ಕನ್ನಡ ಬೆಳವಣಿಗೆಗೆ ಹವ್ಯಕ ಸಮಾಜದ ಕೊಡುಗೆ ಅಪಾರ

| Published : Dec 18 2024, 12:47 AM IST

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಸೃಜನಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೊದಲಿನಿಂದಲೂ ಪುರಸ್ಕಾರ, ಪ್ರೋತ್ಸಾಹವಿದೆ. ಇಂತಹ ಚಟುವಟಿಕೆಗಳ ಮೂಲಕ ಅತಿ ಪ್ರಾಚೀನ ಭಾಷೆಯಾದ ಕನ್ನಡದ ಬೆಳವಣಿಗೆಗೆ ಹವ್ಯಕ ಸಮಾಜದ ಕೊಡುಗೆ ಅಪಾರ ಎಂದು ಖ್ಯಾತ ವೈದ್ಯ ಡಾ. ಎಂ.ಕೆ. ಭಟ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಭಾರತೀಯ ಸಂಸ್ಕೃತಿಯಲ್ಲಿ ಸೃಜನಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೊದಲಿನಿಂದಲೂ ಪುರಸ್ಕಾರ, ಪ್ರೋತ್ಸಾಹವಿದೆ. ಇಂತಹ ಚಟುವಟಿಕೆಗಳ ಮೂಲಕ ಅತಿ ಪ್ರಾಚೀನ ಭಾಷೆಯಾದ ಕನ್ನಡದ ಬೆಳವಣಿಗೆಗೆ ಹವ್ಯಕ ಸಮಾಜದ ಕೊಡುಗೆ ಅಪಾರ ಎಂದು ಖ್ಯಾತ ವೈದ್ಯ ಡಾ. ಎಂ.ಕೆ. ಭಟ್ ಹೇಳಿದರು.ಭಾನುವಾರ ಸೊರಬ ಮತ್ತು ಸಾಗರ ತಾಲೂಕು ಮಟ್ಟದ ಹವ್ಯಕ ಸಮುದಾಯದವರಿಗಾಗಿ ತಾಲೂಕಿನ ನಿಸರಾಣಿ ಗ್ರಾಮದ ವಿ.ಸಂ, ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರತಿಬಿಂಬ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸಂಸ್ಕೃತಿ, ಪ್ರತಿಭೆ, ಬೌದ್ಧಿಕ ಸಾಮರ್ಥ್ಯದ ಪ್ರಸರಣೆಗೆ ಮಹಿಳೆಯರ ಪಾತ್ರ ಹಿರಿದು. ಪ್ರಸ್ತುತ ಬೇರೆಬೇರೆ ಕಾರಣಗಳಿಂದ ಸಮಾಜದ ಸಂಘಟನೆ ಕ್ಷೀಣಿಸಿದ್ದು, ಮಹಿಳೆಯರನ್ನು ತೊಡಗಿಸಿಕೊಂಡ ಇಂತಹ ಸೃಜನಶೀಲ ಕಾರ್ಯಕ್ರಮಗಳು ಆಗಾಗ್ಗೆ ಜರುಗುವ ಕಾರ್ಯವಾಗಲಿ ಎಂದರು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಮಹಾಸಭಾ ನಿರ್ದೇಶಕರಾದ ಜಿ.ಜಿ. ಹೆಗಡೆ ಮಾತನಾಡಿ, ನಾಲ್ಕು ಲಕ್ಷ ಜನಸಂಖ್ಯೆ ಇರುವ ಹವ್ಯಕರ ಶ್ರೇಯೋಭಿವೃದ್ಧಿಗಾಗಿ 1942ರಲ್ಲಿ ಎಣಿಕೆಗೆ ಸಿಗುವ ಕೆಲವೇ ಹಿರಿಯ ಜನರಿಂದ ಆರಂಭವಾದ ಬೆಂಗಳೂರಿನ ಹವ್ಯಕ ಮಹಾಸಭಾ, ಇಂದು ಮುವತ್ತು ಸಾವಿರ ಸದಸ್ಯರನ್ನೊಳಗೊಂಡಿದೆ. ಸಮಾಜದ ಒಂದು ಸಂಘಟಿತ ಮಹಾ ಶಕ್ತಿಯಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.

ಹವ್ಯಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ಸಮುದಾಯದವರು ಮುಂದಾಗಬೇಕು. ಹಾಗೂ ಈ ತಿಂಗಳ ಕೊನೆಯ ವಾರದಲ್ಲಿ ನಡೆಯುವ ತೃತೀಯ ಹವ್ಯಕ ಮಹಾ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.ಈ ವೇಳೆ ಸಮಾಜದ ಸಾಧಕರನ್ನು ಗುರುತಿಸಿ ಹವ್ಯಕ ಮಹಾಸಭಾ ಸನ್ಮಾನಿಸಿತು. ಪ್ರತಿಬಿಂಬ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾವ್ಯ ವಾಚನ ಹಾಗೂ ಕು. ಪೃಥ್ವಿ, ಜಾಣ ಇವರಿಂದ ಭರತನಾಟ್ಯ, ವಿನಾಯಕ ಮತ್ತು ಸಂಗಡಿಗರಿಂದ ಹಾಸ್ಯಲಹರಿ, ಹಂಸಗಾರು ಕಲಾ ತಂಡದವರಿಂದ ಕೋಲಾಟ, ಗಮಕ ವಾಚನ ಮೊದಲಾದ ಕಲಾ, ಆಟೋಟ ಚಟುವಟಿಕೆಗಳು ನಡೆದವು.ಹವ್ಯಕ ಸಮಾಜ ಮುಖಂಡರಾದ ಬಿ.ಎಸ್. ಮಹಾಬಲೇಶ್ವರ ಬೇಳೂರು, ಕಟ್ಟಿನಕೆರೆ ಸೀತಾರಾಮಯ್ಯ, ರಾಜಲಕ್ಮೀ ದೇವಪ್ಪ ಬೆಳೆಯೂರು, ರಾಜಾರಾಮ ಹೆಗಡೆ ಹೊಸಬಾಳೆ, ರಘುನಂದನ್, ಹೂಬಾ ಅಶೋಕ್, ಜಿ.ಜಿ. ಹೆಗಡೆ ತಲಕೇರಿ, ಶಿವರಾಂ ಕಂಚಿ, ಬಿ.ಎನ್.ಸಿ ರಾವ್, ಶೇಷಾಚಲ, ಸತ್ಯವತಿ, ಕೆ.ವಿ. ವಿನಾಯಕ್, ಲಕ್ಮೀಶ್, ದೀಪಾ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ಡಾ. ನಿರಂಜನ ಹೊಸಬಾಳೆ, ಶ್ರೀಧರ್ ಕವಲುಮನೆ ಸಾಗರ ಮೊದಲಾದವರು ಹಾಜರಿದ್ದರು.