ಮೆಡಿಕಲ್ ಕಾಲೇಜನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಜೋಡಿಸಿದ್ದೇವೆ. ಅದರ ವ್ಯವಸ್ಥೆ ಸರಿ ಇಲ್ಲ. ಒಂದು ಸೂಪರ್ ಸ್ಪೆಷಾಲಿಟಿ ಆಸತ್ರೆ ಘೋಷಣೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಹಾವೇರಿ: ಸುದೀರ್ಘ ಅವಧಿಯ ಅಧಿಕಾರದ ದಾಖಲೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ದಾಖಲೆಯ ನೆನಪಿಗಾಗಿ ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಸ್ಥಳೀಯ ದೇವಗಿರಿ-ಯಲ್ಲಾಪುರ ಬಳಿ ನೂತನವಾಗಿ ನಿರ್ಮಿಸಲಾದ ಹಾವೇರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಮ್ಮೆಲ್ಲ ಬಹುದಿನಗಳ ಕನಸಿನ ವೈದ್ಯಕೀಯ ಕಾಲೇಜು ಉದ್ಘಾಟನೆ ಆಗಿದೆ. ವೈದ್ಯಕೀಯ ಶಿಕ್ಷಣದ ಜತೆಗೆ ಹಾವೇರಿಯ ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡಲು ಮೆಡಿಕಲ್ ಕಾಲೇಜು ವತಿಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲೆಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲವೋ ಅಲ್ಲೆಲ್ಲ ಮೆಡಿಕಲ್ ಕಾಲೇಜು ಮಾಡಬೇಕೆಂದು ನಿರ್ಧರಿಸಿತು. 11 ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಕರ್ನಾಟಕದಲ್ಲಿ ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ ಸೇರಿ ನಾಲ್ಕು ಮೆಡಿಕಲ್ ಕಾಲೇಜು ಕೊಟ್ಟಿದೆ. ಹಾವೇರಿ ಮೆಡಿಕಲ್ ಕಾಲೇಜಿಗೆ ಕೇಂದ್ರ ಸರ್ಕಾರ ₹194 ಕೋಟಿ ಕೊಟ್ಟಿದೆ. ಅಲ್ಲದೇ ಕ್ರಿಟಿಕಲ್ ಕೇರ್ ಸೆಂಟರ್‌ಗೆ ₹50 ಕೋಟಿ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಟ್ಟಡ ಉದ್ಘಾಟನೆ ಆಗಿದೆ. 2023ರಲ್ಲಿಯೇ ಕಾಲೇಜು ಆರಂಭವಾಗಿದೆ. ಈಗಾಗಲೇ ಮೂರು ವರ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಈ ಕೆಲಸ ಆಗಬೇಕಾದರೆ ನಾವೆಲ್ಲರೂ ಜನರ ಕೇಂದ್ರಬಿಂದುವಾಗಿ ಕೆಲಸ ಮಾಡಿದಾಗ ಸಾಧ್ಯ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.ಮೆಡಿಕಲ್ ಕಾಲೇಜನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಜೋಡಿಸಿದ್ದೇವೆ. ಅದರ ವ್ಯವಸ್ಥೆ ಸರಿ ಇಲ್ಲ. ಒಂದು ಸೂಪರ್ ಸ್ಪೆಷಾಲಿಟಿ ಆಸತ್ರೆ ಘೋಷಣೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ನಮಗೆ ಏನಾದರೂ ತೊಂದರೆ ಆದರೆ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕಿದೆ. ಮುಖ್ಯಮಂತ್ರಿ ಅತಿ ಹೆಚ್ಚು ದಿನ ಅಧಿಕಾರ ಮಾಡಿದ್ದಕ್ಕಾಗಿ ನಮಗೆಲ್ಲ ಬಹಳಷ್ಟು ಸಂತೋಷ ಆಗಿದೆ. ಇವತ್ತು ಅವರ ದಾಖಲೆಯ ದಿನ, ಇದು ಚಿರಸ್ಮರಣೀಯ ಆಗಬೇಕು. ಸಿದ್ದರಾಮಯ್ಯ ದಾಖಲೆ ಮಾಡಿದ ದಿನ ನಮ್ಮ ಹಾವೇರಿಗೆ ಕೊಡುಗೆ ಕೊಟ್ಟಿದ್ದಾರೆ ಎಂಬ ನೆನಪು ಉಳಿಯಲು ಸೂಪರ್ ಸ್ಪೆಷಾಲಿಟಿ ಆಸತ್ರೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಬೇಡ್ತಿ-ವರದಾ ಜೋಡಣೆ ಸಾಕಾರಗೊಳ್ಳಲಿ: ಬೇಡ್ತಿ-ವರದಾ ಯೋಜನೆಗೆ ಉಪಮುಖ್ಯಮಂತ್ರಿ ಚಾಲನೆ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಬರಗಾಲದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ವರದಾ ನದಿ ಮಳೆಗಾಲದಲ್ಲಿ ಮಾತ್ರ ಹರಿಯುತ್ತದೆ. ಬೇಡ್ತಿಯಿಂದ ಸಮುದ್ರಕ್ಕೆ ಹರಿದು ಹೋಗುವ ನೀರಿನಲ್ಲಿ ಕೇವಲ ಶೇ. 8ರಿಂದ 10ರಷ್ಟು ನೀರನ್ನು ತುಂಗಭದ್ರಾ ನದಿಗೆ ಜೋಡಿಸಿದರೆ ಗದಗ, ಹಾವೇರಿ ಜಿಲ್ಲೆಗೆ ಅನುಕೂಲವಾಗುತ್ತದೆ. ಇದು 1994ರಿಂದ ಇರುವ ಯೋಜನೆ. ಕೇಂದ್ರದ ನದಿ ಜೋಡಣೆ ಯೋಜನೆಗಳಲ್ಲಿ ಇದು ಒಂದಾಗಿದ್ದು, ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಕೊಂಡಿದೆ. ಪರಿಸರಕ್ಕೂ ತೊಂದರೆಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ಸಾಕಾರಗೊಂಡರೆ ಈ ಭಾಗದಲ್ಲಿ ಹಸಿರು ಕ್ರಾಂತಿಯಾಗುತ್ತದೆ ಎಂದರು.