ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಎಚ್ಚೆಸ್ವಿ ಕೊಡುಗೆ ಅಪಾರ

| Published : Jun 02 2025, 12:07 AM IST

ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಎಚ್ಚೆಸ್ವಿ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಎಚ್ಚೆಸ್ವಿ ಕನ್ನಡ ಭಾವಗೀತೆಗಳ ಲಯಬದ್ಧ ಒರತೆಯನ್ನು ಪ್ರವಾಹವಾಗಿಸಿದವರು. ಕನ್ನಡಿಗರ ಜೀವನಪ್ರೀತಿ ಹೆಚ್ಚಿಸಿದ ಅವರ ಅನನ್ಯ ಕವಿತೆಗಳು ಬದುಕಿನ ಅಭಿಜಾತ ಮಾರ್ಗದ ಹುಡುಕಾಟದ ಭಾಗವಾಗಿವೆ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್‌ ಅಭಿಪ್ರಾಯಪಟ್ಟರು.

ದೊಡ್ಡಬಳ್ಳಾಪುರ: ಎಚ್ಚೆಸ್ವಿ ಕನ್ನಡ ಭಾವಗೀತೆಗಳ ಲಯಬದ್ಧ ಒರತೆಯನ್ನು ಪ್ರವಾಹವಾಗಿಸಿದವರು. ಕನ್ನಡಿಗರ ಜೀವನಪ್ರೀತಿ ಹೆಚ್ಚಿಸಿದ ಅವರ ಅನನ್ಯ ಕವಿತೆಗಳು ಬದುಕಿನ ಅಭಿಜಾತ ಮಾರ್ಗದ ಹುಡುಕಾಟದ ಭಾಗವಾಗಿವೆ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್‌ ಅಭಿಪ್ರಾಯಪಟ್ಟರು.

ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಭಾನುವಾರ ಪುರಭವನದಲ್ಲಿ ಆಯೋಜಿಸದ್ದ ಕನ್ನಡದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವಿರು ಭಾವನೆಗಳ ಮೂಲಕವೇ ವಾಸ್ತವದ ನಿಲುವುಗನ್ನಡಿಯನ್ನು ಓದುಗರ ಮುಂದಿಟ್ಟ ಅವರು, ಕೃಷ್ಣನ ತೋರಿದ ರಾಧೆಯ ಬಿಂಬವನ್ನು ಬಿಡಿಸಿದ್ದಾರೆ. ಅಂತರಾಳದ ಭಾವ ಸಂವೇದನೆಯ ಅರಿವು ಕಾಲದ ಚೌಕಟ್ಟನ್ನು ಮೀರಿದ್ದು ಎನ್ನುವ ಮೂಲಕ ಸಮಭಾವ, ಸಮಚಿತ್ತ ಹಾಗೂ ಸಮನ್ವಯದ ದೃಷ್ಟಿಕೋನವನ್ನು ಪ್ರತಿಪಾದಿಸಿದ್ದಾರೆ ಎಂದು ವಿವರಿಸಿದರು.

ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅದೇ ರೀತಿ ಮಕ್ಕಳ ಸಾಹಿತ್ಯದ ಬಗ್ಗೆಯೂ ವಿಶೇಷ ಒಲವು ಬೆಳೆಸಿಕೊಂಡಿದ್ದರು. ಬುದ್ದ ಪ್ರಜ್ಞೆಯನ್ನು ಅಂತಃಸತ್ವವಾಗಿ ಹೊಂದಿದ್ದರೂ, ಪಂಥಗಳ ಜಂಜಾಟಕ್ಕೆ ಒಳಗಾಗದೆ ಧನಾತ್ಮಕ ಚಿಂತನೆಗಳನ್ನಷ್ಟೇ ಉಣಬಡಿಸಿದರು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ನಂ.ಮಹಾದೇವ ಮಾತನಾಡಿ, ವೆಂಕಟೇಶಮೂರ್ತಿಯವರ ಬುದ್ಧಚರಣ ಮಹಾಕಾವ್ಯ ಗಮಕವಾಚನ ಮತ್ತು ಗೀತಗಾಯನದ ಮೂಲಕ‌ ಸಹೃದಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಮಹಾಕಾವ್ಯ ಪರಂಪರೆಯನ್ನು ಮುಂದುವರಿಸಿದ ಅವರು, ಎಲ್ಲಾ ವಯೋಮಾನದ ಓದುಗರಿಗೂ ಪ್ರೀತಿ ಪಾತ್ರರಾಗಿದ್ದರು ಎಂದರು.

ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ವೆಂಕಟೇಶಮೂರ್ತಿ ಅವರು ಸಾಹಿತ್ಯ ಮಾತ್ರವಲ್ಲದೆ ಸುಗಮ ಸಂಗೀತ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಅವರು ಬರೆದ ಐದು ಬೆರಳು ಕೂಡಿ ಒಂದು ಮುಷ್ಟಿಯು, ಹಲವು ಮಂದಿ ಸೇರಿ ಈ ಸಮಷ್ಟಿಯು ಎಂಬ ಪದ್ಯ ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನು ಸರಳ ಹಾಗೂ ಸಮರ್ಥವಾಗಿ ಬಿಂಬಿಸುತ್ತದೆ ಎಂದರು.

ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ ಹೊಂದಿದ್ದ ಅವರು ಚಲನಚಿತ್ರಗಳಿಗೆ ರಚಿಸಿದ ಹಾಡುಗಳು, ಸಂಭಾಷಣೆ,ದೂರದರ್ಶನ ಧಾರಾವಾಹಿಗಳ ಶೀರ್ಷಿಕೆ ಗೀತೆ, ಧ್ವನಿ ಸುರಳಿಗಳಿಗೆ ರಚಿಸಿದ ಹಾಡುಗಳು ಕನ್ನಡಿಗರ ಮನಗೆದ್ದಿವೆ ಎಂದರು.

ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ತಾ.ಕಸಾಪ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಸೂರ್ಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಂ.ಸಿ.ಮಂಜುನಾಥ್, ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ, ಕಸಾಪ ವಿವಿಧ ಘಟಕಗಳ ಪದಾಧಿಕಾರಿಗಳಾದ ಜಿ.ಸುರೇಶ್, ಜಿ.ಎಂ.ನಾಗರಾಜ್, ದಾದಾಫೀರ್, ನಾಗರತ್ನಮ್ಮ, ಸಫೀರ್, ಕಲಾವಿದ ಬಾಶೆಟ್ಟಿಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

ಕಸಾಪ ಪದಾಧಿಕಾರಿಗಳು, ಎಚ್ಚೆಸ್ವಿ ಅಭಿಮಾನಿಗಳು ಅಗಲಿದ ಹಿರಿಯ ಕವಿಗೆ ಭಾವ ಶ್ರದ್ದಾಂಜಲಿ ಅರ್ಪಿಸಿ, ಎಚ್ಚೆಸ್ವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಾಗರತ್ನಮ್ಮ ಅವರು ಗೀತ ನಮನ ಸಲ್ಲಿಸಿದರು.

1ಕೆಡಿಬಿಪಿ5-

ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಪುರಭವನದಲ್ಲಿ ಹಿರಿಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ನುಡಿನಮನ ಕಾರ್ಯಕ್ರಮ ನಡೆಯಿತು.