ಮೂಲಸೌಕರ್ಯಗಳಿಲ್ಲದ ಹಾವುಗೊಲ್ಲರ ಕ್ಯಾಂಪ್

| Published : Aug 04 2025, 12:15 AM IST

ಸಾರಾಂಶ

ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತ ಬಂದರೂ ಕೆಲವು ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೂಗಳತೆ ದೂರದಲ್ಲಿರುವ ಹಾವುಗೊಲ್ಲರ ಕ್ಯಾಂಪ್ ಈ ಅಪವಾದಕ್ಕೆ ಸೂಕ್ತ ಉದಾಹರಣೆಯಾಗಿದೆ.

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತ ಬಂದರೂ ಕೆಲವು ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೂಗಳತೆ ದೂರದಲ್ಲಿರುವ ಹಾವುಗೊಲ್ಲರ ಕ್ಯಾಂಪ್ ಈ ಅಪವಾದಕ್ಕೆ ಸೂಕ್ತ ಉದಾಹರಣೆಯಾಗಿದೆ.

ಹಾವುಗೊಲ್ಲರ ಕ್ಯಾಂಪ್ ಒಂದು ಚಿಕ್ಕ ಹಳ್ಳಿ. ಕೇವಲ 42 ಕುಟುಂಬಗಳು ಸುಮಾರು 50 ವರ್ಗಳಿಂದ ಇಲ್ಲಿ ನೆಲಸಿ ಜೀವನ ಕಟ್ಟಿಕಂಡಿವೆ. ತಮಿಳುನಾಡು, ಆಂಧ್ರಪ್ರದೇಶದಿಂದ ಕೂಲಿ ಅರಸಿಕೊಂಡು ಕರ್ನಾಟಕಕ್ಕೆ ಬಂದು ಹೊಳೆಹೊನ್ನೂರಿನ ಪಕ್ಕದ ಗುಡ್ಡಗಾಡು ಭಾಗದಲ್ಲಿ ನೆಲೆನಿಂತಿವೆ. ಆದರೆ ಇವರು ಅಲೆಮಾರಿಗಳಾದ ಕಾರಣ ಇವರಿಗೆ ಎಲ್ಲಾ ನಾಗರಿಕರಂತೆ ಸಿಗಬೇಕಾದ ಯಾವುದೇ ಮೂಲಭೂತ ಸೌಲಭ್ಯಗಳು ದೊರಕಿಲ್ಲ.ವೈಯಕ್ತಿಕ ದಾಖಲೆಗಳು ಒಬ್ಬರಿಗೂ ಇಲ್ಲ:ಹಾವುಗೊಲ್ಲರ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ 42 ಕುಟುಂಬಗಳ ಪೈಕಿ ಯಾರೊಬ್ಬರಿಗೂ ಆಧಾರ್ ಕಾರ್ಡ್, ರೇಷನ್‌ಕಾರ್ಡ್, ಚುನಾವಣಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಇಲ್ಲ. ಇವರೆಲ್ಲರೂ ಪರಿಶಿಷ್ಟ ಜನಾಂಗದ “ಇರುಳರು” ಜಾತಿಗೆ ಸೇರಿದ್ದು, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಯಾವುದೇ ವೈಯಕ್ತಿಕ ದಾಖಲೆಗಳಿಲ್ಲ.50 ವರ್ಷಗಳಿಂದ ವಾಸ ಮಾಡಿತ್ತಿದ್ದರೂ ತಾವು ವಾಸ ಮಾಡುತ್ತಿರುವ ಜಾಗ, ಮನೆ ಕೂಡ ಇವರ ಹೆಸರಿಗೆ ಹಕ್ಕುಪತ್ರವಾಗಲೀ, ಇ-ಸ್ವತ್ತು ದಾಖಲೆ ಆಗಲಿ ಇಲ್ಲ. ಈ ಗ್ರಾಮಕ್ಕೆ ಬಸ್ ಸಂಚಾರ ಇಲ್ಲ. ಹೊಳೆಹೊನ್ನೂರಿನಿಂದ ಕನಸಿನಕಟ್ಟೆ ಗ್ರಾಮಕ್ಕೆ ಹೋಗುವ ಮಾರ್ಗದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಈ ಹಾವುಗೊಲ್ಲರ ಕ್ಯಾಪ್ ಇದೆ. ಆದರೆ ಈ ಕ್ಯಾಂಪ್‌ಗೆ ಬಸ್ ಬರಲ್ಲ. ಜೊತೆಗೆ ಆ ಒಂದು ಕಿಲೋ ಮೀಟರ್ ರಸ್ತೆ ಕೂಡ ರಾಡಿಯಾಗಿದ್ದು ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಬಿದ್ದಿರುವ ಉದಾಹರಣೆಗಳಿವೆ.ಈ ಗ್ರಾಮದಲ್ಲಿ ಇರುವ ಶಾಲೆಗೆ ಒಂದೇ ಕೊಠಡಿ, ಅಂಗನವಾಡಿಗೆ ಒಂದು ಕೊಠಡಿ ಇದೆ. ಇವರ ಮೂಲ ಭಾಷೆ ತಮಿಳು, 1 ರಿಂದ 5ನೇ ತರಗತಿವರೆಗೆ 19 ಮಕ್ಕಳು ಕಲಿಯುತ್ತಿದ್ದಾರೆ. ಈ 19 ಮಕ್ಕಳಿಗೂ ಜನನ ಪ್ರಮಾಣ ಪತ್ರ, ಆಧಾರ್‌ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣಪತ್ರ ಇಲ್ಲ.

