ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಎಚ್.ಸಿ.ಶಿವಲಿಂಗೇಗೌಡ ಅವರು ಎರಡನೇ ಬಾರಿ ಅವಿರೋಧ ಆಯ್ಕೆಯಾದರು.ಹಿಂದಿನ ಅಧ್ಯಕ್ಷೆ ಸುನಂದಮ್ಮ ಸಿದ್ದರಾಮು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಎಚ್.ಸಿ.ಶಿವಲಿಂಗೇಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾದ ಸಹಕಾರ ಇಲಾಖೆಯ ಮಾರಾಟ ಅಧಿಕಾರಿ ಸುಧಾಕರ್ ಅವರು ಶಿವಲಿಂಗೇಗೌಡರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು.
ಅಧ್ಯಕ್ಷ ಎಚ್.ಸಿ.ಶಿವಲಿಂಗೇಗೌಡ ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಜೊತೆಗೂಡಿ ಹಾಗೂ ಶಾಸಕ ಪಿ.ರವಿಕುಮಾರ್ ಜೊತೆ ಚರ್ಚಿಸಿ ಬ್ಯಾಂಕಿನಲ್ಲಿ ‘ರೈತರ ಭವನ’ ಕಟ್ಟಡ ನಿರ್ಮಾಣ ಮಾಡಲು ಬದ್ಧನಾಗಿದ್ದೇನೆ ಎಂದರು.ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಪಿಎಲ್‌ಡಿ ಬ್ಯಾಂಕ್‌ನ ಉಳಿದ ಅವಧಿಗೆ ನಡೆದ ಚುನಾವಣೆಯಲ್ಲಿ ಎಚ್.ಸಿ.ಶಿವಲಿಂಗೇಗೌಡ ಅವರನ್ನು ಎಲ್ಲಾ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಶಿವಲಿಂಗೇಗೌಡರು ಈಗಾಗಲೇ ಒಂದು ಬಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದು ಮುಂದಿನ ದಿನಗಳಲ್ಲೂ ಅವರಿಂದ ಬ್ಯಾಂಕಿನ ಅಭಿವೃದ್ಧಿಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಎಂ.ಪ್ರಕಾಶ, ನಿರ್ದೇಶಕರಾದ ಸಿ.ಎ.ಅರವಿಂದ್, ಟಿ.ಬಿ.ಶಿವಲಿಂಗೇಗೌಡ, ಬಿ.ಎಲ್.ಬೋರೇಗೌಡ, ಸುನಂದಮ್ಮ ಸಿದ್ದರಾಮು, ಮರೀಗೌಡ, ಎಂ.ಯೋಗೇಶ್, ಬಿ.ಕೆ.ರಾಮೇಗೌಡ, ಚಿಕ್ಕಬೆಟ್ಟಯ್ಯ, ಸವಿತಾ, ಸರಸ್ವತಿ, ನಂಜುಂಡ, ಎಂ.ಸಿ.ಕೃಷ್ಣೇಗೌಡ, ಎ.ಶೇಖರ್, ಬ್ಯಾಂಕಿನ ವ್ಯವಸ್ಥಾಪಕಿ ಡಿ.ನಾಗವೇಣಿ ಇತರರಿದ್ದರು.ನಾಳೆ ಕೆ.ವಿ.ಶಂಕರಗೌಡ ಪ್ರಶಸ್ತಿ ಪ್ರದಾನ ಸಮಾರಂಭಮಂಡ್ಯ: ಜನತಾ ಶಿಕ್ಷಣ ಟ್ರಸ್ಟ್‌ನಿಂದ 2024ನೇ ಸಾಲಿನ ರಾಜ್ಯ ಮಟ್ಟದ ಕೆ.ವಿ. ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಮತ್ತು ಸಮಾಜಸೇವಾ ಪ್ರಶಸ್ತಿಗಳ ಪ್ರದಾನ ಸಮಾರಂಭ ಜು.15ರಂದು ನಗರದ ಕೆವಿಎಸ್ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಡಾ. ರಾಮಲಿಂಗಯ್ಯ ತಿಳಿಸಿದರು.ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭವನ್ನು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್‍ಯದರ್ಶಿ ಉಮಾಶಂಕರ್ ಎಸ್.ಆರ್.ಅವರು ಉದ್ಘಾಟಿಸುವರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಅವರಿಗೆ ರಾಜ್ಯ ಮಟ್ಟದ ರಂಗಭೂಮಿ ಪ್ರಶಸ್ತಿ ಹಾಗೂ ನಾಗಮಂಗಲ ತಾಲೂಕು ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿಪ್ಪು ಸುಲ್ತಾನ್ ಅವರಿಗೆ ರಾಜ್ಯಮಟ್ಟದ ಸಮಾಜ ಸೇವಾ ಪ್ರಶಸ್ತಿ 25 ಸಾವಿರ ರು. ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಜನತಾ ಶಿಕ್ಷಣ ಸಂಸ್ಥೆ ಕಾರ್‍ಯದರ್ಶಿ ಎಸ್.ಎಲ್.ಶಿವಪ್ರಸಾದ್ ಸಮಾರಂಭದಲ್ಲಿ ಭಾಗವಹಿಸುವರು ಎಂದರು.ಗೋಷ್ಠಿಯಲ್ಲಿ ಎಸ್.ಎಲ್. ಶಿವಪ್ರಸಾದ್ ಇದ್ದರು.