ದರಿಂದ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯ ಭರದಿಂದ ಸಾಗಿದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭದಲ್ಲಿ ಆ್ಯಪ್ ಹಾಗೂ ಒಟಿಪಿ ಸಮಸ್ಯೆ ಸೇರಿ ತಾಂತ್ರಿಕ ಅಡಚಣೆಗಳ ನಡುವೆ ಸಮೀಕ್ಷೆ ನಿರತ ಗಣತಿದಾರರು ಹಾಗೂ ಅಧಿಕಾರಿಗಳು ಸಮಸ್ಯೆ ಎದುರಿಸಿದ್ದರು. ಆನಂತರ ಸರ್ವರ್ ಸಮಸ್ಯೆ, ಆ್ಯಪ್ ಡೌನ್‌ಲೋಡ್, ಒಟಿಪಿ ಸೇರಿ ಇತರ ತಾಂತ್ರಿಕ ಸಮಸ್ಯೆ ತೊಡಕುಗಳನ್ನು ನಿವಾರಿಸಿಕೊಂಡು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವನ್ನು ಶೇ. 98.8ರಷ್ಟು ಪೂರ್ಣಗೊಳಿಸಲಾಗಿದೆ.

3,777 ಗಣತಿದಾರರಿಂದ ಸಮೀಕ್ಷೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 3,777 ಗಣತಿದಾರರನ್ನು ನಿಯೋಜನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಬ್ಬ ಗಣತಿದಾರರಿಗೆ 100ರಿಂದ 150 ಕುಟುಂಬಗಳ ಸಮೀಕ್ಷೆ ಗುರಿ ನೀಡಲಾಗಿತ್ತು. ಈಗಾಗಲೇ ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಲ್ಲಿ ಗಣತಿದಾರರು ಬಹುತೇಕ ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದಾರೆ.

4,04,587 ಕುಟುಂಬಗಳ ಸಮೀಕ್ಷೆ ಪೂರ್ಣ: ಜಿಲ್ಲೆಯಲ್ಲಿ 4,15,063 ಮನೆಗಳನ್ನು ಸಮೀಕ್ಷೆಗೆ ಒಪಡಿಸಲಾಗಿದ್ದು, ಈ ವರೆಗೆ 4,04,587 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 36321, ಹಾನಗಲ್ಲ 64882, ಹಾವೇರಿ 73373, ಹಿರೇಕೆರೂರು 31006, ರಾಣಿಬೆನ್ನೂರು 82,436, ರಟ್ಟಿಹಳ್ಳಿ 29,082, ಸವಣೂರು 39,973 ಹಾಗೂ ಶಿಗ್ಗಾಂವಿಯಲ್ಲಿ 47,514 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅ. 18ರ ವರೆಗೆ ವಿಸ್ತರಣೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಶೇ. 98.8ರಷ್ಟಾಗಿದೆ. ಅ. 18ರ ವರೆಗೆ ಸಮೀಕ್ಷೆ ಅವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದಾದರೂ ಮನೆ ಈ ವರೆಗೆ ಸಮೀಕ್ಷೆಯಾಗದಿದ್ದಲ್ಲಿ ಮತ್ತು ಸ್ವಇಚ್ಛೆಯಿಂದ ಸಮೀಕ್ಷೆಗೆ ಒಳಪಡಲು ಇಚ್ಛಿಸಿದ್ದಲ್ಲಿ ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್‌ ಕಚೇರಿಗಳು ಅಥವಾ ಜಿಲ್ಲಾ ಮಟ್ಟದ ಸಹಾಯವಾಣಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಸಮೀಕ್ಷೆಯಿಂದ ಬಿಟ್ಟಿದ್ದರೆ, ಸಮೀಕ್ಷೆ ಕುರಿತು ಸಲಹೆ, ಸೂಚನೆ ಮತ್ತು ದೂರುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್‌ ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.

ಸಹಾಯವಾಣಿ ವಿವರ: ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ 08375-249102 (ಬೆಳಗ್ಗೆ 8ರಿಂದ ರಾತ್ರಿ 8 ಗಂಟೆ), ಹಾವೇರಿ ತಹಸೀಲ್ದಾರ್‌ ಕಚೇರಿ ಸಹಾಯವಾಣಿ ಸಂಖ್ಯೆ 9480370772 (ಬೆಳಗ್ಗೆ 8ರಿಂದ ಮ.1ರ ವರೆಗೆ) ಹಾಗೂ 96636 35166 (ಮ. 1ರಿಂದ ರಾ. 8ರ ವರೆಗೆ), ಬ್ಯಾಡಗಿ-08375-228428, ಹಾನಗಲ್ಲ-08379-262241, ಹಿರೇಕೆರೂರು-08376-282231, ರಾಣಿಬೆನ್ನೂರು-8618357292, ರಟ್ಟಿಹಳ್ಳಿ-08376-200147, ಶಿಗ್ಗಾಂವಿ 08378-255402 ಹಾಗೂ ಸವಣೂರು ತಹಸೀಲ್ದಾರ್‌ ಕಚೇರಿ ಸಹಾಯವಾಣಿ 08378-241427 ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸಲಿವೆ.