ಸಾರಾಂಶ
ಹಾವೇರಿ: ರಾಜ್ಯ ಸರ್ಕಾರ ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದನ್ನು ಖಂಡಿಸಿ ಹಾವೇರಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಹಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ವಿಶ್ವವಿದ್ಯಾಲಯ ಎಂದರೆ ಭವಿಷ್ಯತ್ತಿನ ನಾಯಕರನ್ನು ರೂಪಿಸುವ ಜ್ಞಾನ ಕೇಂದ್ರಗಳು. ವಿದ್ಯಾರ್ಜನೆಯ ಕೇಂದ್ರಗಳಾದ ವಿವಿಯಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ. ಅಂತಹ ವಿವಿಗಳಿಗೆ ಮೂಲ ಸೌಲಭ್ಯಗಳನ್ನು ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ ಮತ್ತು ಹೊಣೆಗಾರಿಕೆ. ಆದರೆ ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಹೊಸ ವಿವಿಗಳನ್ನು ಇಂದಿನ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ಖಂಡನೀಯ. ತನ್ನ ಪ್ರಚಾರದ ಗ್ಯಾರಂಟಿಗಳಿಗಾಗಿ ಹೊಸ ವಿವಿಗಳನ್ನು ಬಲಿ ಕೊಡಲು ಮುಂದಾಗಿರುವುದು ಅಕ್ಷಮ್ಯ ಎಂದರು.
ಉಪನ್ಯಾಸಕ ಡಾ. ಸಂತೋಷ್ ಅಲಕಟ್ಟಿ ಮಾತನಾಡಿ, ಹಾವೇರಿ ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ವಿಶ್ವವಿದ್ಯಾಲಯವಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಹಾವೇರಿ ವಿಶ್ವವಿದ್ಯಾಲಯದ ಅಧೀನದಲ್ಲಿ 42 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 18,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಹೊಸದಾಗಿ ಪ್ರಾರಂಭವಾದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿದೆ. ವಿಶ್ವವಿದ್ಯಾಲಯಗಳಿಗೆ ಆರ್ಥಿಕ ವ್ಯವಸ್ಥೆ ಮಾಡಲು ಕಠಿಣವಾಗುತ್ತದೆ ಎಂದು ರಾಜ್ಯ ಸರ್ಕಾರ ಸಭೆ ನಡೆಸಿದೆ. ಅತ್ಯಂತ ಖೇದಕರ ಸಂಗತಿ ಏನೆಂದರೆ ಸ್ಥಳೀಯ ಜನಪ್ರತಿನಿಧಿಗಳಿಗೆ ವಿಶ್ವವಿದ್ಯಾಲಯ ಮುಚ್ಚುವ ಬಗ್ಗೆ ಚರ್ಚೆ ನಡೆಯುತ್ತಿರುವ ಮಾಹಿತಿಯೇ ಗೊತ್ತಿಲ್ಲ. ಜಿಲ್ಲೆಯ ಆರು ಜನ ಶಾಸಕರು ಹಾವೇರಿ ವಿವಿ ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. ಹಾವೇರಿ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್, ಬಸವೇಶ್ವರ ಬಿ.ಎಡ್ ಕಾಲೇಜು, ಟಿಎಂಇ ಬಿಎಡ್ ಕಾಲೇಜು, ಟಿಎಂಇ ದೈಹಿಕ ಶಿಕ್ಷಣ ಕಾಲೇಜು, ಬಳ್ಳಾರಿ ರುದ್ರಪ್ಪ ಶಿಕ್ಷಣ ಮಹಾವಿದ್ಯಾಲಯ, ಭಗತ್ ಪಿಯು ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಎಬಿವಿಪಿ ನಗರ ಕಾರ್ಯದರ್ಶಿ ನಾಗರಾಜ್ ಪುರವಂತಿಗೌಡರ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಸಾಹಿತಿ ಸತೀಶ ಕುಲಕರ್ಣಿ, ಭಗತ್‌ಸಿಂಗ್ ಕಾಲೇಜಿನ ಸತೀಶ ಎಂ.ಬಿ., ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ದುರಗಪ್ಪ ಎಮ್ಮಿಯವರ, ಕಿರಣ್ ಕೋಣನವರ, ಪರಿಮಳ ಜೈನ್, ರೇಣುಕಾ ಗುಡಿಮನಿ, ಅನಿತಾ ಮಂಜುನಾಥ, ರಾಜೇಂದ್ರ ಹೆಗ್ಡೆ ಮೊದಲಾದವರು ಇದ್ದರು.