ಹಾವೇರಿ ಗ್ರಾಮದೇವತೆ ಅದ್ದೂರಿ ಮೆರವಣಿಗೆ

| Published : Feb 28 2024, 02:30 AM IST

ಸಾರಾಂಶ

ಜಾತ್ರಾಮಹೋತ್ಸವದ ಹಿನ್ನೆಲೆ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿಯನ್ನು ವಿಶೇಷವಾಗಿ ಅಲಂಕರಿಸಿ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ನಗರದ ಎಲ್ಲ ದೇವಸ್ಥಾನಗಳಿಗೆ ನೈವೇದ್ಯ ಮಾಡಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಐತಿಹಾಸಿಕ ಪ್ರಸಿದ್ಧ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀದೇವಿ ಮೆರವಣಿಗೆ ಮಂಗಳವಾರ ಸಂಜೆ ವಿವಿಧ ಕಲಾತಂಡಗಳು, ಸಾವಿರಾರು ಭಕ್ತರ ಶ್ರದ್ಧಾ ಭಕ್ತಿ, ಜಯಘೋಷದ ನಡುವೆ ಅದ್ದೂರಿಯಿಂದ ನಡೆಯಿತು.

ಜಾತ್ರಾಮಹೋತ್ಸವದ ಹಿನ್ನೆಲೆ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿಯನ್ನು ವಿಶೇಷವಾಗಿ ಅಲಂಕರಿಸಿ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ನಗರದ ಎಲ್ಲ ದೇವಸ್ಥಾನಗಳಿಗೆ ನೈವೇದ್ಯ ಮಾಡಿಸಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಂಜೆ ೪.೩೦ಕ್ಕೆ ಶ್ರೀ ದ್ಯಾಮವ್ವದೇವಿ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಆರಂಭಗೊಂಡಿತು. ದ್ಯಾಮವ್ವ ನಿಲ್ನಾಲ್ಕು ಉಧೋ ಎಂಬ ಘೋಷ ಮೆರವಣಿಯುದ್ದಕ್ಕೂ ಮಾರ್ದನಿಸಿತು. ಮೆರವಣಿಗೆ ಮಾರ್ಗದುದ್ದಕ್ಕೂ ಭಕ್ತರು ಶ್ರೀದೇವಿಗೆ ಆರತಿ ಮಾಡಿ, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು.

ಶ್ರೀ ದ್ಯಾಮವ್ವ ದೇವಿ ಮೆರವಣಿಗೆಯಲ್ಲಿ ಗೊಂಬೆ ಮೇಳ, ನಾಸಿಖ್ ಡೊಳ್ಳು, ಝಂಜ್‌ಮೇಳ, ಸಮಾಳ, ಚಂಡೇ ವಾದ್ಯ ವೇಳ, ಕೋಳಿ ಕುಣಿತ, ನವದುರ್ಗೆಯರು, ಶ್ರೀ ನಂಜುಂಡೇಶ್ವರ ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಕಲಾ ತಂಡ ಪಾಲ್ಗೊಂಡಿದ್ದವು. ಕತ್ತಲಾಗುತ್ತಿದ್ದಂತೆ ಮೆರವಣಿಗೆಯುದ್ದಕ್ಕೂ ಪಟಾಕಿಯ ಸದ್ದು ಆರ್ಭಟಿಸಿತು. ಕುಶಾಲು ಮದ್ದುಗಳು ಆಗಸದಲ್ಲಿ ಚಿತ್ತಾರ ಮೂಡಿಸಿ ನೋಡುಗರ ಮನಸೆಳೆದವು. ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ಯುವತಿಯರೂ ಸಹ ಹೆಜ್ಜೆ ಹಾಕಿದರು. ಸಿಡಿಮದ್ದುಗಳು ಗಮನ ಸೆಳೆದವು. ಮೆರವಣಿಗೆ ವೀಕ್ಷಿಸಲು ಹಾಗೂ ಶ್ರೀದೇವಿಯ ಆಶೀರ್ವಾದ ಪಡೆದು ಪುನೀತರಾಗಲು ನಗರದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು.

