ಹವ್ಯಕ ಭಾಷೆ, ಸಂಪ್ರದಾಯ ಜೋಪಾನ ಮಾಡಬೇಕಿದೆ: ಡಿ.ಪಿ. ಹೆಗಡೆ

| Published : Jun 03 2024, 12:32 AM IST

ಹವ್ಯಕ ಭಾಷೆ, ಸಂಪ್ರದಾಯ ಜೋಪಾನ ಮಾಡಬೇಕಿದೆ: ಡಿ.ಪಿ. ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹವಿಗನ್ನಡ ಮತ್ತು ಹವ್ಯಕ ಸಂಪ್ರದಾಯ ನಮ್ಮ ಜೀವವಾಗಿದ್ದು, ಜೋಪಾನ ಮಾಡುವ ಕೆಲಸ ನಮ್ಮೆಲ್ಲರದ್ದು. ಹವ್ಯಕ ಸಂಪ್ರದಾಯವನ್ನು ಬೆಳೆಸಬೇಕಾದವರು ನಮ್ಮ ಯುವ ಜನಾಂಗ.

ಕುಮಟಾ: ತಾಲೂಕಿನ ಹೊಲನಗದ್ದೆಯ ಹವ್ಯಕ ಸಭಾಭವನದಲ್ಲಿ ಭಾನುವಾರ ಗುಡೇಅಂಗಡಿ ಕಾಂಚಿಕಾಂಬ ವಲಯದ ಹವ್ಯಕ ಸಮಾಜ ಸೇವಾ ಸಂಘದ ೩೨ನೇ ವಾರ್ಷಿಕ ಸ್ನೇಹಕೂಟ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಬಾಡ ಜೂನಿಯರ್‌ ಕಾಲೇಜು ಉಪನ್ಯಾಸಕ ಡಿ.ಪಿ. ಹೆಗಡೆ ಮಾತನಾಡಿ, ಹವ್ಯಕ ಭಾಷೆಯ ಸೊಗಡು ಕಣ್ಮರೆಯಾಗಿ ಹಳ್ಳಿಗಳಲ್ಲಿ ಮಾತ್ರ ಉಳಿದಿರುವ ಹಂತ ತಲುಪಿದೆಯೇನೋ ಅನಿಸುತ್ತಿದೆ. ನಮ್ಮ ಹವಿಗನ್ನಡ ಮತ್ತು ಹವ್ಯಕ ಸಂಪ್ರದಾಯ ನಮ್ಮ ಜೀವವಾಗಿದ್ದು, ಜೋಪಾನ ಮಾಡುವ ಕೆಲಸ ನಮ್ಮೆಲ್ಲರದ್ದು. ಹವ್ಯಕ ಸಂಪ್ರದಾಯವನ್ನು ಬೆಳೆಸಬೇಕಾದವರು ನಮ್ಮ ಯುವ ಜನಾಂಗ. ಅವರಿಗೆ ವರ್ಗಾಯಿಸಬೇಕಾದ ಜವಾಬ್ದಾರಿ ಸಮಾಜದ ಹಿರಿಯರ ಮೇಲಿದೆ. ಹವ್ಯಕರ ಸಾಂಪ್ರದಾಯಿಕ ತಿಂಡಿತಿನಿಸು, ಹಬ್ಬಗಳು, ಆಟೋಟಗಳು, ಧಾರ್ಮಿಕ ಮತ್ತು ಪಾರಂಪರಿಕ ಕೈಂಕರ್ಯಗಳನ್ನು ಮುಂದಿನ ಪೀಳಿಗೆಯೂ ಅನೂಚಾನವಾಗಿ ಮುಂದುವರಿಸಿಕೊಂಡು ಹೋಗುವಂತೆ ಆಗಬೇಕಿದೆ. ಸಂಘಟಿತ ಪ್ರಯತ್ನದಿಂದ ಸಮಾಜದ ಗೌರವ ಹಾಗೂ ಸ್ಥಾನಮಾನ ಬೆಳೆಸಬೇಕಿದೆ ಎಂದರು.

ಸಂಘದ ಅಧ್ಯಕ್ಷ ಕೆ.ಆರ್. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುಡೇಅಂಗಡಿ ಹವ್ಯಕ ವಲಯದ ವ್ಯಾಪ್ತಿಯಲ್ಲಿರುವ ೯೦ ವರ್ಷ ಮೇಲ್ಪಟ್ಟ ವಯೋವೃದ್ಧರಾದ ಹೊಲನಗದ್ದೆಯ ಕೋಟೇಶ್ವರ ಶಂಭು ಹೆಗಡೆ ಮಾಸ್ತಿಕಟ್ಟೆ, ಲಕ್ಷ್ಮೀ ಸತ್ಯನಾರಾಯಣ ಹೆಗಡೆ ಶಂಕರನಾರಾಯಣಮನೆ, ನರಸಿಂಹ ಪರಮೇಶ್ವರ ಭಟ್ ಕಾರಹಿತ್ತಲ ಅವರನ್ನು ಸನ್ಮಾನಿಸಲಾಯಿತು. ನಿವೃತ್ತರಿಗೆ ಸನ್ಮಾನದಲ್ಲಿ ಹೊಲನಗದ್ದೆಯ ಕೃಷ್ಣ ಶಿವರಾಮ ಭಟ್ಟ ಶಂಕರಬಡ್ತಿಮನೆ, ಸುಧಾಬಾಯಿ ಕೃಷ್ಣ ಭಟ್ ಶಂಕರಬಡ್ತಿಮನೆ, ಸವಿತಾ ರಾಮಚಂದ್ರ ಶಾಸ್ತ್ರಿ ಕೊಂತ್ಲಮನೆ, ಶ್ರೀಧರ ಗಣಪತಿ ಹೆಗಡೆ, ಕಾಗಾಲದ ಶ್ರೀದೇವಿ ಕೆ. ಭಟ್ ಅವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಎನ್.ವಿ. ಹೆಗಡೆ ಸನ್ಮಾನ ಪತ್ರ ವಾಚಿಸಿದರು.

ಎಸ್ಎಸ್ಎಲ್‌ಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದಿದ್ದ ಶ್ರೀರಾಮ ನರಸಿಂಹ ಹೆಗಡೆ, ರಶ್ನಿ ವಿನಾಯಕ ಹೆಗಡೆ, ಪಿಯುಸಿಯಲ್ಲಿ ಶೇ. ೯೮ ಅಂಕ ಪಡೆದ ಸಂಜಯ ಕೃಷ್ಣ ಭಟ್ ಅವರನ್ನು ಪುರಸ್ಕರಿಸಲಾಯಿತು. ಸಮ್ಮೇಳನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾಕೂಟದ ವಿಜೇತರ ಯಾದಿಯನ್ನು ಆರ್.ಎಸ್. ಭಟ್ ಕೋಟಿ ಪ್ರಕಟಿಸಿದರೆ, ಗಣ್ಯರು ಬಹುಮಾನ ವಿತರಿಸಿದರು.

ಮಹಿಳೆಯರು ಮತ್ತು ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಜಾನನ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ವಿವೇಕ ಭಟ್ ವರದಿ ವಾಚಿಸಿದರು. ಎಸ್.ಎಂ. ಭಟ್ ಮದ್ಗುಣಿ ಹಾಗೂ ಎಂ.ಎನ್. ಹೆಗಡೆ ನಿರೂಪಿಸಿದರು. ಸಂಘದ ವ್ಯವಸ್ಥಾಪಕ ಎಂ.ಜಿ. ಭಟ್ ಧನ್ಯವಾದ ಸಮರ್ಪಿಸಿದರು.