ಶಾಲೆಗೆ ಪಡಿತರ ಪೂರೈಕೆ ಮಾಡುವ ಲಾರಿ ಮತ್ತು ಗ್ಯಾಸ್ಸ್ ಆಟೋ ಶಾಲೆಯ ಹತ್ತಿರ ಬರಲ್ಲ. ಕಾರಣ ಚಿಕ್ಕ ರಸ್ತೆ, ಅದರಲ್ಲೂ ಕೆಸರುಮಯ. ಲಾರಿ ಮತ್ತು ಆಟೋ ಹೋಗಲ್ಲ ಅನ್ನುವ ನೆಪವೊಡ್ಡಿ ಒಂದು ಕಿಲೋ ಮೀಟರ್ ದೂರದಲ್ಲಿಯೇ ಪಡಿತರ ಮತ್ತು ಗ್ಯಾಸ್‌ಅನ್ನು ಇಳಿಸಿಬಿಡುತ್ತಾರೆ. ಶಾಲೆಯ ಇಬ್ಬರು ಮಹಿಳಾ ಶಿಕ್ಷಕಿಯರು ಯಾವುದಾದರೂ ಆಟೋವನ್ನು ತಂದು ಪಟಿತರವನ್ನು ಶಾಲೆಗೆ ತರಬೇಕು. ಇದೇ ಶಿಕ್ಷಕಿಯರು ಶಾಲೆಗೆ ಬೈಕ್‌ನಲ್ಲಿ ಬರುವಾಗ ಕೆಸರಿನಲ್ಲಿ ಬಿದ್ದಿರುವುದೂ ಉಂಟು.