ಮೆರವಣಿಗೆಯು ನಗರದ ದ್ಯಾಮವ್ವನ ಗುಡಿಯಿಂದ ನಾಯ್ಕರಚಾಳ, ಹಳೆಅಂಚೆ ಕಚೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ರಸ್ತೆ, ಹಳೆ ಊರಿನ ಓಣಿ, ಶ್ರೀರಾಮದೇವರ ಗುಡಿ, ಗಾಂಧಿವೃತ್ತ, ಕಲ್ಲುಮಂಟಪ ರಸ್ತೆ, ಬಸ್ತಿಓಣಿ, ತರಕಾರಿ ಮಾರುಕಟ್ಟೆ, ಗೌಳಿಗಲ್ಲಿ, ಯಾಲಕ್ಕಿ ಓಣಿ, ಗುಜ್ಜರ ಗುಡಿ, ಪುರದ ಓಣಿ, ಚೌಡೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಸುಭಾಸ ವೃತ್ತ, ಮೇಲಿನಪೇಟೆ, ಗಾಂಧಿರಸ್ತೆ, ಹಳೆಚಾವಡಿ ಮೂಲಕ ಆಗಮಿಸಿ ಚೌತಮನಿ ಕಟ್ಟೆ ತಲುಪಿತು. ಸಿಂಗಸಿರಿದ ಮಂಟಪದಲ್ಲಿ ಗ್ರಾಮದೇವತೆಯನ್ನು ಪ್ರತಿಷ್ಠಾಪಿಸಲಾಯಿತು.

ಮುಂಜಾಗ್ರತಾ ಹಾಗೂ ಶಾಂತಿ ಸುವ್ಯವಸ್ಥೆಗಾಗಿ ಶ್ರೀ ದ್ಯಾಮವ್ವ ದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ದ್ಯಾಮವ್ವ ದೇವಿ ಮೆರವಣಿಗೆ ಸಂಚರಿಸುವ ಎಲ್ಲಾ ಮಾರ್ಗದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬೆಟ್ಟಪ್ಪ ಕುಳೇನೂರ, ಕಾರ್ಯದರ್ಶಿ ಅಶೋಕ ಮುದಗಲ್, ಎಂ.ಎಸ್. ಕೊರಿಶೆಟ್ಟರ್, ಎಸ್.ಎಫ್.ಎನ್ ಗಾಜಿಗೌಡರ್, ಹನುಮಂತನಾಯ್ಕ ಬದಾಮಿ, ಪೃಥ್ವಿರಾಜ್ ಬೇಟಗೇರಿ, ಪರಮೇಶ ಪಾಟೀಲ, ಕಿರಣ ಕೊಳ್ಳಿ, ಪ್ರಕಾಶ ಉಜನಿಕೊಪ್ಪ, ಭರತ್ ದೈವಜ್ಞ, ಪ್ರದೀಪ್ ದೊಡ್ಡಗೌಡರ, ನಿಖಿಲ್ ಡೊಗ್ಗಳ್ಳಿ, ಸಿದ್ದು ಪಟವೇಗಾರ, ರಮೇಶ ಕ್ಷೌರದ, ಮಲ್ಲಿಕಾರ್ಜುನಯ್ಯ ವಿಭೂತಿಮಠ, ಮುರುಗೇಶ ಬಾಲೇಹೊಸೂರು ಇತರರಿದ್ದರು.

ಜಾತ್ರಾ ಕಾರ್ಯಕ್ರಮದಲ್ಲಿಂದು:

ಫೆ.೨೮ರಂದು ಪ್ರಾಥಃಕಾಲ ೫ ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿ ಸಮರ್ಪಣೆ ನಡೆಯಲಿದೆ. ಮಾ.೨ರವರೆಗೆ ಶ್ರೀದೇವಿಗೆ ಸೇವೆ ಮುಂದುವರಿಯಲಿದ್ದು, ಅಂದು ಸಂಜೆ ೪ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಜಾತ್ರೆ ಆಚರಣೆ ವರ್ಷ ನಗರದಲ್ಲಿ ಹೋಳಿ ಹಬ್ಬ ಆಚರಿಸದಿರಲು ತೀರ್ಮಾನಿಸಲಾಗಿದೆ. ಆದರೆ, ಮಾ.೨ರ ಮಧ್ಯಾಹ್ನ ೨.೩೦ ಗಂಟೆಗೆ ಚೌತಮನಿಕಟ್ಟಿಯಿಂದ ಹುಕ್ಕೇರಿಮಠದವರೆಗೆ ಕುಂಕುಮ, ಬಂಡಾರದಿಂದ ಓಕಳಿ ಆಡುವ ಸಂಭ್ರಮ ನಡೆಯಲಿದೆ. ಮಾ.೫ರಂದು ಬೆಳಗ್ಗೆ ೧೦ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸುವುದು, ಶ್ರೀದೇವಿಗೆ ಕ್ಷೀರಾಭಿಷೇಕ, ಚಂಡಿಪಾರಾಯಣ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿವೆ.

ದರ್ಶನ ಪಡೆಯಲು ಬರುವ ಭಕ್ತರು ಬಸ್ತಿ ಓಣಿಯ ಮುಖಾಂತರ ಮೂಲಕ ಚೌತಮನಿ ಕಟ್ಟೆ ಸ್ಥಳಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿ ಕಾರ್ಯದರ್ಶಿ ಅಶೋಕ ಮುದಗಲ್ ತಿಳಿಸಿದ್ದಾರೆ.