ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥೇಯ ಹಾವೇರಿ ಜಿಲ್ಲಾ ತಂಡ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು.

ಬ್ಯಾಡಗಿ:ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥೇಯ ಹಾವೇರಿ ಜಿಲ್ಲಾ ತಂಡ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು.

ಅಂಕಣ 4ರಲ್ಲಿ ನಡೆದ ಹಾವೇರಿ ತಂಡ ಬೆಂಗಳೂರು ಗ್ರಾಮೀಣ ತಂಡದ ವಿರುದ್ಧ 46 ಅಂಕಗಳಿಂದ (52-06) ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು, ಪಂದ್ಯದ ಆರಂಭದಿಂದಲೇ ಬೆಂಗಳೂರು ಗ್ರಾಮೀಣ ವಿರುದ್ಧ ಹಿಡಿತ ಸಾಧಿಸಿದ ಹಾವೇರಿ ರಾಷ್ಟ್ರೀಯ ಆಟಗಾರ್ತಿ ರುಕ್ಸಾರ್‌ಬಾನು, ಸಾನಿಕಾ ಮತ್ತು ನೀಲಮ್ಮ ಆಲರೌಂಡ ಪ್ರದರ್ಶನದಿಂದ ಪಂದ್ಯದ ಮೊದಲಾರ್ಧದಲ್ಲಿ 19 ಅಂಕಗಳ ಮುನ್ನಡೆ (23-04) ಸಾಧಿಸುವ ಮೂಲಕ ಎದುರಾಳಿ ಪಡೆಗೆ ಕೇವಲ 04 ಅಂಕಗಳನ್ನು ಬಿಟ್ಟುಕೊಟ್ಟಿತು, ಲೆಫ್ಟ್ ಕಾರ್ನರ ಸೌಭಾಗ್ಯ, ಆಲ್‌ರೌಂಡರ್ ಸೃಷ್ಟಿ ಹಾಗೂ ಲೆಫ್ಟ ಥರ್ಡ ಸಂಜನಾ ಕ್ಯಾಚಿಂಗನಲ್ಲಿ ಉತ್ತಮ ಪ್ರದರ್ಶನ ತೋರಿದರು. ದ್ವಿತೀಯಾರ್ಧದಲ್ಲಿ 27 (29-02) ಮುನ್ನಡೆ ಸಾಧಿಸಿತ್ತು.

ಬಾಗಲಕೋಟೆ ವಿರುದ್ದ ಮಂಡಿಯೂರಿದ ಚಿಕ್ಕೋಡಿ: ಕಳೆದ ಬಾರಿಯ ರನ್ನರ-ಅಪ ಆಗಿದ್ದ ಚಿಕ್ಕೋಡಿ ತಂಡ ಬಾಗಲಕೋಟೆ ವಿರುದ್ದ 05 ಅಂಕಗಳಿಂದ (35-40) ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿತು, ಪಂದ್ಯದ ಮೊದಲಾರ್ಧದಲ್ಲಿ 05 (21-16) ಅಂಕಗಳಿಂದ ಮುನ್ನಡೆ ಸಾಧಿಸಿತ್ತು, ಗೆಲ್ಲುವ ಫೆವರೀಟ್ ಎನಿಸಿದ್ದ ಚಿಕ್ಕೋಡಿ ಈ ಬಾರಿ 16 ಘಟ್ಟದಲ್ಲೇ ಸೋತು ನಿರ್ಗಮಿಸಿದ್ದು ಪಂದ್ಯಾವಳಿಯ ಅಚ್ಚರಿ ಫಲಿತಾಂಶವಾಗಿದೆ. ಬಹುತೇಕ ರಾಷ್ಟ್ರೀಯ ಆಟಗಾರ್ತಿಯರನ್ನು ಹೊಂದಿದ್ದ ಚಿಕ್ಕೋಡಿ ಬಾಗಲಕೋಟೆ ತಂಡದ ಸಾಂಘಿಕ ಹೋರಾಟದ ಮುಂದೆ ಮಂಡಿಯೂರಿತು.

ದಕ್ಷಿಣ ಕನ್ನಡ ತಂಡಕ್ಕೆ ಜಯ: ಧಾರವಾಡ ವಿರುದ್ಧ ದಕ್ಷಿಣ ಕನ್ನಡ 42 ಅಂಕಗಳಿಂದ (63-21) ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ಮೊದಲಾರ್ಧದಲ್ಲಿ 28 (40-12) ಅಂಕಗಳ ಮುನ್ನಡೆ ಸಾಧಿಸಿತು. ರಾಯಚೂರು ವಿರುದ್ಧ ಶಿವಮೊಗ್ಗ 38 ಅಂಕಗಳಿಂದ (56-18) ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ಮೊದಲಾರ್ಧದಲ್ಲಿ 27 (33-06) ಅಂಕಗಳ ಮುನ್ನಡೆ ಸಾಧಿಸಿತ್ತು.

ಚಿಕ್ಕಬಳ್ಳಾಪುರ ವಿರುದ್ಧ ಚಿಕ್ಕಮಗಳೂರು 19 ಅಂಕಗಳಿಂದ, ಬೆಂಗಳೂರು ಸೆಂಟ್ರಲ್ ವಿರುದ್ಧ ಕೋಲಾರ 45 ಅಂಕಗಳಿಂದ, ತುಮಕೂರು ವಿರುದ್ಧ ಉಡುಪಿ 35 ಅಂಕಗಳಿಂದ ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ತಲುಪಿದವು.