ಕಳೆದ ಬಾರಿ ಶಾರದಾ ಪೂರ್ಯಾ ನಾಯ್ಕ್ ಶಾಸಕರಾಗಿದ್ದ ಸಮಯದಲ್ಲಿ ಈ ಗ್ರಾಮದ ಇರುವ ಒಂದು ಬೀದಿಗೆ ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ. ಅದೇ ಕೊನೆ. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಾಕತಾಳಿಯವೆಂಬಂತೆ ಅದೇ ಶಾರದಾಪೂರ್ಯಾ ನಾಯ್ಕ್ ಮತ್ತೆ ಶಾಸಕರಾದ ನಂತರ ಕಳೆದ ಜೂನ್ ತಿಂಗಳಲ್ಲಿ ಹಾವುಗೊಲ್ಲರ ಕ್ಯಾಂಪ್‌ಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ.ಈ ಗ್ರಾಮದಲ್ಲಿ ಇದುವರೆಗೂ ಎಸ್ಸೆಸ್ಸೆಲ್ಸಿವರೆಗೂ ಓದಿರುವುದು ಒಬ್ಬಳೇ ಒಬ್ಬಳು ಹುಡುಗಿ ಮಾತ್ರ. ಇನ್ನುಳಿದಂತೆ ಯಾವೊಬ್ಬರೂ ಸರಿಯಾಗಿ ಪ್ರೌಢ ಶಿಕ್ಷಣ ಮುಗಿಸಿಲ್ಲ. ಈ ಕ್ಯಾಂಪ್‌ನಲ್ಲಿ ಶಾಲೆ ಇರುವುದು 1 ರಿಂದ 5ನೇ ತರಗತಿವರೆಗೆ ಮಾತ್ರ. 6ನೇ ತರಗತಿಗೆ ದೂರದ ಕನಸಿನಕಟ್ಟೆ ಗ್ರಾಮಕ್ಕೆ ಹೋಗಬೇಕು. ಅಲ್ಲಿಗೆ ಹೋಗುವುದು ಒಂದೇ ಬಸ್. ಸ್ವಲ್ಪ ತಡವಾದರೆ ಮಕ್ಕಳು ನಡೆದುಕೊಂಡು ಹೋಗಬೇಕು. ಈ ಕಾರಣದಿಂದ ಬಹಳಷ್ಟು ಮಕ್ಕಳು ಅರ್ಧದಲ್ಲೇ ಶಾಲೆಬಿಟ್ಟು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.42 ಕುಟುಂಬಗಳ ಪೈಕಿ 25ಕ್ಕೂ ಹೆಚ್ಚು ಗುಡಿಸಲು ಮನೆಗಳಿವೆ. ಮಳೆಗಾಲ ಆರಂಭವಾದರೆ ಆ ಗುಡಿಸಲುಗಳಲ್ಲಿ ನೀರು ಸೋರಿ ನೆಲವೆಲ್ಲಾ ಜೌಗು ಹಿಡಿದುಬಿಡುತ್ತದೆ. ಅದೆಷ್ಟೋ ಗುಡಿಸಲುಗಳು ಮಳೆಗೆ ಬಿದ್ದು ಹೋಗಿವೆ. ಇನ್ನು ಮುಂದಾದರೂ ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತಾಗಲಿ.

ಸದ್ಯದಲ್ಲಿ ಅಲ್ಲಿನ ನಿವಾಸಿಗಳಿಗೆ ಆಧಾರ್‌ಕಾರ್ಡ್, ರೇಷನ್‌ಕಾರ್ಡ್ ಮಾಡಿಕೊಡುವ ವ್ಯವಸ್ಥೆ ನಡೆಯುತ್ತಿದೆ. ನಂತರ ಅವರ ಮನೆಗಳಿಗೆ ಹಕ್ಕುಪತ್ರ ನೀಡುಲು ಕ್ರಮ ಕೈಗೊಳ್ಳಲಾಗುವುದು. ಮುಂದುವರೆದು ಅವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಕೆಲವು ತಾಂತ್ರಿಕ ತೊಂದರೆಗಳಿವೆ. ಇದನ್ನು ಒಂದು ಸಮಿತಿಯ ಮುಂದೆ ಇರಿಸಿ ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಜಾತಿ ಪ್ರಮಾಣ ಪತ್ರ ನೀಡಲು ಅವಕಾಶವಿದೆ.

- ಶಾರದಾ ಪೂರ್ಯಾ ನಾಯ್ಕ್, ಶಾಸಕಿ.

50 ವರ್ಷಕ್ಕಿಂತ ಮೊದಲಿಂದಲೇ ಇಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿರುವ ಯಾವ ಮನೆಗೂ ಹಕ್ಕುಪತ್ರ ಇಲ್ಲ. ನಮ್ಮ ಹಿರಿಯರು ಮಾಡಿದ್ದ ಮುಕ್ಕಾಲು ಎಕರೆ ಭೂಮಿಯಲ್ಲಿ ಎಲ್ಲರೂ ಮನೆ ಮಾಡಿಕೊಂಡಿದ್ದೇವೆ. ಯಾರಿಗೂ ಜಮೀನಿಲ್ಲ. ಕೂಲಿ ಮಾಡಿಯೇ ಜೀವನ ನಡೆಸಬೇಕು. ಎಲ್ಲರಂತೆ ನಮಗೂ ಸಿಗಬೇಕಾದ ದಾಖಲೆಗಳು ಮತ್ತು ಸೌಲಭ್ಯಗಳು ಸಿಗಲೇಬೇಕು.

- ಕಮಲಮ್ಮ. ಹಾವುಗೊಲ್ಲರ ಕ್ಯಾಂಪ್‌ನ ನಿವಾಸಿ.