ಹವ್ಯಕರು ಎಲ್ಲ ಕ್ಷೇತ್ರದಲ್ಲಿ ಅಪೂರ್ವ ಸಾಧನೆ

| Published : Feb 12 2024, 01:30 AM IST

ಸಾರಾಂಶ

ನಮ್ಮ ಹವ್ಯಕ ಸಂಸ್ಕೃತಿ,ಪರಂಪರೆಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ನಿರಂತರ ನಡೆಯಬೇಕು. ಹವ್ಯಕರ ಬುದ್ಧಿ ಶಕ್ತಿ ಎಷ್ಟಿದೆ ಎಂಬುದನ್ನು ನಾವು ಸದಾ ಪ್ರಚುರಪಡಿಸುತ್ತಿದ್ದೇವೆ

ಯಲ್ಲಾಪುರ: ಹವ್ಯಕರು ಎಲ್ಲ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಯ ಜತೆಗೆ ಸ್ಪರ್ಧೆ ನೀಡುತ್ತಿದ್ದಾರೆ. ಸಮಾಜದಲ್ಲಿಂದು ಸ್ಪರ್ಧೆ ಇಲ್ಲದೇ ಮುಂಬರುವ ಸನ್ನಿವೇಶದಲ್ಲಿ ನಮ್ಮವರು ಸ್ಪರ್ಧೆ ನೀಡಿಯೇ ಎಲ್ಲ ಕ್ಷೇತ್ರಗಳಲ್ಲಿಯೂ ಮಂಚೂಣಿಯಲ್ಲಿದ್ದಾರೆ ಎಂದು ತಾಳಮದ್ದಲೆ ಅರ್ಥದಾರಿ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.

ಅವರು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಶ್ರೀಅಖಿಲ ಹವ್ಯಕ ಮಹಾಸಭಾ ಹಮ್ಮಿಕೊಂಡ ಸಾಂಸ್ಕೃತಿಕ ಸ್ಪರ್ಧೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾ ಪ್ರೊತ್ಸಾಹಕಧನ ವಿತರಣೆ ಕಾರ್ಯಕ್ರಮ ಪ್ರತಿಬಿಂಬ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಜ್ಞಾನ ಸಂಪಾದಿಸುತ್ತಾರೆ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರತಿಭಾವಂತರು ಶಿಕ್ಷಣದಲ್ಲಿ ತಮ್ಮ ಪ್ರತಿಭೆ ತೋರುತ್ತಿದ್ದಾರೆ.ಇವರಿಗೆ ನೆರವು ನೀಡುವ ದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ನಮ್ಮಲ್ಲಿರುವ ಬಿಂಬ ಪ್ರತಿಬಿಂಬವಾಗಿ ಪ್ರತಿಫಲಿಸಬೇಕು, ನಾವು ನಮ್ಮ ಶಕ್ತಿಯ ಪ್ರದರ್ಶನ ಮಾಡುವಲ್ಲಿ ಹಿಂದಿದ್ದೇವೆ. ಪ್ರಸ್ತುತ ಸನ್ನಿವೇಶದಲ್ಲಿ ಶೇ. ೧೦ ಕ್ಕಿಂತ ಹೆಚ್ಚು ಬ್ರಾಹ್ಮಣರಿದ್ದರೂ ನಮ್ಮಲ್ಲಿರುವ ೫೦ಕ್ಕೂ ಹೆಚ್ಚು ವಿವಿಧ ಪಂಗಡಗಳನ್ನು ಒಡೆದು ಗಣತಿ ಮಾಡಿದ ಪರಿಣಾಮ ಶೇ ೧ಕ್ಕೆ ಇಳಿದಿದ್ದೇವೆ. ಈ ಮೂಲಕ ಬ್ರಾಹ್ಮಣ ಸಂಘಟನೆ ಒಡೆಯಲಾಗಿದೆ.ಇದು ಸಂಘಟನೆಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು.

ಆರಕ್ಷಕ ಉಪನಿರೀಕ್ಷಕ ನಿರಂಜನ ಹೆಗಡೆ ಮಾತನಾಡಿ, ನಮ್ಮ ಹವ್ಯಕ ಸಂಸ್ಕೃತಿ,ಪರಂಪರೆಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ನಿರಂತರ ನಡೆಯಬೇಕು. ಹವ್ಯಕರ ಬುದ್ಧಿ ಶಕ್ತಿ ಎಷ್ಟಿದೆ ಎಂಬುದನ್ನು ನಾವು ಸದಾ ಪ್ರಚುರಪಡಿಸುತ್ತಿದ್ದೇವೆ ಎಂದರು.

ಮಹಾಸಭೆಯ ನಿರ್ದೇಶಕ ಪ್ರಶಾಂತ ಹೆಗಡೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ನಗರ ಭಾಗಿ ಮಾತೃ ಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ ಶುಭಕೋರಿದರು.

ಪ್ರಣತಿ ಮೆಣಸುಮನೆ ಪ್ರಾರ್ಥಿಸಿದರು, ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು, ಶಿಕ್ಷಕ ಸುಬ್ರಾಯ ಭಟ್ಟ ನಿರೂಪಿಸಿ, ವಂದಿಸಿದರು.