ಎಚ್ಚೆಎಸ್‌ಆರ್‌ಪಿ ಕಡ್ಡಾಯ<bha>;</bha> ಸುಲಿಗೆ ಮಾಡುವ ದಂಧೆ

| Published : Dec 23 2023, 01:45 AM IST

ಸಾರಾಂಶ

ಉಭಯ ಸರ್ಕಾರಗಳು ವಾಹನ ಮಾಲೀಕರಿಗೆ ಇಲ್ಲಸಲ್ಲದ ನಿಯಮಗಳ ಹೇರಿ ರಿಫ್ಲೆಕ್ಟಿವ್ ಟೇಪ್, ಕ್ಯೂಆರ್ ಕೋಡ್, ಎಚ್ಎಸ್ಆರ್‌ ಪಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯದ ನಿಯಮಗಳು ವಾಹನ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿವೆ

ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ ಅಕ್ರೋಶ । ಲಾರಿ ಮಾಲೀಕರು, ಟ್ರಾನ್ಸಪೋರ್ಟ್ ಏಜೆಂಟರ್ ಸಂಘದಿಂದ ಪ್ರತಿಭಟನೆ ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ, ರಾಜ್ಯ ಸರ್ಕಾರಗಳು ವಾಹನ ಮಾಲೀಕರ ಮೇಲೆ ಇಲ್ಲಸಲ್ಲದ ನಿಯಮಗಳ ಹೇರುತ್ತಾ, ಸಂಕಷ್ಟಕ್ಕೀಡು ಮಾಡುವ ಜೊತೆಗೆ ರಿಫ್ಲೆಕ್ಟಿವ್ ಟೇಪ್ ಜೊತೆಗೆ ಕ್ಯೂಆರ್ ಕೋಡ್, ಎಚ್ಎಸ್ಆರ್‌ ಪಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯಗೊಳಿಸಿರುವುದು ಖಂಡಿಸಿ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸಪೋರ್ಟ್ ಏಜೆಂಟರ್ ಸಂಘ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ನಗರದ ದೇವರಾಜ ಅರಸು ಬಡಾವಣೆಯ ವರ್ತುಲ ರಸ್ತೆಗೆ ಹೊಂದಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಆವರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ನೀತಿ ವಿರುದ್ಧ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್‌ರ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸೈಯದ್ ಸೈಫುಲ್ಲಾ, ಉಭಯ ಸರ್ಕಾರಗಳು ವಾಹನ ಮಾಲೀಕರಿಗೆ ಇಲ್ಲಸಲ್ಲದ ನಿಯಮಗಳ ಹೇರಿ ರಿಫ್ಲೆಕ್ಟಿವ್ ಟೇಪ್, ಕ್ಯೂಆರ್ ಕೋಡ್, ಎಚ್ಎಸ್ಆರ್‌ ಪಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯದ ನಿಯಮಗಳು ವಾಹನ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿವೆ ಎಂದರು.

ರಿಫ್ಲೆಕ್ಟಿವ್ ಟೇಬ್ ಮಾರುಕಟ್ಟೆಯಲ್ಲಿ 53 ರು.ಗೆ ಲಭ್ಯವಿದ್ದು, ಅದನ್ನು ಕ್ಯೂಆರ್ ಕೋಡ್ ಎಂಬುದಾಗಿ ಯಾವುದೇ ರೀತಿಯ ಕೇಂದ್ರ, ರಾಜ್ಯ ಸರ್ಕಾರಗಳ ಮೋಟಾರು ವಾಹನಗಳ ಕಾಯ್ದೆಯಲ್ಲಿ ನಿಯಮ ಇಲ್ಲದಿದ್ದರೂ, ಇಂತಹ ಆದೇಶ ಹೊರಡಿಸಲಾಗಿದೆ. ಕೇವಲ 53 ರು.ಗೆ ಸಿಗುವ ರಿಫ್ಲೆಕ್ಟರ್ ಟೇಪನ್ನು ಸಾರಿಗೆ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಿ, 130 ರು.ಗೆ 1 ಮೀಟರ್‌ನಂತೆ ಕೆಲವು ಮಾರಾಟಗಾರರಿಗೆ ಸರ್ಕಾರದಿಂದ ಅಧಿಕೃತ ಮಾರಾಟಗಾರರೆಂದು ನೇಮಿಸಿ, ಜನರ ಸುಲಿಗೆ ಮಾಡುವ ದಂಧೆ ಶುರುವಾಗಿದೆ ಎಂದು ಆರೋಪಿಸಿದರು.

ರಾಜ್ಯ, ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಎಚ್ಎಸ್ಆರ್‌ಪಿ ಮಾನ್ಯತೆ ಪಡೆದಿದ್ದ ರಿಫ್ಲೆಕ್ಟಿವ್ ಟೇಪನ್ನು ವಾಹನಗಳಿಗೆ ಅಳವಡಿಸಬೇಕೆಂದಿದೆ. ಇದಕ್ಕೆ ಸುರಕ್ಷತೆ ದೃಷ್ಟಿಯಿಂದ ನಮ್ಮ ವಿರೋಧವಿಲ್ಲ. ಆದರೆ, ಕ್ಯೂಆರ್ ಕೋಡ್ ಯಾಕೆಂಬುದೇ ಅರ್ಥವಾಗುತ್ತಿಲ್ಲ. ಎಚ್ಎಸ್ಆರ್‌ ಪಿಯನ್ನು ಸರ್ಕಾರ ಎಲ್ಲಾ ವಾಹನಗಳಿಗೂ ಕಡ್ಡಾಯಗಳಿಸಿದ್ದು, ಇದರಿಂದ ವಾಹನ ಮಾಲೀಕರಿಗೆ ಯಾವ ರೀತಿ ಉಪಯೋಗ ಎಂಬುದು ಸ್ಪಷ್ಟಪಡಿಸಲಿ. ನಂಬರ್ ಪ್ಲೇಟ್ ಗುಣಮಟ್ಟದ ಬಹಳಷ್ಟು ಕೀಳುಮಟ್ಟದ್ದಾಗಿದ್ದು, ಇದರಿಂದ ಏನುಪಯೋಗ ಎಂದು ಪ್ರಶ್ನಿಸಿದರು.

ನಂಬರ್ ಪ್ಲೇಟ್ ತಯಾರಿಕೆಯನ್ನು ಕೆಲವೊಬ್ಬರಿಗೆ ಮಾತ್ರ ನೀಡಿದ್ದು, ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಡೀಲರ್ ಬಳಿ ಹೋಗಬೇಕಿರುವುದು ಎಷ್ಟರಮಟ್ಟಿಗೆ ಸರಿ? ನಂಬರ್ ಪ್ಲೇಟ್ ಅಳವಡಿಸಲು ಅದರ ವೆಚ್ಚ, ಸಮಯ, ಇಂಧನ ಖರ್ಚು ಯಾರು ಭರಿಸುತ್ತಾರೆ? ಭಾರೀ ವಾಹನಗಳಿಗೆ ಎಚ್ಎಸ್ಆರ್‌ಪಿ ಅಳವಡಿಸುವುದರಿಂದ ಕೀಳು ಮಟ್ಟವಾದ್ದರಿಂದ ಬೇಗ ಹಾಳಾಗುವುದರಲ್ಲಿ ಅನುಮಾನ ಇಲ್ಲ. ಹಾಳಾದರೆ ಮತ್ತೆ 1800 ರು. ವೆಚ್ಚವಾಗುತ್ತದೆ. 2018ರ ನಂತರ ವಾಹನಗಳಿಗೆ ನಿಮ್ಮ ಆದೇಶದ ಪ್ರಕಾರ ಹೊಸದಾಗಿ ಉತ್ಪಾದನೆಯಾಗುವ ವಾಹನಗಳಿಗೆ ಅಳವಡಿಸಿ, ಹಳೆಯ ವಾಹನಗಳಿಗೆ ಎಚ್ಎಸ್ಆರ್‌ಪಿಯಿಂದ ವಿನಾಯಿತಿ ನೀಡಬೇಕು ಎಂದು ಸೈಯದ್ ಸೈಫುಲ್ಲಾ ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಎಸ್‌.ಕೆ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಚ್.ಭೀಮಪ್ಪ, ಖಜಾಂಚಿ ಮಹಾಂತೇಶ ವಿ.ಒಣರೊಟ್ಟಿ, ನಿರ್ದೇಶಕರಾದ ವಿಜಯಕುಮಾರ, ಮುರುಗೇಶ ಸೋಗಿ, ಫಯಾಜ್‌, ರಫೀಕ್, ಶಫೀ, ಕಮರ್‌, ಖಾಸಗಿ ಬಸ್‌ ಮಾಲೀಕರಾದ ಮಲ್ಲೇಶಪ್ಪ, ಪ್ರಕಾಶ, ಗಫೂರ್, ಬಸವರಾಜ, ಲಾರಿ ಮಾಲೀಕರು, ಟ್ರಾನ್ಸ ಪೋರ್ಟ್ ಏಜೆಂಟರು, ಖಾಸಗಿ ಬಸ್‌ ಮಾಲೀಕರು, ಚಾಲಕರು, ನಿರ್ವಾಹಕರು ಇತರರಿದ್ದರು.